ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ವಿಕಲ ಚೇತನರ ಕ್ಷೇಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಜಿಲ್ಲಾಧಿಕಾರಿ ಬಿ.ಎಂ.ಮುನಿರಾಜು ಹೇಳಿದರು.
ಪಟ್ಟಣದಲ್ಲಿ ಸೊಮವಾರ ಏರ್ಪಡಿಸಿದ್ದ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಅಂಗವಿಲತೆ ಶಾಪವಲ್ಲ. ಅದೊಂದು ಸಾಮಾನ್ಯ ಅಂಗ ವೈಕಲ್ಯ ಮಾತ್ರ. ಅಂಗವಿಕಲರು ಕೀಳರಿಮೆ ತಳೆಯದಂತೆ ನೋಡಿಕೊಳ್ಳಬೇಕು. ಅವರಲ್ಲಿನ ವಿಶೇಷವಾದ ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಅಂಗವಿಕಲರಿಗೆ ಶೇ.5 ರಷ್ಟು ಮೀಸಲಾತಿ ಇದೆ. ಸರ್ಕಾರ ಹಲವು ಬಗೆಯ ಸೌಲಭ್ಯ ಕೊಡುತ್ತಿದೆ. ಪುನರ್ವಸತಿ ಕಾರ್ಯಕರ್ತರು ಸರ್ಕಾರದ ಸೌಲಭ್ಯಗಳು ಅಂಗವಿಕಲರಿಗೆ ದೊರೆಯುವಂತೆ ನೋಡಿಕೊಳ್ಳಬೇಕು. ಕಾರ್ಯಕರ್ತರು ಕೋವಿಡ್–19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇವರನ್ನೂ ಸಹ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಜಿಲ್ಲಾ ವಿಕಲ ಚೇತನರ ಸಂಘದ ಅಧ್ಯಕ್ಷ ವೈ.ವಿ.ಶ್ರೀನಿವಾಸಗೌಡ ಮಾತನಾಡಿ, ಉತ್ತಮ ಸೇವೆ ಸಲ್ಲಿಸಲು ಅಗತ್ಯವಾದ ಮಾರ್ಗದರ್ಶನ ನೀಡಿದರು.