ವಿಕಲಚೇತನರು ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಬಳಸಿ,ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಕಡೆಗೆ ಸಾಗಬೇಕು : ಸಿ.ಹೆಚ್ ಗಂಗಾಧರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಡಿ.3: ಜಿಲ್ಲೆಯ ವಿಕಲಚೇತನರು ಸಂಬಂಧಪಟ್ಟ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳವ ಮೂಲಕ ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಕಡೆಗೆ ಸಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಹೆಚ್ ಗಂಗಾಧರ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರ ದಿನಾಚರಣೆ-2020 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, 2016ರ ಅಧಿನಿಯಮ ಕಾನೂನು ಅನುಷ್ಟಾನಗೊಂಡಿದೆ ವಿಕಲಚೇತನರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬೇಟಿ ನೀಡಿ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಂ.ಜಿ ಪಾಲಿ ಮಾತನಾಡಿ, ವಿಕಲಚೇತನರಿಗೆ ವಿವಿಧ ರೀತಿಯ ಸಮಸ್ಯೆಗಳಿದ್ದು, ಯು.ಡಿ.ಐ.ಡಿ ಗುರುತಿನ ಚೀಟಿಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ಸಮಸ್ಯೆಗಳ ಪರಿಹಾರ ಹಾಗೂ ಇಲಾಖೆಯ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಅಂಗವಿಲಕರ ಹಕ್ಕು ಕಾಯ್ದೆಯಡಿ ವಿಕಲಚೇತನರಿಗೂ ಸಮಾನ ಅವಕಾಶ ಇದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜಾಗೃತರಾಗಿ ಇತರರಿಗೆ ತಾವೇ ಅರಿವು ಮೂಡಿಸಬೇಕೆಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಮಾತನಾಡಿ, ಇಲಾಖೆಯಿಂದ ಈಗಾಗಲೇ ವಿಕಲಚೇತನರಿಗೆ ಯಂತ್ರಚಾಲಿತ ವಾಹನಗಳನ್ನು ನೀಡಿದ್ದು, ಉಳಿದ ವಿಕಲಚೇತನರಿಗೂ ಅವರಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಇಲಾಖೆಯು ಮುಂದಾಗಬೇಕೆಂದರು.
ವಿಕಲಚೇತನರು ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಯಾವುದೇ ಅನ್ಯಾಯವಾದಲ್ಲಿ ಅದನ್ನು ಪ್ರಶ್ನಿಸುವ ಮನೋಬಾವವನ್ನು ಬೆಳೆಸಿಕೊಂಡು ಇಲಾಖೆ ವತಿಯಿಂದ ದೊರೆಯುವ ಎಲ್ಲಾ ಸೌಲತ್ತುಗಳನ್ನು ಸದುಪಯೋಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸ್ವಾವಲಂಭಿ ಜೀವನಕ್ಕೆ ಮುಂದಾಗಬೇಕೆಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ, ಅಂಗವಿಕಲರಿಗೆ ವಿಕಲಚೇತನತೆ ಎಂಬುದು ಶಾಪವಲ್ಲ. ತಮಗೆ ಅಂಗವಿಕಲತೆ ಇದೆ ಎಂಬ ಕೊರಗಿನಿಂದ ಹೊರ ಬಂದು ಸಮಾಜದಲ್ಲಿ ನಾವು ಎಲ್ಲರಲ್ಲೂ ಒಬ್ಬರಂತೆ ಜೀವನ ನಡೆಸುವುದನ್ನು ರೂಡಿಸಿಕೊಳ್ಳುವ ಮೂಲಕ ನಾವು ಸಹ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಧನೆಯ ಮೂಲಕ ಕೇಳುತ್ತಿದ್ದೇವೆ ಹಾಗೂ ನೋಡುತ್ತಿದ್ದೇವೆ ಎಂದು ಪ್ರಶಂಸಿಸಿದರು.


ಕಾರ್ಯಕ್ರಮದಲ್ಲಿ ವಕೀಲ ಕೆ.ಆರ್ ಧನರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪದಾಧಿಕಾರಿಗಳು, ಕಾನೂನು ಸೇವೆಗಳ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಎಂ.ಮುನಿರಾಜಪ್ಪ ಸ್ವಾಗತಿಸಿ, ವಂದಿಸಿದರು.