ಮಹತ್ವದ ರಕ್ತದಾನ ಕುರಿತು ಜಾಗೃತಿ ಮೂಡಿಸುವುದು ಅತ್ಯವಶ್ಯಕ : ದರ್ಶನ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಮಹತ್ವದ ರಕ್ತದಾನ ಕುರಿತು ಜಾಗೃತಿ ಮೂಡಿಸುವುದು ಅತ್ಯವಶ್ಯಕ : ದರ್ಶನ್

ಕೋಲಾರ : ರಕ್ತದಾನವು ಮಹತ್ವದ ದಾನವಾಗಿದ್ದು ಪ್ರತಿಯೊಬ್ಬ ವಯಸ್ಕರೂ ವರ್ಷದಲ್ಲಿ ಕನಿಷ್ಠ 2 ಬಾರಿಯಾದರೂ ರಕ್ತದಾನ ಮಾಡಬೇಕಲ್ಲದೆ ಇದರ ಬಗ್ಗೆ ಎಲ್ಲರಿಗೂ ಜಾಗೃತಿಯನ್ನು ಮೂಡಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಹೆಚ್.ವಿ.ದರ್ಶನ್ ಅವರು ತಿಳಿಸಿದರು. 

ನಗರ ಹೊರವಲಯದಲ್ಲಿನ ಎಸ್.ಡಿ.ಸಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಹಾಗೂ ದಾನಮ್ಮ ಚನ್ನ ಬಸವಯ್ಯ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ. ಮನುಷ್ಯನು ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆಯನ್ನು ಬಿಡಬೇಕು. ರಕ್ತದಾನದಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಅಷ್ಟೇ ಅಲ್ಲದೆ ಉತ್ತಮ ಆರೋಗ್ಯ ದೊರೆಯುತ್ತದೆ. ಅದರಂತೆ ನಾನು ಸಹ ಸುಮಾರು 12 ರಿಂದ 13 ಬಾರಿ ರಕ್ತದಾನ ಮಾಡಿದ್ದೇನೆ ಎಂದು ಹೇಳಿದರು. 

ರಕ್ತದಾನ ಮಾಡುವುದರಿಂದ ಆ ರಕ್ತದ ಮೂಲಕ ಒಂದು ಜೀವವನ್ನು ಉಳಿಸಲು ಸಾಧ್ಯ. ಹೀಗೆ ನಾವು ಉಳಿಸಿದ ಜೀವವು ಸಾಕಷ್ಟು ಜೀವಗಳನ್ನು ಉಳಿಸುತ್ತದೆ. ಕಾಣದ ಕುಟುಂಬಕ್ಕೆ ನಾವು ಮಾಡುವ ರಕ್ತದಾನದಿಂದ ಉಪಯೋಗವಾಗುತ್ತದೆ. ಹಾಗಾಗಿ ಎಲ್ಲರೂ ರಕ್ತದಾನ ಮಾಡಲು ಪಣ ತೊಡಬೇಕು ಎಂದರು. 

ರಕ್ತದಾನದ ರೀತಿಯಲ್ಲಿ ನೇತ್ರದಾನದ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ನಿಧನರಾಗುತ್ತಿರುವವರಲ್ಲಿ ಶೇ.15 ರಿಂದ 20 ರಷ್ಟು ಮಂದಿ ನೇತ್ರದಾನ ಮಾಡಿದ್ದೇ ಆದರೆ ದೇಶದಲ್ಲಿ ಯಾರೊಬ್ಬರೂ ಸಹ ಕುರುಡರು ಇರುವುದಿಲ್ಲ. ಹಾಗಾಗಿ ನೇತ್ರದಾನದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ.ವಿಜಯ್ ಕುಮಾರ್ ಅವರು ಮಾತನಾಡಿ, ಈ ವರ್ಷ ‘ಜೀವಿತಾವಧಿಯಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ’ ಎಂಬ ಘೋಷವಾಕ್ಯದಡಿ ರಕ್ತದಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಮೂಲಕ ರಕ್ತದಾನದ ಮಹತ್ವ, ಅದರ ಅವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. 

ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 16 ಸಾವಿರ ಯುನಿಟ್ ರಕ್ತದ ಅವಶ್ಯಕತೆ ಇದೆ. ಇದೀಗ 11 ರಿಂದ 12 ಸಾವಿರ ಯುನಿಟ್ ರಕ್ತ ಸಂಗ್ರಹಣೆ ಆಗುತ್ತಿದ್ದು ಇನ್ನೂ 4 ರಿಂದ 5 ಸಾವಿರ ಯುನಿಟ್ ರಕ್ತದ ಅವಶ್ಯಕತೆ ಇದೆ. ಹಾಗಾಗಿ 18 ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತಾಗಬೇಕು ಎಂದು ತಿಳಿಸಿದರು. 

ಜಿಲ್ಲಾ ಏಡ್ಸ್ ಮತ್ತು ಕ್ಷಯ ರೋಗ ನಿಯಂತ್ರಣಾಧಿಕಾರಿಯಾದ ಡಾ. ಜಗದೀಶ್ ಅವರು ಮಾತನಾಡಿ, ಸ್ವಯಂ ಪ್ರೇರಿತ ರಕ್ತದಾನವನ್ನು ದೇಶದಲ್ಲಿ 1975 ರಿಂದ ಪ್ರಾರಂಭಿಸಲಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.1 ರಷ್ಟು ಮಂದಿಗೆ ರಕ್ತದ ಅವಶ್ಯಕತೆ ಇದೆ. ಇದನ್ನು ಪೂರೈಸಲು ರಕ್ತವನ್ನು ಬೇರೆ ಮೂಲಗಳಿಂದ ಕಂಡು ಹಿಡಿಯಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ರಕ್ತದಾನವನ್ನು ಮಾಡಿ ಇತರರ ಜೀವನಕ್ಕೆ ಅನುಕೂಲವಾಗಬೇಕು ಎಂದರು. 

ಒಬ್ಬ ವ್ಯಕ್ತಿಯು ರಕ್ತದಾನ ಮಾಡುವುದರಿಂದ 4 ಜನರ ಪ್ರಾಣವನ್ನು ಉಳಿಸಬಹುದು. ಒಬ್ಬ ವ್ಯಕ್ತಿಯಿಂದ 350 ರಿಂದ 450 ಎಂ.ಎಲ್. ರಕ್ತವನ್ನು ತೆಗೆದುಕೊಳ್ಳಬಹುದು. ರಕ್ತದಾನದಿಂದ ವ್ಯಕ್ತಿಯು ಚುರುಕುಗೊಳ್ಳುವುದೇ ಅಲ್ಲದೆ ಶೇ.80 ರಷ್ಟು ಹೃದಯಾಘಾತಗಳು ಕಡಿಮೆಯಾಗುತ್ತವೆ. ಹಾಗಾಗಿ 18 ರಿಂದ 60 ವರ್ಷದೊಳಗಿನ ಹಾಗೂ 45 ಕೆ.ಜಿ. ಗಿಂತ ಹೆಚ್ಚು ತೂಕ ಇರುವವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತಾಗಬೇಕು ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಹೆಚ್ಚು ಬಾರಿ ರಕ್ತದಾನವನ್ನು ಮಾಡಿದವರಿಗೆ ಸನ್ಮಾನ ಮಾಡಲಾಯಿತು. ಜೊತೆಗೆ ರಕ್ತದಾನದ ಬಗ್ಗೆ ಏರ್ಪಡಿಸಿದ್ದ  ಭಿತ್ತಿ ಚಿತ್ರಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ.ಚಂದನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ಜಿಲ್ಲಾ ಮೇಲ್ವಿಚಾರಕಿ ಹೆಚ್.ಹೇಮಲತಾ, ಎಸ್.ಡಿ.ಸಿ ಕಾಲೇಜಿನ ಕಾರ್ಯದರ್ಶಿ ಉಷಾ ಗಂಗಾಧರ್ ಹಾಗೂ ಪ್ರಾಂಶುಪಾಲರಾದ ಪುಷ್ಪಲತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.