ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಸಮಾವೇಶ ಉದ್ಘಾಟಿಸಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬೈಯ್ಯಾರೆಡ್ಡಿ ಮಾತನಾಡಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಸಮಾವೇಶ ಉದ್ಘಾಟಿಸಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬೈಯ್ಯಾರೆಡ್ಡಿ ಮಾತನಾಡಿದರು.
ಶ್ರೀನಿವಾಸಪುರ: ಕೃಷಿಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಕೋಳಿ ಸಾಕಾಣಿಕೆದಾರರಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬೈಯ್ಯಾರೆಡ್ಡಿ ಒತ್ತಾಯಿಸಿದರು.
  ಇಲ್ಲಿ ಏರ್ಪಡಿಸಿದ್ದ ತಾಲ್ಲೂಕು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಈಗ ಕೋಳಿ ಸಾಕಾಣಿಕೆ ನಷ್ಟದ ಕಸುಬಾಗಿ ಪರಿಣಮಿಸಿದೆ. ಕಂಪನಿಗಳು ಲಾಭ ಮಾಡಿಕೊಳ್ಳುತ್ತಿವೆ. ಕೋಳಿ ಸಾಕುವ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. 
 ಈಗ ಕಂಪನಿಗಳು ಕೊಡುತ್ತಿರುವ ಅತ್ಯಲ್ಪ ಬೆಲೆಯಲ್ಲಿ ಸಾಕಾಣಿಕೆ ಸಾಧ್ಯವಾಗುವುದಿಲ್ಲ. ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸಿದಲ್ಲಿ, ರಿಯಾತಿ, ನಷ್ಟ ಪರಿಹಾರ, ಸಾಲ ಸೌಲಭ್ಯ ಮುಂತಾದ ಸೌಲಭ್ಯಗಳು ದೊರೆಯುತ್ತವೆ. ಗರಿಷ್ಟ 30 ಸಾವಿರ ಕೋಳಿ ಸಾಕುವ ಫಾರಂಗಳನ್ನು ಕೃಷಿ ವ್ಯಾಪ್ತಿಗೆ ಸೇರಿಸಲು ಸರ್ಕಾರವನ್ನು ಕೋರಲಾಗಿದೆ. ರಾಜ್ಯದಲ್ಲಿ 1ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಕೋಳಿ ಸಾಕಾಣಿಕೆ ಮೇಲೆ ಆಧಾರಪಟ್ಟಿವೆ ಎಂದು ಹೇಳಿದರು.
  ಸರ್ಕಾರದ ಸೌಲಭ್ಯ ಪಡೆಯಲು ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗಿದೆ. ಅದಕ್ಕೆ ಎಲ್ಲ  ಕೋಳಿ ಸಾಕಾಣಿಕೆದಾರರು ಒಗ್ಗೂಡಬೇಕು. ಡಿಸೆಂಬರ್‌ ಅಂತ್ಯದ ವೇಳೆಗೆ ಕೋಳಿ ಸಾಕಾಣಿಕೆದಾರರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ, ವಿಧಾನ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
  ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್‌.ಸೂರ್ಯನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ 500 ಕೋಳಿ ಸಾಕಾಣಿಕಾ ಫಾರಂಗಳಿವೆ. ಕೋಳಿ ಸಾಕಾಣಿಕೆಗೆ ಯುವಕರು ಹೆಚ್ಚಿನ ಒಲವು ತೊರುತ್ತಿದ್ದಾರೆ. ಆದರೆ ಕೋಳಿ ವಹಿವಾಟು ಮಾಡುವ ಕಂಪನಿಗಳು ರೈತರ ಶ್ರಮಕ್ಕೆ ತಕ್ಕಂತೆ ಹಣ ನೀಡುತ್ತಿಲ್ಲ. ಸರ್ಕಾರದ ರೈತ ವಿರೋಧಿ ನಿಲುವು ಹೊಂದಿದ್ದು, ಕೋಳಿ ಸಾಕಾಣಿಕೆದಾರರು ಅನಾಥರಾಗಿದ್ದಾರೆ ಎಂದು ಹೇಳಿದರು.
  ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಜೆ.ಸಿ.ಮಂಜುನಾಥ್‌, ಜಿಲ್ಲಾಧ್ಯಕ್ಷ ಮುನಿವೆಂಕಟೇಗೌಡ, ಕಾರ್ಯದರ್ಶಿಗಳಾದ ಗೋಪಅಲ್‌, ಎ.ವಿ.ಅನಿಲ್‌ ಕುಮಾರ್‌, ಕೋಚಿಮುಲ್‌ ಮಾಜಿ ನಿರ್ದೇಶಕ ಮುನಿವೆಂಕಟರೆಡ್ಡಿ ಕೋಳಿ ಸಾಕಾಣಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. 
 ತಾಲ್ಲೂಕು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್‌.ತಿಮ್ಮರಾಯಪ್ಪ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾತಕೋಟ ನವೀನ್‌ ಕುಮಾರ್‌, ಮಾಜಿ ಅಧ್ಯಕ್ಷ ಎನ್‌.ವೀರಪ್ಪರೆಡ್ಡಿ, ಬಿ ಎ ಸೈಯದ್ ಫಾರೂಕ್, ಮಖಂಡರಾದ ವಿಶ್ವನಾಥ್‌, ರಾಮಕೃಷ್ಣೇಗೌಡ ಇದ್ದರು.