ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಲ್ಲಿ ಕಡಿತ
ಕಾನೂನು ಬಾಹಿರವಾಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಾತೆಗೆ ಜಮಾವಣೆ ಆರೋಪ
ಶ್ರೀನಿವಾಸಪುರ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಲ್ಲಿ 2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎರಡು ಬಾರಿ ಹಣ ಕಡಿತ ಮಾಡಿಕೊಂಡು 1,48.400 ರೂಗಳನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೀಡುವ ಬದಲಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೀಡಿ ಕಾನೂನು ಬಾಹಿರವಾಗಿ ನಡೆದುಕೊಂಡಿರುವ ಅಧಿಕಾರಿಗಳ ವಿರುದ್ದ ಶಿಕ್ಷಣ ಇಲಾಖೆ ಕ್ರಮ ಜರುಗಿಸಬೇಕು ಎಂದು ತಾಲೂಕು ಎಸ್.ಸಿ/ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಸಿ.ವಿ.ನಾರಾಯಣಸ್ವಾಮಿ ದೂರಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೈಲಾದಂತೆ ಹಾಗೂ ರಾಜ್ಯ ಸಂಘದ ಸುತ್ತೋಲೆಯಂತೆ ರಾಜ್ಯ ಸಂಘಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಲ್ಲಿ 200ರೂಗಳನ್ನು ಕಡಿತಗೊಳಿಸಿ ಈ ಹಣವನ್ನು ರಾಜ್ಯ ಸಂಘದ ವಿಜಯಾಬ್ಯಾಂಕ್ ಗಾಂದಿನಗರ ಶಾಖೆಗೆ ಪಾವತಿ ಮಾಡುವಂತೆ ಸುತ್ತೋಲೆ ನೀಡಿದ್ದರೂ ಜೂನ್-2016 ರಲ್ಲಿ 100 ರೂಗಳು ಮತ್ತು ಜುಲೈ-2016ರಲ್ಲಿ ಮತ್ತೊಮ್ಮೆ 100ರೂಗಳನ್ನು ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಲ್ಲಿ ಕಡಿತಗೊಳಿಸಿಕೊಂಡು ಬಿಇಓ ಕಛೇರಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಧೀಕ್ಷಕರು ಹಾಗೂ ವ್ಯವಸ್ಥಾಪಕರು ಕಾನೂನು ಬಾಹಿರವಾಗಿ 1,48,400 ರೂಗಳನ್ನು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಾತೆಗೆ ಜಮಾ ಮಾಡುವ ಮೂಲಕ ಲೋಪವೆಸಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯದರ್ಶಿ ಟಿ.ಪೆದ್ದಪ್ಪಯ್ಯ ಮಾತನಾಡಿ ಶಿಕ್ಷಕರ ವೇತನದಲ್ಲಿ ಕಡಿತ ಮಾಡಿಕೊಂಡ ಹಣವನ್ನು ಸಂಘದ ಬೈಲಾದಂತೆ ಶೇ.50 ರಾಜ್ಯ ಸಂಘಕ್ಕೆ, ಶೆ.25ಜಿಲ್ಲಾ ಸಂಘಕ್ಕೆ ಹಾಗೂ ಇನ್ನುಳಿದ ಶೇ.25 ತಾಲೂಕು ಸಂಘಗಳಿಗೆ ರಾಜ್ಯ ಸಂಘ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಈ ಹಣವನ್ನು ಶಿಕ್ಷಕರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಶ್ರೀನಿವಾಸಪುರ ತಾಲೂಕಿನಲ್ಲಿ ಯಾವುದೇ ಕಾನೂನು ಕ್ರಮಗಳನ್ನು ಪಾಲಿಸದೆ ಸಂಪೂರ್ಣ ಹಣವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಾತೆಗೆ ವರ್ಗಾವಣೆ ಮಾಡಿರುವುದರ ಹಿಂದೆ ದೊಡ್ಡ ಲಾಭಿ ನಡೆಸಲಾಗುತ್ತಿದೆ. ತಾಲೂಕು ಸಂಘದವತಿಯಿಂದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದೆ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜಿಲ್ಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಆಡಳಿತಾಧಿಕಾರಿಗಳು ಇತ್ತ ಗಮನ ಹರಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದ ಹಣವನ್ನು ದುರುಪಯೋಗ ಮಡಿಕೊಂಡಿರುವ ವಿರುದ್ದ ಕ್ರಮ ಜರುಗಿಸಿಬೇಕೆಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ನಾಗೇಂದ್ರ ಮಾತನಾಡಿ ಸುಮಾರು ವರ್ಷಗಳಿಂದ ಈ ರೀತಿ ಹಣದ ದುರ್ಭಳಕೆಯಾಗುತ್ತಿರುವುದರ ಹಿಂದೆ ದೊಡ್ಡ ಷಡ್ಯಂತರ ಅಡಗಿದೆ. ಒಬ್ಬ ಶಿಕ್ಷಕರ ವೇತನದಲ್ಲಿ 200ರೂಗಳನ್ನು ಕಡಿತಗೊಳಿಸಿಕೊಂಡು ಸಂಘದ ಚಟುವಟಿಕೆಗಳಿಗೆ ಹಾಗೂ ಶಿಕ್ಷಕರ ಕಲ್ಯಾಣ ಕಾರ್ಯಕ್ರಮಗಳನ್ನು ನಡಸದೆ ಸಂಪೂರ್ಣ ಹಣವನ್ನು ಗುಳುಂ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಆಯುಕ್ತರಿಗೆ ಈ ವಿಷಯವಾಗಿ 2018 ಜೂನ್-26ರಲ್ಲಿ ದೂರನ್ನು ನೀಡಿದ್ದು ಅದಕ್ಕೆ ಪ್ರತಿಯಾಗಿ 26ಸೆಪ್ಟಂಬರ್ ನಲ್ಲಿ ಶಿಕ್ಷಣ ಆಯುಕ್ತರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಜುಲೈ 2016ರಲ್ಲಿ ಕಾನೂನು ಬಾಹಿರವಾಗಿ ಶಿಕ್ಷಕರ ವೇತನದಲ್ಲಿ ಕಡಿತಗೊಳಿಸಿರುವ ಹಣವನ್ನು ಕೂಡಲೆ ಶಿಕ್ಷಕರ ಖಾತೆಗಳಗೆ ಜಮಾ ಮಡುವಂತೆ ಹಾಗೂ ಜಮಾ ಮಾಡಲು ವಿಫಲರಾದರೆ ಅನಿವಾರ್ಯವಾಗಿ ಅವರ ವಿರುದ್ದ ಶಿಸ್ತು ಕ್ರಮಜರುಗಿಸುವಂತೆ ಆದೇಶ ನೀಡಿರುತ್ತಾರೆ. ಈ ಆದೇಶಕ್ಕು ಬಗ್ಗದ ಅಧಿಕಾರಿಗಳು ಕಾನೂನಿನ ಸ್ಪಷ್ಟ ಉಲ್ಲಂಘನೆ ಮಾಡಿರುತ್ತಾರೆ.
ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಂಷುನ್ನೀಸಾ ರವರು ಆಯುಕ್ತರ ಪತ್ರಕ್ಕೆ ಸ್ಪಂದಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಿಗೆ 2018 ಮೇ 2ರಂದು ನೆನಪೋಲೆ ಹೊರಡಿಸಿ ಮೇ 4ರ ಸಂಜೆ 5.30ಗಂಟೆ ಒಳಗೆ ಹೆಚ್ಚುವರಿ ಶಿಕ್ಷಕರ ವೇತನದಲ್ಲಿ ಕಡಿತಗೊಳಿಸಿರುವುದರ ಹಣವನ್ನು ಕಡಿತಗೊಳಿಸಿಕೊಂಡ 74,200ರೂಗಳನ್ನು ಶಿಕ್ಷಕರ ಖಾತೆಗೆ ಜಮಾ ಮಾಡಲು ತಿಳಿಸಿದ್ದರೂ ಯಾವುದೇ ಆದೇಶಗಳಿಗೂ ಜಗ್ಗದೆ ಆನೆ ನಡೆದಿದ್ದೇ ದಾರಿ ಎಂದು ದುಂಡಾವರ್ತನೆಯನ್ನು ತೋರಿಸಿದ್ದರೂ ಅಧಿಕಾರಿಗಳು ವಿಫಲರಾಗಿರುವುದು ವಿಷಾಧವಾಗಿದೆ ಎಂದರು.
ಮಾರಪ್ಪರೆಡ್ಡಿ, ಬಿಇಓ ಕಛೇರಿಯ ಆಧೀಕ್ಷಕ: ಮೊದಲಿನಿಂದಲೂ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಲ್ಲಿ ಕಡಿತಗೊಳಿಸಿಕೊಂಡ ಹಣವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಾತೆಗೆ ಜಮಾವಣೆ ಮಾಡಿಕೊಂಡು ಬರಲಾಗಿದೆ. 2016ರ ವೇತನದಲ್ಲಿ ಜೂನ್ ತಿಂಗಳಲ್ಲಿ 100 ರೂಗಳಂತೆ 74,200ರೂಗಳನ್ನು ಕಡಿತಗೊಳಿಸಿಕೊಂಡು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಕ್ಕೆ ಅಧಿಕಾರಿಗಳ ಆಧೇಶದಂತೆ ಜಮಾ ಮಾಡಿದ್ದೇನೆ. ತಾಲೂಕು ಅಧ್ಯಕ್ಷರು ಪತ್ರ ನೀಡಿ ಇನ್ನೂ 100ರೂಗಳನ್ನು ಕಡಿತಗೊಳಿಸಿರುವ ಆಧೇಶ ಪತ್ರವನ್ನು ನೀಡಿ ಕಡಿತಗೊಳಿಸುವಂತೆ ಕೋರಿದ್ದರು . ಅದರಂತೆ ಜುಲೈ ತಿಂಗಳ ಶಿಕ್ಷಕರ ವೇತನದಲ್ಲಿ 74,200ರೂಗಳನ್ನು ಕಡಿತಗೊಳಿಸಿ ಮತ್ತೊಮ್ಮೆ ಅಧಿಕಾರಿಗಳ ಆಧೇಶದಂತೆ ತಾಲೂಕು ಅಧ್ಯಕ್ಷರ ಖಾತೆಗೆ ಜಮಾ ಮಾಡಿರುತ್ತೇನೆ. ಸಂಘದ ಬೈಲಾ ಮತ್ತು ಸುತ್ತೋಲೆಯಲ್ಲಿ ಸಂಪೂರ್ಣ ಹಣವನ್ನು ರಾಜ್ಯ ಸಂಘದ ಖಾತೆಗೆ ಜಮಾ ಮಾಡುವಂತೆ ಆದೇಶವಿದ್ದರೂ ತಾಲೂಕು ಸಂಘದ ಖಾತೆಗೆ ಜಮಾ ಮಾಡಿರುವುದು ತಪ್ಪಾಗಿದೆ. ಇನ್ನು ಮುಂದೆ ಹೀಗೆ ಆಗದಂತೆ ಜಾಗ್ರತೆ ವಹಿಸಲಾಗುವುದು.