ಶ್ರೀನಿವಾಸಪುರ: ಅಂತರ್ಜಲ ವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದು ತಹಶೀಲ್ದಾರ್‌ ಕೆ.ಎನ್‌.ಸುಜಾತ ಹೇಳಿದರು.

ವರದಿ ಶಬ್ಬೀರ ಅಹ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಅಂತರ್ಜಲ ವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದು ತಹಶೀಲ್ದಾರ್‌ ಕೆ.ಎನ್‌.ಸುಜಾತ ಹೇಳಿದರು.

  ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಅಂತರ್ಜಲ ಕಚೇರಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಅಂತರ್ಜಲ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯ ಮುನಿಸು ಜೀವ ಸಂಕುಲಕ್ಕೆ ಶಾಪವಾಗಿ ಪರಿಣಸಿದೆ. ಮನುಷ್ಯನ ಸ್ವಾರ್ಥ ಸಮಸ್ಯೆಗಳನ್ನು ತಂದೊಡ್ಡಿದೆ. 1800 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ ಎಂದು ಹೇಳಿದರು.
    ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌ ಮಾತನಾಡಿ, ಜೀವ ಜಲ ರಕ್ಷಣೆ ಎಲ್ಲರ ಹೊಣೆ. ಉಳಿಸಿದ ನೀರು ಉಪಯೋಗಕ್ಕೆ ಬರುತ್ತದೆ. ಜಲ ಮೂಲಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಮಳೆ ನೀರು ಭೂಮಿ ಸೇರಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಬೇಕು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡಬೇಕು. ಮುಂದೆ ಗ್ರಾಮೀಣ ಪ್ರದೇಶದಲ್ಲೂ ಕಸ ನಿರ್ವಹಣೆಗೆ ಅಗತ್ಯವಾದ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.
  ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಧನಂಜಯ್ ಮಾತನಾಡಿ, ರೈತರು ಕೃಷಿ ಹೊಂಡಕ್ಕೆ ರಕ್ಷಣಾ ಗೋಡೆ ನಿರ್ಮಿಸಬೇಕು. ಮಕ್ಕಳು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುವ ಘಟನೆಗಳು ಹೆಚ್ಚುತ್ತಿವೆ. ಈ ಸಮಸ್ಯೆ ನಿವಾರಣೆಗೆ ಕೃಷಿ ಹೊಂಡದ ಸುತ್ತ ಮುಳ್ಳು ತಂತಿ ಬೇಲಿ ನಿರ್ಮಿಸಬೇಕು  ಎಂದು ಹೇಳಿದರು.
 ಜಿಲ್ಲಾ ಭೂ ವಿಜ್ಞಾನಿ ತಿಪ್ಪೆಸ್ವಾಮಿ, ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಎಚ್‌.ಟಿ.ಬಾಲಕೃಷ್ಣ, ಭೂ ವಿಜ್ಞಾನಿ ಎಂ.ವಿ.ಎಂ.ರಾಜು ಅಂತರ್ಜಲ ಅಭಿವೃದ್ಧಿ, ಸದ್ಬಳಕೆ, ಸಂರಕ್ಷಣೆ, ನಿರ್ವಹಣೆ ಮತ್ತು ನೀರಿನ ಮರು ಬಳಕೆ ಕುರಿತು ಮಾತನಾಡಿದರು.
  ಆರ್‌ಎಫ್‌ಒ ರಾಮಕೃಷ್ಣಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅಪ್ಪಿರೆಡ್ಡಿ, ಚೌಡಪ್ಪ ಮತ್ತಿತರರು ಇದ್ದರು.