ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿಯಾಗಲು ಸಚಿವ ಸಂಪುಟ ಅನುಮೋದಿಸಿ ಕಳುಹಿಸಿದ್ದ ಡ್ರಾಪ್ಟ್ ನೋಟಿಫಿಕೇಷನ್ಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ನಗರಾಭಿವೃದ್ದಿ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದ್ದಾರೆ.
ಜಿಲ್ಲೆಯ ಏಕೈಕ ಪಟ್ಟಣ ಪಂಚಾಯಿತಿಯಾಗಿ ವೇಮಗಲ್-ಕುರಗಲ್ ಘೋಷಣೆಯಾಗಿದ್ದು, ಈ ಭಾಗದ ಸಮಗ್ರ ಅಭಿವೃದ್ದಿಗೆ ಅವಕಾಶಗಳು ಒದಗಿ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪಂಚಾಯಿತಿಯಾಗಲು ಕಾರಣರಾದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವ ಸಂಪುಟ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಕೋಲಾರ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ ಸೇರಿದಂತೆ ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಅಗತ್ಯವಿರುವ ಸಿಬ್ಬಂದಿ ವರ್ಗದ ನೇಮಕ ಆಡಳಿತ, ಅನುದಾನವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪಟ್ಟಣ ಪಂಚಾಯಿತಿ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು, ಸಹಕಾರ ನೀಡುವಂತೆ ಮನವಿ ಮಾಡಿರುವ ಅವರು ಶೀಘ್ರ ಪಟ್ಟಣ ಪಂಚಾಯಿತಿ ಅಸ್ಥಿತ್ವಕ್ಕೆ ಬರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿ ಎಂದು ಆಶಿಸಿದ್ದಾರೆ.
ವರ್ತೂರು ಅಪಹರಣ ಘಟನೆಗೆ ತೀವ್ರ ಖಂಡನೆ
ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಹಾಗೂ ಹಲ್ಲೆ ಘಟನೆ ಅಮಾನವೀಯ ಎಂದು ಖಂಡಿಸಿರುವ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಖಂಡನೀಯ, ಈ ಘಟನೆಗೆ ಯಾರೇ ಕಾರಣರಾಗಿರಲಿ ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು, ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದರು
ವರ್ತೂರು ಪ್ರಕಾಶ್ ಅವರು ಎದೆಗುಂದದೇ ತಮ್ಮ ಸಾರ್ವಜನಿಕ ಜೀವನವನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಹಾರೈಸಿದ್ದಾರೆ.
ನಿಗಮ ಘೋಷಣೆ ತಾರತಮ್ಯ ಬೇಡ
ರಾಜ್ಯ ಸರ್ಕಾರ ವಿವಿಧ ಸಮುದಾಯಗಳ ಅಭಿವೃದ್ದಿಗಾಗಿ ನಿಗಮಗಳನ್ನು ಮಾಡುವಾಗ ತಾರತಮ್ಯ ಮಾಡಬಾರದು, ಸಮಾಜ,ರಾಜ್ಯದ ಹಿತದೃಷ್ಟಿಯಿಂದ ಎಲ್ಲಾ ಸಮುದಾಯಗಳು,ವರ್ಗಗಳು, ವೃತ್ತಿಗಳಿಗೆ ಸಂಬಂಧಿಸಿದ ಅಗತ್ಯವಾದ ನಿಗಮಗಳನ್ನು ರಚಿಸಬೇಕು ಎಂದು ಸುದರ್ಶನ್ ಒತ್ತಾಯಿಸಿದ್ದಾರೆ.
ಬಡವರು,ನಿರ್ಲಕ್ಷಿತ ಸಮುದಾಯಗಳು ಸಾಮಾಜಿಕವಾಗಿ,ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಲು ಅಗತ್ಯವಾದ ನಿಗಮಗಳ ರಚನೆಗೆ ಒತ್ತಾಯಿಸಿರುವ ಅವರು, ಈ ಕಾರ್ಯದಲ್ಲಿ ತಾರತಮ್ಯಕ್ಕೆ ಅವಕಾಶ ನೀಡದಿರಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈ ಹಿಂದೆ ಜಾತಿ ಜನಗಣತಿ ನಡೆಸಿ ವರದಿ ತಯಾರಿಸಿದೆ, ಈ ವರದಿಯನ್ನು ಬರಲಿರುವ ಅಧಿವೇಶನದಲ್ಲಿ ಮತ್ತು ಸಂಪುಟದಲ್ಲಿ ಚರ್ಚಿಸಿ ಉಪಯುಕ್ತವಾಗುವ ಸಲಹೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ವರದಿ ಆಧಾರದ ಮೇಲೆ ಯಾವ್ಯಾವ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕ,ಆರ್ಥಿಕ,ರಾಜಕೀಯವಾಗಿಮತ್ತು ಜನಸಂಖ್ಯೆ ಅಂಕಿ ಅಂಶಗಳ ಆಧಾರದ ಮೇಲೆ ಬಜೆಟ್ನಲ್ಲಿ ಕಾಯಕ್ರಮಗಳ ಘೋಷಣೆಯ ಜತೆಗೆ ಯಾವುದೇ ತಾರತಮ್ಯ ಮತ್ತು ರಾಜಕಾರಣದ ಗೋಜಲಿಲ್ಲದೇ ನಿಗಮಗಳ ರಚಿಸುವುದು ರಾಜ್ಯದ ಹಿತದೃಷ್ಟಿಯಿಂದ ಸೂಕ್ತ ಎಂದು ಒತ್ತಾಯಿಸಿದ್ದಾರೆ.