ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ವಿತರಿಸುವ ಸಾಧನ ಸಲಕರಣೆಗಳನ್ನು ಸದುಪಯೋಗಪಡಿಸಿಕೊಳ್ಳಿ – ಎಸ್ ಮುನಿಸ್ವಾಮಿ
ಕೋಲಾರ : ಹಿರಿಯ ನಾಗರೀಕರ ಸಬಲೀಕರಣಕ್ಕಾಗಿ ಭಾರತ ಸರ್ಕಾರವು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು ಇದನ್ನು ಅರ್ಹ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.
ನಗರದ ಹೊರವಲಯದ ಅಂತರಗಂಗೆ ರಸ್ತೆಯಲ್ಲಿರುವ ವಿಶೇಷ ಚೇತನರ ಶಾಲೆಯ ಆವರಣದಲ್ಲಿ ಭಾರತ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರೀಕರ ಮತ್ತು ವಿಶೇಷ ಚೇತನರ ಸಬಲೀಕರಣ ಇಲಾಖೆ ಹಾಗೂ ಅಲಿಂಕೋ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರೀಕರನ್ನು ಮನೆಯಲ್ಲಿ ತಾತ್ಸಾರ ಭಾವದಿಂದ ಕಾಣುತ್ತಾರೆ. ಅವರ ಅವಶ್ಯಕತೆಗಳನ್ನು ಪೂರೈಸದೆ ನಿರ್ಲಕ್ಷ್ಯ ವಹಿಸುತ್ತಾರೆ. ಇಂತಹ ಹಿರಿಯ ನಾಗರೀಕರಿಗೆ ಅವಶ್ಯಕವಾಗಿರುವ ಸಲಕರಣೆಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಈ ಸಲಕರಣೆಗಳನ್ನು ಬಳಕೆ ಮಾಡುವ ಬಗ್ಗೆ ಅರಿತುಕೊಂಡು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಲಕರಣೆಗಳನ್ನು ಪಡೆದುಕೊಳ್ಳಲು ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರು ಜಿಲ್ಲಾ ಕೇಂದ್ರಕ್ಕೆ ಆಗಮಿಸುವುದು ಕಷ್ಟದ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಆಯಾ ತಾಲ್ಲೂಕುಗಳಲ್ಲಿ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುವುದು. ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಅರ್ಹ ಫಲಾನುಭವಿಗಳಿದ್ದರೆ ಅವರ ಪಟ್ಟಿಯನ್ನು ತಯಾರಿಸಿ ನೀಡಿ. ಅವರಿಗೂ ಸಾಧನ ಸಲಕರಣೆಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಮನೆಯಲ್ಲೇ ಇರುವ ದೇವರುಗಳಾದ ತಂದೆ ತಾಯಿಯನ್ನು ನೋಡಿಕೊಳ್ಳದೆ ಎಷ್ಟು ದೇವಾಲಯಗಳನ್ನು ಸುತ್ತಿದರೆ ಏನು ಫಲ. ಇಂದು ತಂದೆ ತಾಯಿಯರನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ನೀವುಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತೀರಿ ಎಂಬುದನ್ನು ಮರೆಯಬೇಡಿ. ಮಾಡಿದ ಪಾಪ ಮತ್ತು ಪುಣ್ಯಗಳನ್ನು ನಾವೇ ಅನುಭವಿಸಿ ಹೋಗಬೇಕಾಗುತ್ತದೆ ಎಂಬುದು ನೆನಪಿರಲಿ ಎಂದರು.
ಕೋಲಾರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ ಅವರು ಮಾತನಾಡಿ, ವಯೋವೃದ್ಧರಾದ ಮೇಲೆ ಕಣ್ಣು ಮಂಜಾಗುವುದು, ನಡೆದಾಡಲು ಸಾಧ್ಯವಾಗದೆ ಇರುವುದು ಹೀಗೆ ಒಂದಿಲ್ಲೊಂದು ಸಮಸ್ಯೆಗಳು ಕಂಡು ಬರುತ್ತವೆ. ಇಂತಹವರಿಗೆ ಅನುಕೂಲ ಮಾಡಲು ಕೇಂದ್ರ ಸರ್ಕಾರವು ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು ಜಾರಿಗೆ ತಂದಿದೆ. ಇದು ಎಲ್ಲಾ ಬಡವರಿಗೆ ಅನುಕೂಲವಾಗುವಂತಹ ಯೋಜನೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 507 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು ಒಟ್ಟು 1134 ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಇದರಲ್ಲಿ 82 ವೀಲ್ಚೇರ್, 45 ವಾಕರ್, 350 ವಾಕಿಂಗ್ ಸ್ಟಿಕ್, 422 ಶ್ರವಣಯಂತ್ರ, 165 ಕನ್ನಡಕ ಹಾಗೂ 20 ಕೃತಕ ಹಲ್ಲಿನ ಸೆಟ್ಗಳು ಸೇರಿವೆ ಎಂದ ಅವರು, ಈ ಸಲಕರಣೆಗಳು ವಯೋವೃದ್ಧರ ಪ್ರತಿನಿತ್ಯದ ಜೀವನಕ್ಕೆ ಅನುಕೂಲವಾಗಲಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಮಂದಿ ಮತದಾರರಿದ್ದು ಅದರಲ್ಲಿ 4.60 ಲಕ್ಷ ಮಂದಿ 60 ವರ್ಷ ಮೇಲ್ಪಟ್ಟ ವಯೋವೃದ್ಧರಿದ್ದಾರೆ. ಇವರೆಲ್ಲರಿಗೂ ಪಿಂಚಣಿ ನೀಡಲಾಗುತ್ತಿದೆ. ಕೆಲವರು ಆಧಾರ್ ಕಾರ್ಡ್ ನೀಡದೆ ಇರುವುದರಿಂದ ಪಿಂಚಣಿ ಬಾರದೆ ನಿಂತಿರುತ್ತದೆ. ಅವರು ಆಧಾರ್ ನೀಡಿ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಜಿಲ್ಲಾಡಳಿತದಿಂದ ಕಂದಾಯ ಮತ್ತು ಪಿಂಚಣಿ ಅದಾಲತ್ಗಳನ್ನು ಜಿಲ್ಲೆಯಾಧ್ಯಂತ ನಡೆಸಲಾಗುತ್ತಿದ್ದು ಅರ್ಹರು ಅರ್ಜಿಗಳನ್ನು ಸಲ್ಲಿಸಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 14,723 ಅಂದರೆ ಶೇ.99 ರಷ್ಟು ಮಂದಿ ವಿಶೇಷ ಚೇತನರು ಕಳೆದ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಹಾಗಾಗಿ ವಿಶೇಷ ಚೇತನರ ಮತದಾನದಲ್ಲಿ ಕೋಲಾರ ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದ ಅವರು, ಜಿಲ್ಲೆಯಲ್ಲಿ ಮತದಾರರ ಪರಿಶೀಲನೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಹೊಸ ಸೇರ್ಪಡೆ, ತಿದ್ದುಪಡಿ, ಮತದಾರರ ಪಟ್ಟಿ ವರ್ಗಾವಣೆ ಸೇರಿದಂತೆ ಮತ್ತಿತರ ಕಾರ್ಯಗಳನ್ನು ಇದರಲ್ಲಿ ಮಾಡಲಾಗುತ್ತಿದೆ. ನೋಂದಣಿ ಮಾಡಿಕೊಳ್ಳಲು 1950 ಎಂಬ ಉಚಿತ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಸೂಲೂರು ಎಂ. ಆಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಂ.ಜಿ.ಪಾಲಿ, ಎಸ್.ಎನ್.ಆರ್. ಅಸ್ಪತ್ರೆಯ ಡಾ.ಮಂಜುನಾಥ್, ಹಿರಿಯ ನಾಗರೀಕರ ಇಲಾಖೆಯ ಅಧಿಕಾರಿಯಾದ ವೆಂಕಟರಾಮ್, ಅಲಿಕೋ ಸಂಸ್ಥೆಯ ಅಶೋಕ್ಪಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.