ಶ್ರೀನಿವಾಸಪುರದ ಪ್ರವಾಸಿ ಮಂದಿರದಲ್ಲಿ  ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು.

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

 

ಶ್ರೀನಿವಾಸಪುರದ ಪ್ರವಾಸಿ ಮಂದಿರದಲ್ಲಿ  ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು.

ಶ್ರೀನಿವಾಸಪುರ: ಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳೂರು ಘಟನೆಗೆ ಸಂಬಂಧಿಸಿದಂತೆ ನಕಲಿ ಸಿಡಿ ಬಿಡುಗಡೆ ಮಾಡುವುದರ ಮೂಲಕ ಸರ್ಕಾರ ಹಾಗೂ ಪೊಲೀಸ್‌ ವಿರುದ್ಧ ಮಿಥ್ಯಾರೋಪ ಮಾಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಪಾದಿಸಿದರು.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯ ಮಂತ್ರಿಯಾಗಿದ್ದವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕಟ್‌ ಅಂಡ್‌ ಪೇಸ್ಟ್‌ ಸಿಡಿ ಬಿಡುಗಡೆ ಮಾಡಿ ಸರ್ಕಾರ ಹಾಗೂ ಪೊಲೀಸರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ. ಅವರು ಯಾವುದನ್ನೂ ಗುರಿ ಮುಟ್ಟಿಸುವುದಿಲ್ಲ. ಬ್ಲಾಕ್‌ ಮೇಲ್‌ ಮಾಡುತ್ತಾರೆ ಎಂದು ಟೀಕಿಸಿದರು.

  ಈ ಹಿಂದೆ ನೈಸ್‌ ರಸ್ತೆ ವ್ಯವಹಾರಕ್ಕೆ ಸಂಬಂಧಿಸಿದಂತೆ, ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್‌, ಡಿ.ಕೆ.ಶಿವಕುಮಾರ್‌ ಮೇಲೆ ಮಾಡಿದ ಭ್ರಷ್ಟಾಚಾರ ಆರೋಪ ಹೀಗೆ ಯಾವುದೇ ಆರೋಪವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಎಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದಷ್ಟೇ ಅವರಿಗೆ ಗೊತ್ತು. ಆದ್ದರಿಂದಲೇ ನಾಡಿನ ಜನರು ಕುಮಾರಸ್ವಾಮಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

  ಸಿಎಎ ವಿಚಾರದಲ್ಲಿ ಕಾಂಗ್ರೆಸ್ ಪರ ಮತದಾರ ಒಲವು ಹೆಚ್ಚಿರುವುದನ್ನು ಸಹಿಸದೆ ಮಂಗಳೂರು ಘಟನೆಗೆ ಸಂಬಂಧಿಸಿದಂತೆ ಗೊಂದಲ ಉಂಟು ಮಾಡುತ್ತಿದ್ದಾರೆ. ಜೆಡಿಎಸ್‌ ಮತ ಬ್ಯಾಂಕ್‌ ಕುಸಿದಿದೆ. ಅಲ್ಪ ಸಂಖ್ಯಾತರನ್ನು ಓಲೈಸಲು ಕೀಳು ಮಟ್ಟದ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.

  ಕೋಲಾರದಲ್ಲಿ ಸಿಸಿಎ ಪ್ರತಿಭಟನೆಯಲ್ಲಿ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದ ಅಕ್ಷಮ್ಯ ಅಪರಾಧ. ಪೊಲೀಸ್‌ ಇಲಾಖೆ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಎಡವಿದೆ. ಲಾಠಿ ಚಾರ್ಜ್‌ ಮಾಡಲು ಆದೇಶ ನೀಡಿದವರ ಹಾಗೂ ಲಾಠಿ ಚಾರ್ಜ್‌ ಮಾಡಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

  ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌, ಮುಖಂಡರಾದ ಜಯರಾಮರೆಡ್ಡಿ, ಇ.ಶಿವಣ್ಣ, ವೆಂಕಟೇಗೌಡ, ನಾರಾಯಣಸ್ವಾಮಿ, ರವೀಂದ್ರಗೌಡ ಇದ್ದರು.