ಮಹಿಳೆಯರ, ಮಕ್ಕಳ ಸುರಕ್ಷತೆಗಾಗಿ ಸಜ್ಜಾದ ಕೋಲಾರಮ್ಮ ಪಡೆ -ಕೆ.ವಿ ಶರತ್‍ಚಂದ್ರ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಮಹಿಳೆಯರ, ಮಕ್ಕಳ ಸುರಕ್ಷತೆಗಾಗಿ ಸಜ್ಜಾದ ಕೋಲಾರಮ್ಮ ಪಡೆ -ಕೆ.ವಿ ಶರತ್‍ಚಂದ್ರ

ಕೋಲಾರ: ಶಾಲಾ-ಕಾಲೇಜು ಸಾರ್ವಜನಿಕ ಸ್ಥಳಗಳು ಸೇರಿದಂತೆ ಮಹಿಳೆಯರ, ಮ್ಕಕಳ ಸುರಕ್ಷತೆಗಾಗಿ ಕಾರ್ಯನಿರ್ವಹಿಸಲು ಕೋಲಾರಮ್ಮ ಪಡೆಯು ಸಜ್ಜಾಗಿದೆ ಎಂದು ಬೆಂಗಳೂರು ಕೇಂದ್ರವಲಯದ ಪೊಲೀಸ್ ಮಹಾನಿರೀಕ್ಷಕರಾದ ಕೆ.ವಿ ಶರತ್‍ಚಂದ್ರ ಅವರು ತಿಳಿಸಿದರು. 

 ಇಂದು ನಗರದ ಕೋಲಾರ ಜಿಲ್ಲಾ ಪೊಲೀಸ್ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ,  ಗಲ್‍ಪೇಟೆ ಪೊಲೀಸ್ ಠಾಣೆ ಮುಂಭಾಗದಲ್ಲಿ ನಿರ್ಮಿಸಿರುವ ಪೊಲೀಸ್ ಫಾರ್ಮ ಮತ್ತು ಕೋಲಾರಮ್ಮ ಪಡೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೋಲಾರಮ್ಮ ಪಡೆಯು ಪೂರ್ಣವಾಗಿ ಪೊಲೀಸ್ ಮಹಿಳಾ ಸಿಬ್ಬಂದಿಯನ್ನು ಒಳಗೊಂಡಿದೆ. ಈ ಪಡೆಯಲ್ಲಿ 46 ಜನ ಮಹಿಳಾ ಸಿಬ್ಬಂದಿ, ಮೋಟಾರ್ ಸೈಕಲ್‍ಗಳ ತರಬೇತಿ, ಆತ್ಮರಕ್ಷಣೆ, ಕರಾಟೆ, ದೈಹಿಕ ಸದೃಢತೆ ಕಾಪಾಡಿಕೊಳ್ಳುವುದರ ಬಗ್ಗೆ ಮಹಿಳೆಯರ ಪರವಾಗಿ ಯಾವ ಯಾವ ಕಾನೂನುಗಳಿವೆ ಅವುಗಳ ಬಗ್ಗೆ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅರಿವನ್ನು ಮೂಡಿಸಲಿದ್ದಾರೆ ಎಂದು ತಿಳಿಸಿದರು. 

 ಇಂಟರ್‍ನೆಟ್, ವಾಟ್ಸ್‍ಆ್ಯಫ್, ಫೇಸ್‍ಬುಕ್‍ಗಳ ಮೂಲಕ ಅಶ್ಲೀಲ ಸಂದೇಶ ವಿಡಿಯೋಗಳನ್ನು ಕಳಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಲೈಂಗಿಕ ಕಿರುಕುಳ, ಅತ್ಯಾಚಾರ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವುಗಳನ್ನು ತಡೆಗಟ್ಟಲು ಈ ಸಿಬ್ಬಂದಿ ಹೆಚ್ಚು ನಿಗಾವಹಿಸಲಿದೆ. ಮಾದಕ ವಸ್ತುಗಳಾದ ಡ್ರಗ್ಸ್, ಅಫೀಮು, ಗಾಂಜಾ ಮುಂತಾದವುಗಳ ಸೇವನೆಯಿಂದ ಹೆಚ್ಚು ದುಷ್ಪರಿಣಾಮ ಬೀರುತ್ತಿರುವುದರ ಬಗ್ಗೆ ಮಾಹಿತಿ ಪಡೆದು ತಿಳುವಳಿಕೆ ಮೂಡಿಸಲಿದ್ದಾರೆ ಎಂದು ತಿಳಿಸಿದರು. 

    ಸಂಚಾರ ನಿಯಮದ ಪಾಲನೆ, ಸ್ವರಕ್ಷಣೆ, ಕರಾಟೆ ಇವುಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಬಹಿರಂಗ ಪ್ರದರ್ಶನವನ್ನು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೋಲಾರಮ್ಮ ಪಡೆಯು ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಕೋಲಾರಮ್ಮ ಪಡೆಯ ಮೊಬೈಲ್ ನಂಬರ್‍ನ್ನು ಸಹ ಸಾರ್ವಜನಿಕರಿಗೆ ನೀಡಲಾಗುವುದು. ಈ ಸೌಲಭ್ಯಗಳನ್ನು ಸಾರ್ವಜನಿಕರು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. 

 ಪೊಲೀಸ್ ಫಾರ್ಮಸಿಯು ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ವರವಾಗಿದೆ. ಫಾರ್ಮಸಿಗೆ ಜನರಿಕ್ ಮೆಡಿಸನ್ ತರಿಸುವುದರಿಂದ ಹಣ ಹಾಗೂ ಸಮಯ ಎರಡೂ ಉಳಿತಾಯವಾಗಲಿದೆ. ಸಣ್ಣ ಪುಟ್ಟ ಖಾಯಿಲೆಗಳಿಗೆ ಶೀಘ್ರವೇ ಔಷಧಿ ದೊರೆಯಲಿದೆ ಎಂದು ತಿಳಿಸಿದರು. 

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರು ಮಾತನಾಡಿ, ಪೊಲೀಸ್ ಸಿಬ್ಬಂದಿ ಹಾಗೂ ಸಿಬ್ಬಂದಿ ಕುಟುಂಬದವರಿಗೆ ಪೊಲೀಸ್ ಫಾರ್ಮಸಿಯು ತುಂಬಾ ಅನುಕೂಲವಾಗಲಿದೆ. ಫಾರ್ಮಸಿಯಲ್ಲಿ ಮಾರುಕಟ್ಟೆ ದರಕ್ಕಿಂತ ಶೇ 20% ರಿಯಾಯಿತಿ ದರದಲ್ಲಿ ಔಷಧಿಗಳನ್ನು ಸಿಬ್ಬಂದಿಯವರಿಗೆ ನೀಡಲಾಗುವುದು. ಜನರಿಕ್ ಔಷಧಿಗಳು ಶೇ 50% ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.

  ಕೋಲಾರಮ್ಮ ಪಡೆಯು ಮಹಿಳೆ ಹಾಗೂ ಮಕ್ಕಳ ಸುರಕ್ಷತೆಗಾಗಿ ಪೊಲೀಸ್ ಮಹಿಳಾ ಸಿಬ್ಬಂದಿಗೆ ಕರಾಟೆ, ಮೋಟಾರ್ ಬೈಕ್ ತರಬೇತಿಯನ್ನು 46 ಜನಕ್ಕೆ ನೀಡಲಾಗಿದೆ. ಇವರನ್ನು ಕೋಲಾರ ನಗರದಲ್ಲಿ 5 ಬೀಟ್‍ಗಳಿಗೆ ವಿಂಗಡನೆ ಮಾಡಲಾಗಿದೆ. ಶಾಲಾ-ಕಾಲೇಜು ಬಿಡುವ ವೇಳೆಯಲ್ಲಿ ಗಸ್ತು ಹೋಗಲಿದ್ದಾರೆ. ಇದರಿಂದ ಸಾರ್ವಜನಿಕರು, ಶಾಲಾ-ಕಾಲೇಜು ಮಕ್ಕಳು ಸುಗಮವಾಗಿ ಓಡಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು. 

 ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ನಿವೃತ್ತ ಪೊಲೀಸ್ ಅಧ್ಯಕ್ಷರಾದ ಸೊಣ್ಣಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.