JANANUDI.COM NETWORK

‘ಮೋದಿ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಮತ್ತು ಲಾಕ್ಡೌನ್ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಪ್ರಧಾನಿ ಮೋದಿಯವರು ಕೊರೊನಾ ನಿಯಂತ್ರಣಕ್ಕೆ ಕೊಟ್ಟ ಚಪ್ಪಾಳೆ ತಟ್ಟುವಿಕೆ, ಜಾಗಟೆ ಬಾರಿಸುವಿಕೆ ಕ್ಯಾಂಡೆಲ್ ಹಚ್ಚುವಿಕೆಯಂತಹ ಕಾರ್ಯಕ್ರಮಗಳಿಂದ ಜನರಿಗೇನೂ ಲಾಭವಾಗಲಿಲ್ಲ. ಬದಲಾಗಿ ಅದರಿಂದ ಕೊರೊನಾ ಹರಡುವಿಕೆ ಜಾಸ್ತಿಯಾಯಿತು.
“ಆದರೆ ನಿಜಕ್ಕೂ ಲಾಕ್ಡೌನ್ ನ ಸಂದೀಗ್ಧ ಸಮಯದಲ್ಲಿ ಜನರಿಗೆ ಉಪಯೋಗಕ್ಕೆ ಬಂದದ್ದು ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ್ದ ಅನ್ನಭಾಗ್ಯದ ಅಕ್ಕಿ. ಅದು ಒಂದೊತ್ತಿನ ಊಟಕ್ಕೂ ತತ್ವಾರವಾಗಿದ್ದ ಅದೆಷ್ಟೋ ಜನರು ಹಸಿವಿನಿಂದ ಬಳಲುವುದನ್ನು ತಪ್ಪಿಸಿತು. ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ಮುಂದಾಲೋಚನೆಯಿಂದ ಮಾಡಿದ ಆಶಾ ಕಾರ್ಯಕರ್ತೆಯರ ನೇಮಕದಿಂದಾಗಿ ಕೊರೊನಾ ಸಮಯದಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೋಲೀಸ್ ಇಲಾಖೆ ಒಟ್ಟಾರೆಯಾಗಿ ಇಡೀ ಆಡಳಿತಕ್ಕೆ ಆನೆಬಲ ದೊರೆತಂತಾಗಿತ್ತು. ಕಾಂಗ್ರೆಸ್ ಪಕ್ಷದ ನರೇಗಾ ದಂತಹ ಯೋಜನೆಗಳಿಂದಾಗಿ ಕೊರೋನಾ ಲಾಕ್ಡೌನ್ ನಂತರದ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆಯುವಂತಾಯಿತು“
ಆದರೆ ಆಡಳಿತ ಪಕ್ಷ ಬಿಜೆಪಿ ಇಂತಹ ಸಂದೀಗ್ದ ಸಮಯದಲ್ಲಿ ಜನರ ರಕ್ಷಣೆಗೆ ಮುಂದಾಗದೆ ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಖರೀದಿಯಲ್ಲಿ ಹಣ ಲೂಟಿ ಹೊಡೆಯುವುದರಲ್ಲಿ ತಲ್ಲೀನವಾಗಿತ್ತು. ಯಡಿಯೂರಪ್ಪ ಮತ್ತು ಮೋದಿ ಸರ್ಕಾರದ ಬಳಿ ಜನಪರ ಯೋಜನೆಗಳಿಗೆ, ಪರಿಹಾರ ವಿತರಣೆಗೆ ಹಣ ಇಲ್ಲ. ಆದರೆ ಇತರ ಪಕ್ಷಗಳ ಸದಸ್ಯರನ್ನು ಖರೀದಿಸಲು ಬೇಕಾದಷ್ಟು ಹಣ ಇದೆ. ಕರ್ನಾಟಕ ಮುಂತಾದ ಹಲವಾರು ರಾಜ್ಯಗಳಲ್ಲಿ ಬಿಜೆಪಿಗೆ ಜನಾದೇಶ ಇಲ್ಲ, ಕೋಟಿಗಟ್ಟಲೆ ಹಣ ಸುರಿದು ಅದು ಆಪರೇಶನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದೆ. ಬಿಜೆಪಿಯ ಆಡಳಿತದಲ್ಲಿ 18 ಕೋಟಿಗೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದಲ್ಲಿ ಕಳೆದ 45ವರ್ಷಗಳ ಹಿಂದಿನ ಮಟ್ಟದ ನಿರುದ್ಯೋಗ ಸಮಸ್ಯೆ ನಿರ್ಮಾಣ ಆಗಿದೆ. ದೇಶದ ಜಿಡಿಪಿ -23.9% ಗೆ ಕುಸಿದಿದೆ. ಏರ್ಪೋರ್ಟ್ ಮುಂತಾದ ಸರ್ಕಾರಿ ಆಸ್ತಿಗಳನ್ನು ಮೋದಿಯವರ ಉದ್ಯಮಿ ಮಿತ್ರರಾದ ಅಂಬಾನಿ, ಅದಾನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಧರ್ಮ ಧರ್ಮಗಳ ನಡುವೆ ಕೋಮು ವೈಷಮ್ಯ ಹುಟ್ಟಿಸಲಾಗುತ್ತಿದೆ. ಸ್ವಾತಂತ್ರ್ಯಾ ನಂತರದ ಈ ಎಪ್ಪತ್ತು ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊಟ್ಟಿದೆ. ಈ ದೇಶದ 80% ಬಿಪಿಎಲ್ ಕಾರ್ಡ್ ಒದಗಿಸಿದ್ದು ಕಾಂಗ್ರೆಸ್. ಮೋದಿ ಅವಧಿಯಲ್ಲಿ ಕಾರ್ಮಿಕರ ವಿರುದ್ದವಾಗಿ ಕಾನೂನು ಬದಲಾವಣೆ ಮಾಡಲಾಗಿದೆ. ಕಾಂಗ್ರೆಸ್ ಮಾಡಿದ್ದ ಕೆಲಸದ ಅವಧಿ 8ಗಂಟೆಯಿಂದ 12 ಗಂಟೆಗಳಿಗೆ ಏರಿಸಲಾಗಿದೆ. ಇದು ಮಾನವ ವಿರೋಧಿ ಸಿದ್ಧಾಂತದ ಸರ್ಕಾರವಾಗಿದೆ. ದೇಶದಾದ್ಯಂತ ಬಿಜೆಪಿ ವಿರೋಧಿ ಅಲೆ ಇದೆ, ಗ್ರಾಮ ಪಂಚಾಯತ್ ಚುನಾವಣೆಯ ಈ ಸಂಧರ್ಭದಲ್ಲಿ ಆ ಬಿಜೆಪಿ ವಿರೋಧಿ ಅಲೆಯನ್ನು ಕಾಂಗ್ರೆಸ್ ಪಕ್ಷ ಉಪಯೋಗಿಸಿಕೊಳ್ಳಬೇಕು. ಗ್ರಾಮ ಪಂಚಾಯತಿ ಅಭ್ಯರ್ಥಿಗಳಿಗೆ ಇದೀಗ ಅಮಿಷ ಒಡ್ಡುವ, ಬೆದರಿಕೆ ಹಾಕುವ ಕಾರ್ಯ ಆರಂಭಗೊಂಡಿದೆ. ಇದನ್ನು ನಾವು ಎದುರಿಸುವ ಕೆಲಸ ಮಾಡಬೇಕಾಗಿದೆ’ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿ ಚುನಾವಣಾ ಉಸ್ತುವಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಇಂದು ಕುಂದಾಪುರದ ಆರ್ ಎನ್ ಶೆಟ್ಟಿ ಹಾಲ್ ನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
‘ವಿನಯ ಕುಮಾರ್ ಸೊರಕೆಯವರ ಉಸ್ತುವಾರಿ ದೊರೆತಿರುವುದರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಆನೆಬಲ ದೊರೆತಂತಾಗಿದೆ. ಇದೀಗ ಕುಂದಾಪುರ ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣ ಏರ್ಪಟ್ಟಿದೆ. ಪಂಚಾಯತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಪಕ್ಷ ರೈತಪರವಾದ ಭೂಮಸೂದೆ ಕಾಯಿದೆ ಜಾರಿಗೊಳಿಸಿದ್ದರೆ ಬಿಜೆಪಿ ಅದನ್ನು ರೈತವಿರೋಧಿಯಾಗಿ ತಿದ್ದುಪಡಿ ಮಾಡಿದೆ ಅದನ್ನು ಇದೀಗ ದೇಶಾದ್ಯಂತ ರೈತರು ವಿರೋಧಿಸುತ್ತಿದ್ದಾರೆ. ತಿದ್ದುಪಡಿ ಮಸೂದೆಯ ದುಷ್ಪರಿಣಾಮದ ಕುರಿತು ಬೂತ್ ಮಟ್ಟದಲ್ಲಿ ಜನರಿಗೆ ತಿಳಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಎಫ್ಡಿಸಿ ಮಾಜಿ ಅಧ್ಯಕ್ಷ ಬಿ. ಹೆರಿಯಣ್ಣ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದೇವಾನಂದ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಪುತ್ರನ್, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಶೋಕ್ ಪೂಜಾರಿ, ಯುವ ಕಾಂಗ್ರೆಸ್ ನ ಇಚ್ಚಿತಾರ್ಥ ಶೆಟ್ಟಿ, ಮುಖಂಡರಾದ ಜಾನಕಿ ಬಿಲ್ಲವ ಮುಂತಾದವರು ಉಪಸ್ಥಿತರಿದ್ದರು.
ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಸ್ವಾಗತಿಸಿದರು. ಬ್ಲಾಕ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ನಾರಾಯಣ ಆಚಾರ್ ವಂದಿಸಿದರು.