ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಶ್ರೀನಿವಾಸಪುರ: ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದರ ಮೂಲಕ ಅನಿವಾರ್ಯ ಸಂದರ್ಭದಲ್ಲಿ ಜೀವ ಉಳಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಬಿಜೆಪಿ ವತಿಯಿಂದ ನಾಲ್ಕು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ರಾಷ್ಟ್ರೋತ್ಥಾನ ರಕ್ತನಿಧಿಗೆ ರಕ್ತ ಸಂಗ್ರಹಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.
ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ, ದೇಶದಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಸಮಯಕ್ಕೆ ಸರಿಯಾಗಿ ಅಗತ್ಯವಾದ ರಕ್ತ ಸಿಗದೆ ಸಾವನ್ನಪ್ಪುವ ಸಂದರ್ಭಗಳೂ ಇರುತ್ತವೆ. ಇಂಥ ಪರಿಸ್ಥಿತಿಯನ್ನು ತಪ್ಪಿಸಲು ಯುವ ಸಮುದಾಯ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಸಾರ್ವಜನಿಕರು ರಕ್ತದಾನ ಮಾಡುವುದರ ಬಗ್ಗೆ ಇರುವ ತಪ್ಪು ತಿಳುವಳಿಕೆ ಬಿಡಬೇಕು. ಆರೋಗ್ಯವಂತ ಅರ್ಹ ವ್ಯಕ್ತಿ ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಕೊಟ್ಟಷ್ಟು ರಕ್ತ ಮತ್ತೆ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಅಪಘಾತ ಸಂಭವಿಸಿದಾಗ ಅಥವಾ ಇತರ ಅನಿವಾರ್ಯ ಸಂದರ್ಭದಲ್ಲಿ ಅಗತ್ಯ ಗುಂಪಿನ ರಕ್ತ ಸಿಗದಿದ್ದರೆ ಜೀವ ರಕ್ಷಣೆ ಕಷ್ಟವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಎಂ.ಲಕ್ಷ್ಮಣಗೌಡ, ಜಯರಾಮರೆಡ್ಡಿ, ವೆಂಕಟೇಗೌಡ, ರಾಮಾಂಜಿ, ನಾಗರಾಜ್, ಸುರೇಶ್, ನಾರಾಯಣಸ್ವಾಮಿ, ಯಲ್ದೂರು ಪದ್ಮನಾಭ್, ಸುನಿಲ್ ಇದ್ದರು.
ಶಿಬಿರದಲ್ಲಿ 100ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.