ಮಾವಿನ ಮರಗಳ (ಮಧ್ಯದ ಹಾಗೂ ಒತ್ತಾದ ರೆಂಬೆಗಳನ್ನು)  ಸವರುವಿಕೆಯ ಉಪಯೋಗಗಳು (ಇಸ್ರೇಲ್ ತಂತ್ರಜ್ಞಾನ)

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಮಾವಿನ ಮರಗಳ (ಮಧ್ಯದ ಹಾಗೂ ಒತ್ತಾದ ರೆಂಬೆಗಳನ್ನು)  ಸವರುವಿಕೆಯ ಉಪಯೋಗಗಳು (ಇಸ್ರೇಲ್ ತಂತ್ರಜ್ಞಾನ)

 

 

ಕೋಲಾರ; ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆಯ ಜಿ. ನಾರಾಯಣಗೌಡ ಮಾದರಿ ತೋಟಗಾರಿಕ ಕ್ಷೇತ್ರದಲ್ಲಿ ಇಂಡೋ – ಇಸ್ರೇಲ್ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಮಾವು ಬೆಳೆ ಉತ್ಕøಷ್ಟ ಕೇಂದ್ರದಲ್ಲಿ ಮಾವಿನ ಬೆಳೆಯ ಆಧುನಿಕ ಬೇಸಾಯ ತಂತ್ರಜ್ಞಾನಗಳನ್ನು ಇಸ್ರೇಲ್ ದೇಶದ ತಜ್ಞರಿಂದ ಪಡೆದು ಇಲ್ಲಿನ ಹವಾಮಾನ ಹಾಗೂ ಮಣ್ಣಿನ ಗುಣಗಳಿಗೆ ಹೊಂದುವಂತೆ ಪ್ರಾತ್ಯಕ್ಷತೆಗಳನ್ನು ಕೈಗೊಂಡು ಇಳುವರಿ ಹಾಗೂ ಹಣ್ಣಿನ ಗುಣಮಟ್ಟವನ್ನು ಹೆಚ್ಚಿಸುವ ತಂತ್ರಜ್ಞಾನಗಳನ್ನು ರೈತರ ತಾಕುಗಳಲ್ಲಿ ಕೈಗೊಳ್ಳಲಾಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಇಸ್ರೇಲ್ ದೇಶದ ತಜ್ಞರು ಮಾಹಿತಿಯ ಪ್ರಕಾರ ಮಾವಿನಲ್ಲಿ ಸವರುವಿಕೆ ತಂತ್ರಜ್ಞಾನದ ಪ್ರಾತ್ಯಕ್ಷತೆಯನ್ನು ಕೈಗೊಳ್ಳಲಾಗುತ್ತಿದೆ. ಸವರುವಿಕೆ ಎಂದರೆ ಮಾವಿನ ಮರಗಳ ಎತ್ತರ ಹಾಗೂ ಆಕಾರವನ್ನು ಅವಲಂಬಿಸಿ ಮಧ್ಯದ ಹಾಗೂ ಒತ್ತಾದ ರೆಂಬೆಗಳನ್ನು ತೆಗೆದು ಹಾಗೂ ಗಾಳಿ ಹಾಗೂ ಸೂರ್ಯನ ಕಿರಣಗಳನ್ನು ಬೀಳುವಂತೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸುವುದಾಗಿದೆ.

ಸವರುವಿಕೆಯ ಉಪಯೋಗಗಳು: ಸೂರ್ಯನ ಕಿರಣಗಳು ಎಲ್ಲಾ ದಿಕ್ಕಿನಲ್ಲಿ ಬಿದ್ದು, ಎಲೆಗಳಲ್ಲಿ ದ್ಯುತಿಸಂಶ್ಲೇಷಣಾ ಕ್ರಿಯೆಯನ್ನು ಹೆಚ್ಚಿಸುವುದಲ್ಲದೇ, ರೋಗ ಹಾಗೂ ಕೀಟ ಬಾದೆಯನ್ನು ಕಡಿಮೆಗೊಳಿಸುತ್ತದೆ. ಹೂವು ಹಾಗೂ ಹಣ್ಣು ಬಿಡುವ ರೆಂಬೆಗಳು ಮಿತಿಗೊಂಡು ಇರುವ ರೆಂಬೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂ ಕಚ್ಚಿ, ಹಣ್ಣಿನ ಗಾತ್ರ ಹೆಚ್ಚಾಗಿ ಎಲ್ಲಾ ಹಣ್ಣುಗಳು ಗಾತ್ರದಲ್ಲಿ ಸಮನಾಗಿರುತ್ತದೆ. ಮರದ ಎತ್ತರವನ್ನು ಮಿತಿಗೊಳಿಸುವುದರಿಂದ ಬೇಸಾಯ ಕ್ರಮಗಳಿಗೆ ಅನುಕೂಲವಾಗುತ್ತದೆ. ವಯಸ್ಸಾದ ಮರಗಳಲ್ಲಿ ಸವರುವಿಕೆಯಿಂದ ಹೆಚ್ಚಿನ ಪೋಷಕಾಂಶವನ್ನು ಮರವು ಪಡೆಯುವುದರಿಂದ ಹೊಸ ಚಿಗುರುಗಳನ್ನು ಮರವು ಹೇರಳವಾಗಿ ಉತ್ಪಾದಿಸುತ್ತದೆ.

ಸವರುವಿಕೆಯ ಎರಡು ವಿಧಾನಗಳಿವೆ: ಹೊಸ ಮಾವಿನ ಮರಗಳ ಸವರುವಿಕೆ, ಫಸಲು ನೀಡುತ್ತಿರುವ ಮರಗಳಲ್ಲಿ ಸವರುವಿಕೆ. ಸವರುವಿಕೆಯನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಕೋಲಾರ ಹಾಗೂ ಮುಳಬಾಗಿಲು ತಾಲ್ಲೂಕುಗಳಲ್ಲಿ ಹಾಗೂ ಮಾವು ಬೆಳೆಯುವ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 500 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಆಸಕ್ತ ರೈತರ ತಾಕುಗಳಲ್ಲಿ ಪ್ರಾತ್ಯಕ್ಷತೆಗಳನ್ನು ಕೈಗೊಂಡಿದ್ದು, ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟದ ಹಣ್ಣನ್ನು ರೈತರು ಪಡೆದಿರುವುದು ಕಂಡುಬಂದಿದೆ. ಹೆಚ್ಚಿನ ರೈತರು ಸವರುವಿಕೆ ತಂತ್ರಜ್ಞಾನವನ್ನು ತಮ್ಮ ತೋಟಗಳಲ್ಲಿ ಅಳವಡಿಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9480100394, ವೆಬ್‍ಸೈಟ್ ವಿಳಾಸ ddcoemango@gmail.com  ಗೆ ಅಥವಾ ಹೊಗಳಗೆರೆ ತೋಟಗಾರಿಕೆ ಕ್ಷೇತ್ರದ ಮಾವು ಉತ್ಕøಷ್ಟ ಕೇಂದ್ರದ ಯೋಜನಾಧಿಕಾರಿಗಳನ್ನು ಅಥವಾ ಉಪನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.