ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮವಹಿಸಿ : ಲಕ್ಷ್ಮೀನಾರಾಯಣ್ 

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮವಹಿಸಿ : ಲಕ್ಷ್ಮೀನಾರಾಯಣ್ 

ಕೋಲಾರ: ಮಹಿಳೆಯರು ಸರ್ವಕಾಲದಿಂದಲೂ ಶೋಷಣೆಗೆ ಒಳಗಾಗುತ್ತಿದ್ದು ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿಯಾದ ಲಕ್ಷ್ಮೀನಾರಾಯಣ್ ಅವರು ತಿಳಿಸಿದರು. 

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಹಭಾಗಿತ್ವದಲ್ಲಿ, ಗ್ಲೋಬಲ್ ಕನ್ಸರ್ನ್ ಇಂಡಿಯಾ ಮತ್ತು ಹ್ಯಾನ್ಸ್ ಸೈಡೆಲ್ ಫೌಂಡೇಶನ್ ಸಂಸ್ಥೆಯು ಹಮ್ಮಿಕೊಳ್ಳಲಾಗಿದ್ದ, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಹಿಂಸಾಚಾರ ಮುಕ್ತ ಸುರಕ್ಷಿತ ನಗರಕ್ಕಾಗಿ ಜಂಟಿ ಬದ್ಧತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಲೈಗಿಂಕ ಕಿರುಕುಳ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇದನ್ನು ತಡೆಗಟ್ಟುವ ಮೂಲಕ ಮಹಿಳೆಯರಿಗೆ ಕಾನೂನು ರಕ್ಷಣೆಯನ್ನು ನೀಡಬೇಕು. ಆ ಮೂಲಕ ಮಹಿಳೆಯರಿಗೆ ಸೂಕ್ತ ಗೌರವ ಸ್ಥಾನ ಮಾನಗಳನ್ನು ನೀಡುವಂತಾಗಬೇಕು ಎಂದು ಹೇಳಿದರು. 

ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸುವ ಮೂಲಕ ಸಮಾಜದ ಗೌರವಯುತ ಜೀವನ ಕಲ್ಪಿಸಬೇಕೆಂಬ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಗಳೂ ಸಹ ಮಹಿಳೆಯರ ಉನ್ನತಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗಾಗಿ ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಒಂದಷ್ಟು ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ ಎಂದರು. 

ಡಿ.ವೈ.ಎಸ್.ಪಿ ಆರ್.ವಿ.ಚೌಡಪ್ಪ ಅವರು ಮಾತನಾಡಿ, ಸಮಾಜದಲ್ಲಿ ಕಳೆದ ಐದತ್ತು ವರ್ಷಗಳ ಹಿಂದೆ ಇದ್ದಂತಹ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಕಾನೂನು ಸುವ್ಯವಸ್ಥೆಯು ಉತ್ತಮವಾಗಿ ಇರುವುದರಿಂದ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತಿವೆ. ಅದರಂತೆ ಮಹಿಳೆಯರೂ ಸಹ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳುವಂತಾಗಿದೆ ಎಂದು ತಿಳಿಸಿದರು. 

  ಪ್ರೊಬೆಷನರಿ ಡಿ.ವೈ.ಎಸ್.ಪಿ. ತಬ್ರಕ್ ಫಾತಿಮಾ ಅವರು ಮಾತನಾಡಿ, ದೇಶದಲ್ಲಿ ಮೊದಲಿಗೆ ಮಹಿಳೆಯರು ಕೇವಲ ಮನೆ ಮತ್ತು ಕುಟುಂಬಗಳಿಗೆ ಮಾತ್ರ ಸೀಮಿತವಾಗುವಂತಿತ್ತು. ಆದರೆ ಕಾಲ ಮೊದಲಿನಂತಿಲ್ಲ. ಮಹಿಳೆಯರು ಹೊರಗೆ ಬಂದು ಪ್ರತಿಯೊಂದು ರಂಗದಲ್ಲೂ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಅಭಿವೃದ್ಧಿ ಪೂರಕ ಪರಿಸರವನ್ನು ಒದಗಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. 

    ಪ್ರೊಬೇಷನರಿ ಡಿ.ವೈ.ಎಸ್.ಪಿ ಅನುಷಾ ಅವರು ಮಾತನಾಡಿ, ಯಾವ ದೇಶದಲ್ಲಿ ಮಹಿಳೆಗೆ ಉತ್ತಮ ಗೌರವ ಹಾಗೂ ಉನ್ನತ ಹುದ್ದೆ ದೊರೆಯುತ್ತದೆಯೋ ಆ ದೇಶ ಉನ್ನತ ಸ್ಥಾನಕ್ಕೆ ಏರುತ್ತದೆ ಎಂಬ ವಿವೇಕಾನಂದರ ಮಾತನ್ನು ಒಪ್ಪಲೇಬೇಕಾದ ವಿಚಾರ. ಮೊದಲಿಗೆ ಹೆಣ್ಣು ತಂದೆ, ಪತಿ, ಮಗನ ಆಶ್ರಯದಲ್ಲಿಯೇ ಇರಬೇಕಾಗಿತ್ತು. ಅವರು ಹೇಳಿದಂತೆಯೇ ಕೇಳಬೇಕಾಗಿತ್ತು. ತನ್ನ ಆಸೆ ಆಕಾಂಕ್ಷೆಗಳಿಗೆ ಯಾವುದೇ ರೀತಿಯ ಬೆಲೆ ಇರಲಿಲ್ಲ. ಆದರೆ ಈಗ ಮಹಿಳೆಯು ಸ್ವಾವಲಂಬಿಯಾಗಿದ್ದಾಳೆ. ಸರ್ಕಾರಗಳ ಯೋಜನೆಗಳು ಮತ್ತು ಕಾನೂನು ಸುವ್ಯವಸ್ಥೆಯಿಂದ ಮಹಿಳಾ ಸಬಲೀಕರಣ ಆಗುತ್ತಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ  ಜಿಲ್ಲಾ ಪಂಚಾಯತ್‍ನ ಮುಖ್ಯ ಲೆಕ್ಕಾಧಿಕಾರಿ ಮಾದೇಶ್, ಹೆಚ್.ಎಸ್.ಎಫ್‍ನ ಕಾರ್ಯಕ್ರಮ ಅಧಿಕಾರಿ ರಿತುಪ್ರಿಯಾ, ಜಿ.ಸಿ.ಐ.ಹೆಚ್.ಎಸ್.ಪಿ ಕಾರ್ಯಕ್ರಮ ನಿರ್ದೇಶಕರಾದ ಬೃಂದಾ ಅಡಿಗೆ, ಮಾರಿಯಾ, ಅನ್ಸಿಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.