ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಮಾಧ್ಯಮಗಳು ವಾಸ್ತವ ವಿಚಾರಗಳನ್ನು ಜನತೆಗೆ ಮುಟ್ಟಿಸಲಿ-ಕೆ.ಆರ್ ರಮೇಶ್ ಕುಮಾರ್
ಕೋಲಾರ, ಜುಲೈ 01 ಪತ್ರಕರ್ತರು ಮಾಧ್ಯಮಗಳ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ವಾಸ್ತವ ವಿಚಾರಗಳನ್ನು ಜನತೆಗೆ ತಿಳಿಯಪಡಿಸಬೇಕು ಎಂದು ವಿಧಾನಸಭಾಧ್ಯಕ್ಷರಾದ ಕೆ.ಆರ್ ರಮೇಶ್ ಕುಮಾರ್ ಅವರು ತಿಳಿಸಿದರು.
ಪತ್ರಕರ್ತರಿಗೆ ವೃತ್ತಿ ಧರ್ಮ ಬಹಳ ಮುಖ್ಯ. ಸುದ್ದಿಯು ಸತ್ಯಕ್ಕೆ ದೂರ ಇದ್ದಾಗ ಸುದ್ದಿಯು ಮಹತ್ವ ಕಳೆದುಕೊಳ್ಳುತ್ತದೆ. ಆದ್ದರಿಂದ ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿದು ವಾಸ್ತವವನ್ನು ಸುದ್ದಿ ಮಾಡಬೇಕು. ತಪ್ಪು ಸುದ್ದಿಯಿಂದ ನಿರಪರಾಧಿಗಳ ಚಾರಿತ್ಯ್ರವಧೆಯಾಗಬಾರದು ಹಾಗೂ ಸತ್ಯವನ್ನು ಮರೆಮಾಚಬಾರದು. ನಮ್ಮ ಮುಂದೆ ಯಾವ ದೊಡ್ಡ ವ್ಯಕ್ತಿಯ ವಿಚಾರ ಬಂದರೂ ವಿಷಯವು ಮಾತ್ರ ಮುಖ್ಯವಾಗಿರಬೇಕು ವ್ಯಕ್ತಿಯನ್ನು ಪರಿಗಣಿಸಬಾರದು. ಸ್ವೇಚ್ಚಾಚಾರ ಹಾಗೂ ಸ್ವಾತಂತ್ರ್ಯಕ್ಕೆ ತುಂಬಾ ವ್ಯತ್ಯಾಸವಿದೆ ಎಂದ ಪತ್ರಕರ್ತರ ನಿವೇಶನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಭೆ ಕರೆದು ಸರ್ಕಾರಿ ಜಾಗ ಅಥವಾ ಖಾಸಗಿ ಸ್ಥಳವನ್ನು ಗುರ್ತಿಸಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಇಂದು ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಮೊದಲ ಪತ್ರಿಕೆ ಮಂಗಳೂರು ಸಮಾಚಾರ್, 1843 ರಲ್ಲಿ ಪ್ರಾರಂಭವಾಯಿತು. ಮನುಷ್ಯ ಶಿಲಾಯುಗವನ್ನು ದಾಟಿ ನಾಗರೀಕ ಜಗತ್ತಿಗೆ ತಲುಪಿದಾಗ ತನ್ನನ್ನು ಪರಿಚಯಿಸಿಕೊಳ್ಳಲು ಇನ್ನೊಬ್ಬರನ್ನು ಅರ್ಥೈಸಲು ಹಾಗೂ ಭಾವನೆಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ವಿನಿಮಯ ಮಾಡಿಕೊಳ್ಳಲು ಭಾಷೆ ಅಸ್ತಿತ್ವಕ್ಕೆ ಬಂದಿತು ಎಂದು ತಿಳಿಸಿದರು.
ಕೆಲವು ವರ್ಷಗಳ ಕಾಲಘಟ್ಟದಲ್ಲಿ ದೂರದಲ್ಲಿರುವ ಮನುಷ್ಯನಿಗೆ ವಿಚಾರಗಳನ್ನು ತಲುಪಿಸುವುದಕ್ಕೆ ಭಾಷೆಯ ವಿಚಾರಗಳನ್ನು ತಿಳಿಸಲು ಗಿಳಿ, ಪಾರಿವಾಳಗಳ ಮುಖಾಂತರ ಪತ್ರಗಳನ್ನು ರವಾನೆ ಮಾಡುತ್ತಿದ್ದರು. ನಂತರ ದಿನಗಳಲ್ಲಿ ಗ್ರಾಮ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಇಂದು ಪ್ರತಿದಿನದ ಸಮಾಚಾರಗಳನ್ನು ತಿಳಿಸಲು ವರ್ತಮಾನ ಪತ್ರಿಕೆಗಳು ಹೆಚ್ಚು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಪತ್ರಿಕಾ ಮಾಧ್ಯಮ ಹಾಗೂ ಪತ್ರಕರ್ತ ವೃತ್ತಿಗೆ ತನ್ನದೆ ಆದ ಇತಿಹಾಸವಿದೆ. ಸ್ವತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾದದ್ದು. ಅಭಿವೃದ್ಧಿ ಆಧಾರದ ಪತ್ರಿಕೋದ್ಯಮದ ಇಂದು ಕಡೆಗಣಿಸುತ್ತಿದ್ದು, ಕ್ಷಣ ಕ್ಷಣದ ಮಾಹಿತಿಯನ್ನು ನೀಡುವ ಪೈಪೋಟಿಯ ಕಾಲವಾಗಿದೆ. ಪ್ರಚೋದನಾಕಾರಿ ವಿಷಯಗಳನ್ನು ಪ್ರಕಟಿಸಿದಾಗ ವಿದ್ಯುನ್ಮಾನ ಚಾನಲ್ಗಳ ಟಿ.ಆರ್.ಪಿ ಹಾಗೂ ಪತ್ರಿಕೆಗಳ ಸರಬರಾಜು ಹೆಚ್ಚಾಗುತ್ತಿದೆ ಎಂಬ ದೃಷ್ಟಿಕೋನ ಇಂದಿನದ್ದಾಗಿದೆ ಎಂದು ತಿಳಿಸಿದರು.
ಪ್ರಜ್ಞಾಪೂರ್ವಕವಾಗಿ ಎಚ್ಚೆತ್ತು ಕಾರ್ಯನಿರ್ವಹಿಸಿದರೆ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಬಹುದಾಗಿದೆ. ಸಮಾಜದಲ್ಲಿನ ಒಳ್ಳೆಯ ವಿಚಾರಗಳು ಸಾರ್ವಜನಿಕರಿಗೆ ತಲುಪಿಸುವುದು ಪತ್ರಕರ್ತರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೆ ಸನ್ಮಾನ ಮಾಡಲಾಯಿತು. ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವರಾದ ಹೆಚ್.ನಾಗೇಶ್, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ, ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಜಗದೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ನಿಕಟಪೂರ್ವ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ್, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗೋಪಿನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ. ಮುನಿರಾಜು ಸೇರಿದಂತೆ ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.