ಮಾರ್ಚ್-2019ರಲ್ಲಿ ಶೇ.100 ಸಾಧನೆಗೈದ ಶಾಲೆಗಳಿಗೆ ಪುರಸ್ಕಾರ ಎಸ್ಸೆಸ್ಸೆಲ್ಸಿ ಫಲಿತಾಂಶ-ಜಿಲ್ಲೆಯ ಸಾಧನೆಗೆ ಎಲ್ಲರ ಪರಿಶ್ರಮ-ರತ್ನಯ್ಯ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ:- ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಉತ್ತಮ ಸ್ಥಾನ ಕಲ್ಪಿಸಿ ಘನತೆ ಹೆಚ್ಚಿಸುವಲ್ಲಿ ಶಿಕ್ಷಕರ ಪರಿಶ್ರಮದ ಜತೆಗೆ ಅಧಿಕಾರಿ,ಸಿಬ್ಬಂದಿ,ಪೋಷಕರ ಸಹಕಾರವೂ ಅಗತ್ಯವಾಗಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಕಳೆದ 2019ರ ಮಾರ್ಚ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧನೆ ಮಾಡಿದ್ದ ಶಾಲೆಗಳಿಗೆ 25 ಸಾವಿರ ರೂ ನಗದು ಪುರಸ್ಕಾರ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಶಾಲೆಯೊಂದು ಫಲಿತಾಂಶದಲ್ಲಿ ಶೇ.100 ಸಾಧನೆ ಮಾಡುವುದು ಸುಲಭವಲ್ಲ, ಅದರ ಹಿಂದೆ, ಮುಖ್ಯಶಿಕ್ಷಕರು,ಶಿಕ್ಷಕರ ಪರಿಶ್ರಮ ವಿದ್ಯಾರ್ಥಿ,ಪೋಷಕರ ಸಹಕಾರವೂ ಇರುತ್ತದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದರೆ ಜಿಲ್ಲೆಯ ಹೆಸರನ್ನು ಫಲಿತಾಂಶ ಪಟ್ಟಿಯ ಕೊನೆಯಿಂದ ನೋಡಬೇಕು ಎಂಬ ಅಪವಾದವಿತ್ತು. ಇಂತಹ ಅಪವಾದವನ್ನು ದೂರ ಮಾಡಿ ಜಿಲ್ಲೆಯ ಹೆಸರನ್ನು ಮೊದಲ ಪಂಕ್ತಿಯಲ್ಲಿ ಗುರುತಿಸುವಂತೆ ಮಾಡಲಾಗಿದೆ ಎಂದರು.
ಫಲಿತಾಂಶ ಮಾಯ,ಮಂತ್ರದಿಂದ ಬರಲಿಲ್ಲ, ಅದರ ಹಿಂದೆ ಪರೀಕ್ಷಾ ನೋಡಲ್ ಅಧಿಕಾರಿಯಾಗಿದ್ದ ನಾಗೇಂದ್ರಪ್ರಸಾದ್ ನೇತೃತ್ವದಲ್ಲಿ ನಡೆದ ತಾಲೀಮು ಅತಿಮುಖ್ಯವಾಗಿದೆ ಎಂದು ಪ್ರಶಂಶಿಸಿದರು.
ಇಡೀ ರಾಜ್ಯದಲ್ಲೇ ಪ್ರಥಮ ಬಾರಿಗೆ ಶೈಕ್ಷಣಿಕ ವರ್ಷ ಆರಂಭದಲ್ಲೇ ವಾರ್ಷಿಕ ಕ್ರಿಯಾಯೋಜನೆಯ ಪುಸ್ತಕ ತಯಾರಿಸಿ, ಅದರಂತೆ ಕಾರ್ಯನಿರ್ವಹಿಸಲು ಶಾಲೆಗಳಿಗೆ ಮಾರ್ಗಸೂಚಿ ನೀಡುತ್ತಿದ್ದುದನ್ನು ಸ್ಮರಿಸಿದರು.
ಹಾಗೆಯೇ ಶಿಕ್ಷಕರಲ್ಲಿ ನುರಿತವರನ್ನು ಒಂದೆಡೆ ಸೇರಿಸಿ ಆರು ಸೆಟ್ ಪ್ರಶ್ನೆಪತ್ರಿಕೆಗಳ ತಯಾರಿ, ವರ್ಕ್‍ಬುಕ್, `ನನ್ನನ್ನೊಮ್ಮೆ ಗಮನಿಸಿ’ಪ್ರಶ್ನೆಕೋಠಿ, `ಚಿತ್ರಮಿತ್ರ’ ಹೀಗೆ ಹಲವಾರು ಪ್ರಯತ್ನಗಳನ್ನು ಮಾಡಿ ಇದೆಲ್ಲವನ್ನು ಶಾಲೆಗಳಿಗೆ ತಲುಪಿಸುವಲ್ಲಿ ಇಲಾಖೆ ಅಧಿಕಾರಿಗಳ ಪಾತ್ರವಿದೆ ಎಂದರು.
ಇಲಾಖೆ ನೀಡಿದ ಮಾರ್ಗಸೂಚಿ,ಮಾದರಿ ಪ್ರಶ್ನೆಪತ್ರಿಕೆಗಳನ್ನು ಮಕ್ಕಳಿಗೆ ತಲುಪಿಸಿ ಅವರನ್ನು ಸನ್ನದ್ದಗೊಳಿಸಿದ ಮುಖ್ಯಶಿಕ್ಷಕರು,ಶಿಕ್ಷಕರು, ಅವರಿಗೆ ಮಾರ್ಗದರ್ಶನ ನೀಡಿದ ಎಲ್ಲಾ ಅಧಿಕಾರಿಗಳು ಜಿಲ್ಲೆ ಫಲಿತಾಂಶದಲ್ಲಿ ಕಳೆದ ಐದಾರು ವರ್ಷಗಳಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿವರಿಸಿದರು.
102 ಶಾಲೆಗಳು
ಶೇ.100 ಸಾಧನೆ
ಪರಿಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾತನಾಡಿ,
ಜಿಲ್ಲೆಯಲ್ಲಿ ಶೇ.100 ಫಲಿತಾಂಶ ಸಾಧನೆ ತೋರಿದ ಶಾಲೆಗಳ ಸಂಖ್ಯೆ 102 ಕ್ಕೇರಿದ್ದು, ಇದರಲ್ಲಿ ಸರ್ಕಾರಿ ಶಾಲೆಗಳು 30 ಶಾಲೆಗಳು ಈ ಸಾಧನೆಯ ಪಟ್ಟಿಗೆ ಸೇರ್ಪಡೆಗೊಂಡಿವೆ ಎಂದು ತಿಳಿಸಿ, ಉಳಿದಂತೆ ಅನುದಾನಿತ 6 ಹಾಗೂ 66 ಖಾಸಗಿ ಶಾಲೆಗಳು ಶೇ.100ರ ಸಾಧನೆ ಮಾಡಿವೆ ಎಂದು ವಿವರ ನೀಡಿದರು.
ಕಳೆದ 2019ರ ಮಾರ್ಚ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ30 ಸರ್ಕಾರಿ ಶಾಲೆಗಳು ಶೇ.100 ಸಾಧನೆ ಮಾಡಿದ್ದು, ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿ ಹೆಮ್ಮೆಯ ಸಾಧನೆ ಎಂದರು.
ಕೊರೊನಾ ಸಂಕಷ್ಟದಿಂದಾಗಿ ಈ ಪುರಸ್ಕಾರ ವಿಳಂಬವಾಗಿದ್ದು, ಇದೀಗ ವಿತರಿಸಲಾಗುತ್ತಿದೆ. 30ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗಳಿಗೆ, ಅನುದಾನಿತ ಶಾಲೆಗಳಿಗೆ 25 ಸಾವಿರ ನಗದು ಪುರಸ್ಕಾರ ನೀಡಲಾಗಿದ್ದು, ಅನುದಾನ ರಹಿತ ಶಾಲೆಗಳಿಗೆ ನೆನಪಿನ ಕಾಣಿಕೆ ಮಾತ್ರ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಯಟ್ ಪ್ರಾಂಶುಪಾಲ ಕೆ.ಎಂ.ಜಯರಾಮರೆಡ್ಡಿ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್,ಬಿಇಒ ಕೆ.ಎಸ್.ನಾಗರಾಜಗೌಡ, ಡಿವೈಪಿಸಿ ಮೋಹನ್ ಬಾಬು,ಎವೈಪಿಸಿ ಸಿದ್ದೇಶ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ,ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸದಾನಂದ್, ವಿಷಯ ಪರಿವೀಕ್ಷಕರಾದ ಶಶಿವಧನ, ಕೃಷ್ಣಪ್ಪ,ಗಾಯತ್ರಿ, ಬಿ.ವೆಂಕಟೇಶಪ್ಪ, ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್, ಇಸಿಒ ಮುನಿರತ್ನಯ್ಯಶೆಟ್ಟಿ, ನರಸಾಪುರ ಮುಖ್ಯಶಿಕ್ಷಕ ಶಿವಪ್ರಸಾದ್ ಮತ್ತಿತರರಿದ್ದರು.

ಚಿತ್ರಶೀರ್ಷಿಕೆ(ಫೋಟೊ-23ಕೋಲಾರ1):ಎಸ್ಸೆಸ್ಸೆಲ್ಸಿ ಮಾರ್ಚ್-2019ರ ಪರೀಕ್ಷೆಯಲ್ಲಿ ಶೇ.100 ಸಾಧನೆ ಮಾಡಿದ್ದ ಪ್ರೌಢಶಾಲೆಗಳಿಗೆ ಡಿಡಿಪಿಐ ಕೆ.ರತ್ನಯ್ಯ 25 ಸಾವಿರ ರೂ ನಗದು ಪುರಸ್ಕಾರ,ನೆನಪಿನ ಕಾಣಿಕೆಯನ್ನು ನರಸಾಪುರ ಸರ್ಕಾರಿ ಪ್ರೌಢಶಾಲೆಗೆ ವಿತರಿಸಿದರು.