ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಫಲಾನುಭವಿಗಳು ಕೂಡಲೇ ಸಾಲ ಮರುಪಾವತಿ ಮಾಡಿ: ಗಣೇಶ್
ಕೋಲಾರ: ಜಿಲ್ಲೆಯಲ್ಲಿ 2013 ಮೇ 13 ರಿಂದ ಇಲ್ಲಿಯವರೆಗೆ 6 ಸಾವಿರ ಫಲಾನುಭವಿಗಳಿಗೆ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಸಾಲಸೌಲಭ್ಯ ನೀಡಲಾಗಿದ್ದು ಇದನ್ನು ಕೂಡಲೇ ಮರುಪಾವತಿ ಮಾಡಬೇಕೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಗಣೇಶ್ ಅವರು ತಿಳಿಸಿದರು.
ಮುಳಬಾಗಿಲು ಮತ್ತು ಕೋಲಾರ ತಾಲ್ಲೂಕಿನಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಆಯೋಜಿಸಲಾಗಿದ್ದ ಸಾಲ ಮರುಪಾವತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾನುಸಾರ ಕನಿಷ್ಟ ಶೇ.15 ಸಾಲ ಮರುಪಾವತಿ ಸಂಗ್ರಹಣೆ ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿ ಕೇವಲ ಶೆ.8 ರಷ್ಟು ಮಾತ್ರ ಮರುಪಾವತಿ ಆಗಿದೆ. ಹಾಗಾಗಿ ಜಿಲ್ಲೆಯಾಧ್ಯಂತ ಮರುಪಾವತಿ ಆಂದೋಲನವನ್ನು ನಿರಂತರವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಹಾಗಾಗಿ ಫಲಾನುಭವಿಗಳು ಕಡ್ಡಾಯವಾಗಿ ಸಾಲ ಮರುಪಾವತಿ ಮಾಡಿ ಇತರೆ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಸಹಕರಿಸಬೇಕೆಂದರು.
ನಿಗಮದಿಂದ ಯಾವುದೇ ರೀತಿಯ ಕೃಷಿ ಸಾವಲವನ್ನು ನೀಡಿರುವುದಿಲ್ಲ. ಆದ್ದರಿಂದ ಸಾಲ ಮನ್ನಾ ಆಗುವ ಪ್ರಶ್ನೆಯೇ ಇರುವುದಿಲ್ಲ. ಹಾಗಾಗಿ ಫಲಾನುಭವಿಗಳು ನಿರ್ಲಕ್ಷ್ಯ ವಹಿಸದೆ ಸಾಲ ಮರುಪಾವತಿ ಮಾಡಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ವಹಿಸಲಾಗುವುದು. ಇಂತಹ ಕ್ರಮಕ್ಕೆ ಫಲಾನುಭವಿಗಳು ಅವಕಾಶ ನೀಡದೆ ಕೂಡಲೇ ಸಾಲ ಮರುಪಾವತಿ ಮಾಡಬೇಕು ಎಂದು ತಿಳಿಸಿದರು.