ಮಾವಿನ  ಹಣ್ಣಿನ ನೊಣಗಳ ನಾಶಕ್ಕೆ, ಮಾವಿನ ಮರಗಳಿಗೆ ಬೇಕಾಗುವ ಪೋಷಕ ಅಂಶಗಳ ಬಗ್ಗೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಂದ ಮಾಹಿತಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಮಾವಿನ ತೋಟಗಳಲ್ಲಿ ಹಣ್ಣಿನ ನೊಣ ಅಥವಾ ಇತರೆ ಕಾರಣಗಳಿಂದ ಕೊಳೆತು ಬಿದ್ದಿರುವ ಮಾವಿನ ಹಣ್ಣುಗಳು ಮತ್ತು ಅವುಗಳ ಅವಶೇಷಗಳನ್ನು ಆಯ್ದು ಗುಂಡಿಯಲ್ಲಿ ಹಾಕಿ ಮುಚ್ಚಬೇಕು . ಈ ಕ್ರಮದಿಂದ ಹಣ್ಣಿನ ನೊಣಗಳ ಸಂತತಿಯೂ ಕಡಿಮೆಯಾಗುತ್ತದೆ . ಅಲ್ಲದೇ ತೋಟದ ನೈಮರ್ಲ್ಯವನ್ನು ಕಾಪಾಡುವಲ್ಲಿಯೂ ಸಹಕಾರಿಯಾಗುತ್ತದೆ . ಮಾವಿನ ತೋಟದ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿಸಿ ಕಸ ಕಡ್ಡಿ ಹುಲ್ಲುಗಳನ್ನು ತೆಗೆದು ಸ್ವಚ್ಛವಾಗಿಡಬೇಕು . ಮಾವಿನ ಮರಗಳಿಗೆ ಅವುಗಳ ವಯಸ್ಸಿಗೆ ಅನುಗುಣವಾಗಿ ಸೂಕ್ತ ಅಳತೆಯ ಪಾತಿಗಳನ್ನು ಮಾಡಿ , ಅಲ್ಲಿ ಉದುರಿ ಬಿದ್ದಿರುವ ಮಾವಿನ ಎಲೆಗಳನ್ನು ಮಣ್ಣಿನಲ್ಲಿ ಮಿಶ್ರಣಗೊಳಿಸಲು ಲಘು ಅಗೆತ ಮಾಡಬೇಕು . ಮಾವಿಗೆ ಕ್ಯಾಲ್ಸಿಯಂ ಅವಶ್ಯಕತೆ ಹೆಚ್ಚಿರುವ ಕಾರಣ ಹಾಗೂ ಮಾವಿನ ಹಣ್ಣಿನಲ್ಲಿ ಗರ್ಭ ( ಸ್ಪಾಂಜಿ ಟಿಕ್ಯೂ ) , ಕಾಂಡದ ಸಿಪ್ಪೆ ಬಿರುಕು ಬಿಡುವುದು , ಅಂಟು ಸೋರುವುದು , ರೆಂಬೆಗಳ ತುದಿ ಒಣಗುವಿಕೆ ಇತ್ಯಾದಿ ಸಮಸ್ಯೆಗಳು ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುವ ಕಾರಣ ಮಾವಿಗೆ ಸುಣ್ಣವನ್ನು ಪ್ರಸಕ್ತ ಹಂಗಾಮಿನಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು .
ಮರಗಳಿಗೆ ಅವುಗಳ ವಯಸ್ಸಿಗೆ ಅನುಗುಣವಾಗಿ ಅರಳಿದ ಸುಣ್ಣ ( Slaked lime ) ನೀಡಬೇಕು . ಮರದ ವಯಸ್ಸು 4-5 ವರ್ಷ ಆದಲ್ಲಿ ಅರ್ಧ ಕೆ.ಜಿ , 7-8 ವರ್ಷ ಆದಲ್ಲಿ 1 ಕೆ.ಜಿ , 10-12 ವರ್ಷ ಆದಲ್ಲಿ 2 ಕೆ.ಜಿ , 15-16 ವರ್ಷ ಆದಲ್ಲಿ 5 ಕೆ.ಜಿ. ಹಾಗೂ 20 ಕ್ಕಿಂತ ಹೆಚ್ಚು ವರ್ಷ ಆದಲ್ಲಿ 8 ಕೆ.ಜಿ.ಸುಣ್ಣವನ್ನು ಪ್ರತಿ ಮರಕ್ಕೆ ನೀಡಬೇಕು . ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7829512236 ಅಥವಾ ತಾಲ್ಲೂಕು ಮಟ್ಟದ ಸಹಾಯಕ ತೋಟಗಾರಿಕೆ , ಅಧಿಕಾರಿಗಳನ್ನು ಮತ್ತು ಉಪ ನಿರ್ದೇಶಕರು ಹಾಗೂ ಹಾರ್ಟಿಕ್ಲಿನಿಕ್ , ಕೋಲಾರ ಇವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ( ಜಿ.ಪಂ ) ಇವರು ತಿಳಿಸಿದ್ದಾರೆ .