ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಯೊಬ್ಬರು ಕೈಜೋಡಿಸಬೇಕು- ಸಿ.ಸತ್ಯಭಾಮ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

 

ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಯೊಬ್ಬರು ಕೈಜೋಡಿಸಬೇಕು- ಸಿ.ಸತ್ಯಭಾಮ

 

 

ಕೋಲಾರ ಕಾನೂನಿನ ಕಣ್ಣು ತಪ್ಪಿಸಿ ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಿದ್ದು, ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಕಂಡುಬಂದರೆ ಸಾರ್ವಜನಿಕರು ಮಾಹಿತಿ ನೀಡುವ ಮೂಲಕ, ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ತಿಳಿಸಿದರು.

ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರವು ಬಾಲ್ಯ ವಿವಾಹ ನಿಷೇದ ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯ ಪ್ರಕಾರ ಮದುವೆಯಾಗಲು ಗಂಡಿಗೆ 21 ವರ್ಷ ಹೆಣ್ಣಿಗೆ 18 ತುಂಬಿರಬೇಕು. ಈ ಕಾಯ್ದೆಯನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದರು.

ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಅನಕ್ಷರಸ್ಥ ಕುಟುಂಬಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಕಂಡುಬರುತ್ತವೆ. ಬಾಲ್ಯ ವಿವಾಹವನ್ನು ತಡೆಗಟ್ಟಲು ಅಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯ ಶಿಕ್ಷಕರು, ಕಂದಾಯ ನಿರೀಕ್ಷಕರಿಗೂ ಅಧಿಕಾರ ನೀಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದರೆ ಹತ್ತಿರದ ಪೊಲೀಸ್ ಠಾಣೆ ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಕೇವಲ ಎಫ್.ಐ.ಆರ್ ಆದರೆ ಮಾತ್ರ ಸಾಲದು. ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗುವ ವರೆಗೆ ಜಾಗೃತಿ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಶಾಲೆಗಳು ಪ್ರಾರಂಭವಾದ ನಂತರ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಶಾಲಾ ಪ್ರಾರ್ಥನೆಯ ನಂತರ ಬಾಲ್ಯ ವಿವಾಹ ಎಂದರೇನು? ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಬೇಕು. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸ ಆಗಬೇಕು ಅಥವಾ ಅವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಸೌಲಭ್ಯ ಒದಗಿಸುವ ಕಾರ್ಯ ಆಗಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಲಿಂಗಾನುಪಾತ 928 ಇದ್ದು ಇದು ದೇಶದ ಸರಾಸರಿಗಿಂತ ಕಡಿಮೆ ಇದೆ. ಕಾನೂನಿನ ಕಣ್ಣು ತಪ್ಪಿಸಿ ಭ್ರೂಣ ಲಿಂಗ ಪತ್ತೆ ನಡೆಯುವ ಸಾದ್ಯತೆಗಳಿವೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಬಿಣಿ ಮಹಿಳೆಗೆ ಮೊದಲ ಜೀವಂತ ಹೆರಿಗೆಗೆ 5000 ಸಹಾಯಧನವನ್ನು ನೀಡಲಾಗುತ್ತಿದ್ದು, ಅರ್ಹ ಪಲಾನುಭವಿಗಳು ಸೌಲಭ್ಯದಿಂದ ವಂಚಿತರಾಗಬಾರದು. ಲೈಗಿಂಕ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯ ಸೌಲಭ್ಯಗಳು, ಉದ್ಯೋಗಿನಿ ಯೋಜನೆಯಡಿ ಸಾಲಸೌಲಭ್ಯಗಳು ದೊರೆಯಬೇಕು. ದಮನಿತ ಮಹಿಳೆಯರು ಲೈಗಿಂಕ ವೃತ್ತಿಯಿಂದ ಹೊರಬರಲು ಸರ್ಕಾರವು ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಸೌಲಭ್ಯ ಪಡೆದವರು ಲೈಗಿಂಕ ವೃತ್ತಿಯನ್ನು ತ್ಯಜಿಸುವಂತೆ ಆಗಬೇಕು ಆಗ ಮಾತ್ರ ಸರ್ಕಾರದ ಉದ್ದೇಶ ಈಡೇರಿದಂತೆ ಆಗುತ್ತದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಎಂ.ಜಿ.ಪಾಲಿ ಅವರು ಮಾತನಾಡಿ 2019-20 ರಲ್ಲಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಸಂಬಂಧಿಸಿದಂತೆ 39 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 37 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 2020-21 ಸಾಲಿನಲ್ಲಿ ಇಲ್ಲಿಯವರೆಗೆ 11 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ ಇದರಲ್ಲಿ 10 ಬಾಲಕಿರಯರು ಹಾಗೂ 1 ಬಾಲಕ ಪ್ರಕರಣ ಕಂಡು ಬಂದಿರುತ್ತದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸೌಲಭ್ಯಗಳನ್ನು ಕಲ್ಪಿಸಲು ಸಖಿ ಯೋಜನೆಯನ್ನು ಜಾರಿಗೆ ತರಲಾಗಿದೆ. 2019-20 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 31 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 8 ಪ್ರಕರಣಗಳು ಬಾಕಿ ಇರುತ್ತವೆ. ದೌರ್ಜನ್ಯ, ಆಸಿಡ್ ದಾಳಿ, ಅತ್ಯಾಚಾರ ದೌರ್ಜನ್ಯಗಳಿಗೆ ಒಳಗಾದವರಿಗೆ ತುರ್ತು ಪರಿಹಾರವಾಗಿ 25 ಸಾವಿರ, ಗರಿಷ್ಠ 2 ಲಕ್ಷ ಹಾಗೂ ಮರಣ ಪರಿಹಾರವಾಗಿ 1 ಲಕ್ಷ ನೀಡಲಾಗುವುದು. ಜಿಲ್ಲೆಯಲ್ಲಿ 1466 ಲಿಂಗತ್ವ ಅಲ್ಪಸಂಖ್ಯಾತರು ನೋಂದಣಿಯಾಗಿದ್ದು, ಇವರಲ್ಲಿ 1354 ಜನರಿಗೆ ಗುರುತಿನ ಚೀಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತ ಮಾಹಿತಿ ಒಳಗೊಂಡ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಹೆಚ್.ವಿ ದರ್ಶನ್, ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾದೀಶರಾದ ಸಿ.ಎಸ್.ಗಂಗಾಧರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.