ಪ್ರತಿ ಪಂಚಾಯಿತಿಗೊಂದು ರಾಗಿ ಖರೀದಿ ಕೇಂದ್ರ ಬೇಕು,ಪ್ರತಿ ಕ್ವಿಂಟಾಲ್ ರಾಗಿಗೆಗೆ 5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ:ರೈತ ಸಂಘ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ, ನ-26, ಪ್ರತಿ ಪಂಚಾಯಿತಿಗೊಂದು ರಾಗಿ ಖರೀದಿ ಕೇಂದ್ರ ತೆರೆಯಬೇಕು ಹಾಗೂ ಪ್ರತಿ ಕ್ವಿಂಟಾಲ್ ರಾಗಿಗೆಗೆ 5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ ಬೆಳೆ ನಮೂದನೆಯಲ್ಲಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ರೈತ ಸಂಘದಿಂದ ತಾಲ್ಲೂಕು ಕಛೇರಿ ಮುಂದೆ ರಾಗಿ ಸಮೇತ ಹೋರಾಟ ಮಾಡಿ ಶಿರಸ್ತೆದಾರ್‍ರವರ ಮುಖಾಂತರ ಕೃಷಿ ಮಂತ್ರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರೈತರ ಕಷ್ಟ ದಲ್ಲಾಳರ ಪಾಲೆಂಬಂತೆ ಈ ವರ್ಷ ಉತ್ತಮವಾದ ಮುಂಗಾರು ಮಳೆಯಿಂದ ಜಿಲ್ಲಾಧ್ಯಂತ ಸಮೃದ್ದವಾದ ರಾಗಿ ಬೆಳೆ ಬಂದಿದ್ದು, ಕೊರೋನಾದಿಂದ ತತ್ತರಿಸಿದ್ದ ರೈತರ ಮೊಗದಲ್ಲಿ ಸಂತೋಷ ಕಾಣಿಸುತ್ತಿದೆ. ಅದರಂತೆ ರಾಗಿ ಕಟಾವು ಮಾಡಿ ತನ್ನ ಕಷ್ಟಗಳಿಗೆ ಮಾರಾಟ ಮಾಡಲು ರೈತರು ಮುಂದಾಗಿದ್ದು, ಸರ್ಕಾರ ಸಮಯಕ್ಕೆ ಸರಿಯಾಗಿ ರಾಗಿ ಖರೀದಿ ಕೇಂದ್ರ ತೆರೆಯದ ಕಾರಣ ರೈತರು ಖಾಸಗಿ ವ್ಯಾಪಾರಸ್ಥರನ್ನು ಅವಲಂಬಿಸಬೇಕಾಗುತ್ತದೆ. ಅದನ್ನೇ ಖಾಸಗಿ ದಲ್ಲಾಳರು ರೈತರ ಅಮಾಯಕತನವನ್ನೇ ಬಳಿಸಿಕೊಳ್ಳುವ ಖಾಸಗಿ ರಾಗಿ ಖರೀದಿ ದಲ್ಲಾಳರು ನಿಗಧಿಪಡಿಸಿರುವ 1800 ರಿಂದ 2000 ರೂಪಾಯಿಗೆ ರೈತರಿಂದ ಖರೀದಿ ಮಾಡಿರುವ ರಾಗಿಯನ್ನು ದಾಸ್ತಾನು ಮಾಡಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದಾಗ ರೈತರಿಂದ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ರೈತರ ಹೆಸರಿನಲ್ಲಿ ಸರ್ಕಾರದ ಬೆಂಬಲ ಬೆಲೆಯನ್ನು ಪಡೆಯುತ್ತಿರುವುದರಿಂದ ರೈತರಿಗೆ ಸಿಗಬೇಕಾದ ಬೆಂಬಲ ಬೆಲೆ ದಲ್ಲಾಳರ ಪಾಲಾಗುತ್ತಿದೆಂದು ಸರ್ಕಾರದ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ತಿಂಗಳಾನುಗಟ್ಟಲೆ ಕಷ್ಟಾಪಟ್ಟು ಬೆಳೆದ ಬೆಳೆ ಮೂರು ಕಾಸಿಗೆ ಮಾರಾಟ ಮಾಡುವ ಪರಿಸ್ಥಿತಿಯ ಜೊತೆಗೆ ಕೃಷಿ ಹಾಗೂ ರವಿನ್ಯೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮರ್ಪಕವಾದ ಬೆಳೆ ಸಮೀಕ್ಷೆ ಮಾಡಿ ವರದಿ ನೀಡದ ಕಾರಣ ಕೆಲವು ರೈತರ ಜಮೀನಿನಲ್ಲಿ ರಾಗಿ ಬೆಳೆದಿದ್ದರೂ ಬೀಡು, ನೀಲಗಿರಿ ಎಂದು ತೋರಿಸುತ್ತಿರುವುದರಿಂದ ಸರ್ಕಾರದ ಬೆಂಬಲೆ ಬೆಲೆ ಪಡೆಯಲು ವಂಚಿತರಾಗುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿ. ಮಾನ್ಯ ಕೃಷಿ ಸಚಿವರು ಕೂಡಲೇ ಸರ್ಕಾರದ ಜೊತೆ ಚರ್ಚೆ ಮಾಡಿ ಸಮೃದ್ದವಾಗಿ ಬೆಳೆದಿರುವ ರಾಗಿ ಬೆಳೆಗಾರರಿಗೆ ಅನುಕೂಲವಾಗಲೆಂದು ಪ್ರತಿ ಪಂಚಾಯಿತಿಗೊಂದು ರಾಗಿ ಖರೀದಿ ಕೇಂದ್ರ ತೆರೆಯುವ ಜೊತೆಗೆ ಪ್ರತಿ ಕ್ವಿಂಟಾಲ್ ರಾಗಿಗೆಗೆ 5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ ಬೆಳೆ ನಮೂದು ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಕಟ್ಟಕಡೆಯ ರೈತರಿಗೂ ಬೆಂಬಲ ಬೆಲೆ ಸಿಗುವಂತೆ ಮಾಡುವ ಜೊತೆಗೆ ಖಾಸಗಿ ದಲ್ಲಾಳರಿಗೆ ಕಡಿವಾಣ ಹಾಕಿ ರೈತರ ಹಿತ ಕಾಯಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೆದಾರ್ ಕೊಂಡಪ್ಪ ರವರು ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ರಾಗಿ ಖರೀದಿ ಕೇಂದ್ರದ ನಿಮ್ಮ ಮನವಿ ಸರ್ಕಾರಕ್ಕೆ ಕಳುಹಿಸಿ ಬೆಳೆ ನಮೂದನೆಯಲ್ಲಾಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಭರವಸೆಯನ್ನು ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ನಳಿನಿ.ವಿ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಸ್ವಸ್ತಿಕ್ ಶಿವು, ಐತಂಡಹಳ್ಳಿ ಮಂಜುನಾಥ, ಮುನ್ನ, ಸುಪ್ರಿಂ ಚಲ, ಚಾಂದ್‍ಪಾಷ, ಜಮೀರ್ ಪಾಷ, ಜಾವೀದ್, ಕಿರಣ್, ನವೀನ್, ವೇಣು, ಕೇಶವ , ವಿನೋದ್, ಸುನಿಲ್, ಮುಂತಾದವರಿದ್ದರು
.