ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ಮನ್ವಂತರ ಜನಸೇವಾ ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣ, ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವು ಸೇರಿದಂತೆ ಸೇವಾ ಸಂಭ್ರಮ ಯೋಜನೆಯಡಿ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶುಕ್ರವಾರ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವೈದ್ಯಕೀಯ ಸೌಲಭ್ಯ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ವಿತರಿಸಿ ಮಾತನಾಡಿ,ಕಳೆದ 10 ವರ್ಷಗಳಿಂದ ಮನ್ವಂತರ ಪ್ರಕಾಶನದಡಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗಿದೆ. ಇದೀಗ ಮನ್ವಂತರ ಜನಸೇವಾ ಟ್ರಸ್ಟ್ ಮೂಲಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಟ್ರಸ್ಟ್‍ನಿಂದ ಬಡವರಿಗೆ ಒದಗಿಸುವ ಆರ್ಥಿಕ ನೆರವಿನ ಪ್ರಯೋಜನಕ್ಕಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್ ಅವರಿಗೆ ವಹಿಸಲಾಗಿದೆ. ಇವರು ಶಿಫಾರಸ್ಸು ಮಾಡುವ ಬಡವರಿಗೆ ಆರ್ಥಿಕ ನೆರವು ನೀಡಲಾಗುವುದು,ಫಲಾನುಭವಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ಬಡ ರೋಗಿಗಳಿಗೆ ನೆರವಾಗುವ ದೃಷ್ಠಿಯಿಂದ ಮನ್ವಂತರ ಆರೋಗ್ಯ ಮಿತ್ರ ಹೆಸರಿನಲ್ಲಿ ಸುಸಜ್ಜಿತ ಅಂಬ್ಯುಲೆನ್ಸ್ ವ್ಯವಸ್ಥೆಗೆ ಕಲ್ಪಿಸಲು ಉದ್ದೇಶಿಸಿದ್ದು,ಆರ್ಥಿಕವಾಗಿ ಹಿಂದುಳಿದವರಿಗೆ ಸಂಪೂರ್ಣ ಉಚಿತ, ಉಳ್ಳವರು ತುರ್ತು ಸಂದರ್ಭದಲ್ಲಿ ಕೈಗೆಟಕುವ ಶುಲ್ಕ ಪಾವತಿಸಿ ಪ್ರಯೋಜನ ಪಡೆದುಕೊಳ್ಳಬಹುದು. ರೋಗಿಗಳು ಅಪೇಕ್ಷಿಸುವ ಯಾವುದೇ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಈ ಯೋಜನೆಯನ್ನು 2021ರ ಜನವರಿಯಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಕೋಲಾರದಿಂದ ಜಿಲ್ಲಾಧಿಕಾರಿಗಳ ಕಚೇರಿ,ಜಿಲ್ಲಾ ಪೊಲೀಸ್ ಕಚೇರಿಗೆ ಹೋಗಲು ಹಣದ ಸಮಸ್ಯೆ ಇರುವ ಬಡ ಗ್ರಾಮೀಣ ಜನರನ್ನು ಕೋಲಾರ ಬಸ್ ನಿಲ್ದಾಣದಿಂದ ಕರೆದೊಯ್ಯಲು ಆಟೋ ರಿಕ್ಷಾ ವ್ಯವಸ್ಥೆ ಮಾಡಲು ಚಿಂತಿಸಿದ್ದು, ಯೋಜನೆಯನ್ನು ಮುಂದಿನ ವರ್ಷದಿಂದ ಜಾರಿಗೆ ತರಲಾಗುವುದು. ಸೇವಾ ಮನೋಭಾವ ಹೊಂದಿರುವ ವೈದ್ಯರ ಸಹಕಾರದಿಂದ ಬಡ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದರು
ಜಿಲ್ಲೆಯ ಪ್ರತಿಭಾವಂತರು ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಗುಣಾತ್ಮಕ ತರಬೇತಿ ಅವಶ್ಯವಿದೆ. ಈ ದೃಷ್ಠಿಯಿಂದ 2021ರಲ್ಲಿ ಕೋಚಿಂಗ್ ಸೆಂಟರ್ ಸ್ಥಾಪಿಸಲಾಗುವುದು ಎಂದ ಅವರು, ಕರೊನಾ ನಿಂತ ಮೇಲೆ ಹಿರಿಯ ನಾಗರಿಕರಿಗಾಗಿ ಹಗಲು ವಿಶ್ರಾಂತಿ ಕುಟೀರ ಆರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಟ್ರಸ್ಟ್‍ನ ಕಾರ್ಯದರ್ಶಿ ಪಾ,ಶ್ರೀ ಅನಂತರಾಮ್, ಖಜಾಂಚಿ ಎಸ್.ಎನ್.ಪ್ರಕಾಶ್, ಆಧ್ಯಾತ್ಮಿಕ ವಿಭಾಗದ ಸಂಚಾಲಕ ಎಸ್.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಚಿತ್ರಶೀರ್ಷಿಕೆ;(ಫೋಟೊ-9ಕೋಲಾರ1):ಮನ್ವಂತರ ಜನಸೇವಾ ಟ್ರಸ್ಟ್‍ನ ಸೇವಾ ಸಂಭ್ರಮ ಯೋಜನೆಯಡಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವೈದ್ಯಕೀಯ ಸೌಲಭ್ಯ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ಅನ್ನು ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿತರಿಸಿದರು.