ರೈತರು ಬೆಳೆ ನಷ್ಟ ಪರಿಹಾರಕ್ಕಾಗಿ ಕರ್ನಾಟಕ ರೈತ ಸುರಕ್ಷ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಬೇಕು : ಎಂ.ಧನಂಜಯ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ರೈತರು ಅನಿರೀಕ್ಷಿತ ಬೆಳೆ ನಷ್ಟ ಪರಿಹಾರ ಪಡೆಯಲು ಕರ್ನಾಟಕ ರೈತ ಸುರಕ್ಷ, ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ವಿಮೆ ಮಾಡಿಸಬೇಕು ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಧನಂಜಯ್ ತಿಳಿಸಿದ್ದಾರೆ.  ರಾಗಿ, ಭತ್ತ, ನೆಲಗಡಲೆ, ತೊಗರಿ, ಹುರುಳಿ ಬೆಳೆಗೆ ವಿಮಾ ಸೌಲಭ್ಯ ಇರುತ್ತದೆ. ರೈತರು ನಿಗದಿತ ಸಮಯದೊಳಗೆ ನಿಯಮಾನುಸಾರ ವಿಮಾ ಹಣ ಪಾವತಿಸಿ, ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಕೃಷಿ ಬಳಕೆ ಉಪಕರಣಗಳನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.90 ಹಾಗೂ ಇತರರಿಗೆ ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ರೈತರು ತಮ್ಮ ಜಮೀನಲ್ಲಿ ಕೃಷಿ ಹೊಂಡ ನಿರ್ಮಿಸಲು, ಕಂದಕ ತೋಡಲು ಹಾಗೂ ಬದು ನಿರ್ಮಾನ ಮಾಡಲು ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.   ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.