ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಶ್ರೀನಿವಾಸಪುರ,ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣದ ಹಂತದಲ್ಲಿ ಗುಣಾತ್ಮಕ ಫಲಿತಾಂಶ ಪಡೆಯಬೇಕು:ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಶೈಲ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣದ ಹಂತದಲ್ಲಿ ಗುಣಾತ್ಮಕ ಫಲಿತಾಂಶ ಪಡೆಯಬೇಕು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಶೈಲ ಹೇಳಿದರು.
ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಜೀವನದಲ್ಲಿ ಮಹತ್ವ ಪಡೆಯಬೇಕು. ಗುರು ಹಿರಿಯರನ್ನು ಗೌರವಿಸುವ ಭಾರತೀಯ ಸಂಪ್ರದಾಯ ಮುಂದುವರಿಯಬೇಕು. ಶಿಸ್ತು ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದರು.
ಪ್ರಾಂಶುಪಾಲ ಎ.ಲಕ್ಷ್ಮೀನಾರಾಯಣಮೂರ್ತಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರು ಈ ಪದವಿ ಪೂರ್ವ ಕಾಲೇಜು, ಯಾವುದೇ ಖಾಸಗಿ ಕಾಲೇಜಿಗಿಂತ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ. ಸಮುದಾಯ ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸಿದೆ. ಬೋಧಕ ವರ್ಗ ಸೇವಾ ಮನೋಭಾದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಹಾಗೂ ಸಮಾಜ ಸೇವಕ ಬಷೀರ್ ಅಹ್ಮದ್ ಮಾತನಾಡಿ, ಈ ಹಳ್ಳಿ ಕಾಲೇಜನ್ನು ರಾಜ್ಯದಲ್ಲಿಯೇ ಉತ್ತಮ ಕಾಲೇಜನ್ನಾಗಿ ರೂಪಿಸಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳಲ್ಲಿ ದೇಶ ಪ್ರೇಮ ತುಂಬಿದಲ್ಲಿ, ಅವರ ನಡೆ ನುಡಿ ಸಾಮಾಜಿಕವಾಗಿ ಉತ್ತಮಗೊಳ್ಳುತ್ತದೆ. ಮಕ್ಕಳಿಗೆ ಊಟ ನೀಡಲು ಶಿಕ್ಷಣ ಪ್ರೇಮಿ ದಾನಿಗಳು ಮುಂದಾಗಿದ್ದಾರೆ. ಹಾಗೆಯೇ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ನಿವೃತ್ತ ನಾಯಾಧೀಶ ಚೌಡಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೈದಾಬಿ, ಅಕ್ಷರ ದಾಸೋಹ ಯೋಜನೆಯ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಅಬ್ದುಲ್ ರಜಾಕ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಭಾರತೀಯ ಸೇವಾದಳದ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಆರ್.ರವಿಕುಮಾರ್, ಉಪನ್ಯಾಸಕರಾದ ಡಾ. ಶೇಷಗಿರಿರಾವ್, ಸೀನಪ್ಪ, ಶಿವರಾಜ್, ಮಮತ, ಲೋಕೇಶ್, ರೇಣುಕಾ, ಎಂ.ಆರ್.ಮುನಿರೆಡ್ಡಿ, ಶ್ರೀನಿವಾಸಯ್ಯ, ಸರಸ್ವತಿ ಇದ್ದರು.