ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
“ಪೋಷಣ ಅಭಿಯಾನÀ” ಕಾರ್ಯಕ್ರಮವನ್ನು ದಿನಾಂಕ 17.09.2020 ರಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ರೈತಮಹಿಳೆಯರಿಗೆ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೋಲಾರ, ಇಫ್ಕೋ, ಬೆಂಗಳೂರು, ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಟಮಕ, ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಠಿಕಾಂಶದ ಫಲಿತಾಂಶಗಳನ್ನು ಸುಧಾರಿಸುವ ಪ್ರಧಾನ ಮಂತ್ರಿಯ ಸಮಗ್ರ ಪೋಷಣೆ ಅಭಿಯಾನ್ ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದೆ. ಪೋಷಣ ಅಭಿಯಾನದ ವಿಶಾಲವಾದ ವಿಷಯಗಳೆಂದರೆ: ಪ್ರಸವಪೂರ್ವ ಆರೈಕೆ, ಸೂಕ್ತವಾದ ಸ್ತನ್ಯಪಾನ (ಆರಂಭಿಕ ಮತ್ತು ವಿಶೇಷ), ಪೂರಕ ಆಹಾರ, ರಕ್ತಹೀನತೆ, ಬೆಳವಣಿಗೆಯ ಮೇಲ್ವಿಚಾರಣೆ, ಹುಡುಗಿಯರು-ಶಿಕ್ಷಣ, ಆಹಾರ ಪದ್ಧತಿ, ಮದುವೆಯ ಸರಿಯಾದ ವಯಸ್ಸು, ನೈರ್ಮಲ್ಯ, ಆರೋಗ್ಯಕರ ಆಹಾರ- ಆಹಾರ ಬಲವರ್ಧನೆಯಾಗಿದೆ.
ಶ್ರೀ. ಕೆ. ತುಳಸಿರಾಮ್, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕೋಲಾರರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಪೋಷಣ ಅಭಿಯಾನದ ಪ್ರಾಮುಖ್ಯತೆಯನ್ನು ತಿಳಿಸುತ್ತ ಆರೋಗ್ಯವಂತ ಹಾಗೂ ಸದೃಢ ದೇಶವನ್ನು ಪಡೆಯಬೇಕಾದರೆ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡುವುದು ಬಹಳ ಮುಖ್ಯ. ಶಿಫಾರಸ್ಸಿನ ಪ್ರಕಾರ ಒಬ್ಬ ಮನುಷ್ಯ ಒಂದು ದಿನಕ್ಕೆ ಸರಾಸರಿ 300 ಗ್ರಾಂ ನಷ್ಟು ತರಕಾರಿಗಳನ್ನು ಸೇವಿಸಬೇಕು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಅದರ ಅರ್ಧದಷ್ಟು ಮಾತ್ರ ಪೂರೈಕೆಯಾಗುತ್ತದೆ. ಸಮತೋಲನ ಆಹಾರದ ಪೂರೈಕೆಗಾಗಿ ಸ್ವತಃ ನಾವೇ ಕೈಜೋಡಿಸುವುದು ಒಳ್ಳೆಯದು. ಪೌಷ್ಠಿಕ ಕೈತೋಟ ಮಾಡುವುದರಿಂದ ನಮಗೆ ತರಕಾರಿಗಳ ಅವಶ್ಯಕತೆ ನಿಗಿಸಿಕೊಂಡಂತಾಗುತ್ತದೆ ಎಂದು ತಿಳಿಸಿದರು.
ಸನ್ಮಾನ್ಯ ಶ್ರೀ. ಕೆ. ಶ್ರೀನಿವಾಸಗೌಡ, ಮಾನ್ಯ ವಿಧಾನಸಭಾ ಸದಸ್ಯರು, ಕೋಲಾರ ಕ್ಷೇತ್ರ. ಕೋಲಾರರವರು ಉದ್ಘಾಟನೆಯನ್ನು ನೆರವೇರಿಸಿ ಒಂದು ಇಂಚು ಭೂಮಿ, ಒಂದು ಹನಿ ನೀರಿನಿಂದ ಒಂದು ಡಾಲರ್ನ್ನು ಗಳಿಸುವ ಹಾಗೆ ರೈತರು ಆಗಬೇಕು ಎಂದು ಸಲಹೆ ನೀಡುತ್ತ, ಹನಿ ನೀರಾವರಿ ಮಹತ್ವವನ್ನು ತಿಳಿಸಿದರು. ಭಾರತದ ಆಹಾರ ಪದ್ಧತಿಗಳಲ್ಲಿ ಸಮತೋಲನ ಆಹಾರವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಅಂದರೆ ಏಕದಳ ಧಾನ್ಯಗಳು ಹಾಗೂ ಬೆಳೆಕಾಳುಗಳನ್ನು ಹಾಗೂ ಅತೀ ಕಡಿಮೆ ಹಣ್ಣು ತರಕಾರಿಗಳನ್ನು ಸೇವಿಸಲಾಗುತ್ತದೆ. ಅದರಿಂದ ಸಾಕಷ್ಟು ಜನರಲ್ಲಿ ಅಪೌಷ್ಠಿಕತೆ ಕಂಡು ಬಂದಿದ್ದು, ಇದರ ಸುಧಾರಣೆಗೆ ಪೌಷ್ಠಿಕ ಸಮತೋಲಿತ ಆಹಾರವನ್ನು ಸೇವಿಸಬೇಕೆಂದು ತಿಳಿಸಿದರು. ತದನಂತರ ಇಫ್ಕೋ ಸಂಸ್ಥೆರವರ ‘ತರಕಾರಿ ಬೀಜಗಳ ಕಿಟ್’ನ್ನು ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ರೈತಮಹಿಳೆಯರಿಗೆ ವಿತರಿಸಿದರು.
ಮುಖ್ಯ ಅತಿಥಿಗಳಾದ ಶ್ರೀ. ಮಂಜುನಾಥಗೌಡ, ವ್ಯವಸ್ಥಾಪನಾ ಮಂಡಳಿ ಸದಸ್ಯರು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟರವರು ಭಾಷಣವನ್ನು ಮಾಡುತ್ತ, ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಠಿಕ ಆಹಾರವನ್ನು ಒದಗಿಸುವುದು ಮತ್ತು ಆರೋಗ್ಯವಾಗಿರಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು ಸದರಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸ್ಥಳಗಳಲ್ಲಿ ಈ ಪೌಷ್ಠಿಕತೆಯ ಬಗ್ಗೆ ಇತರರಿಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ. ನಾಗನಾಳ ಸೋಮಣ್ಣ, ಉಪಾಧ್ಯಕ್ಷರು, ಡಿಸಿಸಿಬಿ, ಕೋಲಾರರವರು ಮಾತನಾಡಿ, ನಮ್ಮ ದೇಶದಲ್ಲಿ ಸಾಕಷ್ಟು ಆಹಾರ ಧಾನ್ಯಗಳು ಮತ್ತು ಹಣ್ಣು ತರಕಾರಿಗಳು ಉತ್ಪಾದನೆಯಾಗುತ್ತಿದ್ದರು ಸಹಿತ ಸಾಕಷ್ಟು ಪ್ರಮಾಣದಲ್ಲಿ ಜನಸಾಮಾನ್ಯರಲ್ಲಿ ಅಪೌಷ್ಠಿಕತೆ ಕಂಡು ಬರುತ್ತಿದ್ದು, ಇದನ್ನು ಹೋಗಲಾಡಿಸಲು ಇಂತಹ ಪೋಷಣ ಅಭಿಯಾನ ಅತ್ಯವಶ್ಯಕ ಇದರಲ್ಲಿ ಪ್ರಮುಖವಾಗಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವವಾಗಿದ್ದು, ಇದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾಗಿದೆ.
ಶ್ರೀ. ಸತೀಶ್, ಉಪ ವ್ಯವಸ್ಥಾಪಕರು, ಇಫ್ಕೋ ಸಂಸ್ಥೆ ಬೆಂಗಳೂರು ರವರು ಇಫ್ಕೋ ಸಂಸ್ಥೆಯ ಸಾವಯವ ಉತ್ಪನ್ನಗಳು ಹಾಗೂ ನ್ಯಾನೋ ರಸಗೊಬ್ಬರಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಮತೋರ್ವ ಮುಖ್ಯ ಅತಿಥಿಗಳಾದ ಡಾ. ಟಿ.ಬಿ. ಬಸವರಾಜು, ಸಹ ವಿಸ್ತರಣಾ ನಿರ್ದೇಶಕರು (ದ), ತೋ.ವಿ.ವಿ, ಬಾಗಲಕೋಟರವರು ಮಾತನಾಡುತ್ತ, ಊಟದಲ್ಲಿ ತರಕಾರಿ, ಹಣ್ಣು, ದ್ವಿದಳ ಧಾನ್ಯ, ಸಿರಿಧಾನ್ಯಗಳಂತಹ ಸಮತೋಲಿತ ಆಹಾರವನ್ನು ಬಳಸಬೇಕು. ವಿವಿಧ ಬಗೆಯ ಆಹಾರ ಧಾನ್ಯಗಳ್ನನು ಉಪಯೋಗಿಸಿದರೆ ವಿವಿಧ ವಿಟಮಿನ್, ಮಿನಿರಲ್ ಸಿಗುತ್ತವೆ. ಮೊಳಕೆ ಬಂದ ಕಾಳುಗಳನ್ನು ಹಾಗೂ ಬೇಯಿಸಿದ ತರಕಾರಿಗಳನ್ನು ಹೆಚ್ಚಾಗಿ ಬಳಸಿದರೆ ಪೌಷ್ಠಿಕಾಂಶ ದೊರಕುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದಂತಹ ಡಾ. ಬಿ.ಜಿ. ಪ್ರಕಾಶ, ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರರವರು ಮಾತನಾಡಿ ಗಿಡದ ಬೆಳವಣಿಗೆಗೆ ಹೇಗೆ ಪ್ರಮುಖ ಪೋಷಕಾಂಶಗಳಾದ ಗೊಬ್ಬರಗಳ ಅವಶ್ಯಕತೆ ಇದೆಯೋ ಹಾಗೆಯೇ ಮನುಷ್ಯನ ಆರೋಗ್ಯಕ್ಕೂ ಸಮಗ್ರ ಪೋಷಕಾಂಶಗಳು ಅವಶ್ಯ. ಅಂದರೆ ಅನ್ನ, ಸಾರಿ ಚಪಾತಿ ಅಷ್ಟೇ ಸೇವಿಸದೇ ತರಕಾರಿ, ಕಾಳು ಸೇವಿಸಿದರೆ ವಿಟಮಿನ್, ಫೈಬರ್, ಕ್ಯಾಲ್ಸಿಯಂ, ಜಿಂಕ್ ಇತ್ಯಾದಿ ಪೋಷಕಾಂಶ ಲಭ್ಯವಾಗುತ್ತದೆ ಎಂದು ತಿಳಿಸುತ್ತ ಈ ನಿಟ್ಟಿನಲ್ಲಿ ಜನರಲ್ಲ್ತಿ ಅಂಗನವಾಡಿ ಆಶಾಕಾರ್ಯಕರ್ತೆಯರು ಜಾಗೃತಿ ಮೂಡಿಸಬೇಕಾಗಿದೆ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ತದನಂತರ ತಾಂತ್ರಿಕ ಅಧಿವೇಶನದಲ್ಲಿ ಡಾ. ಚಿಕ್ಕಣ್ಣ ಜಿ.ಎಸ್, ವಿಜ್ಞಾನಿ (ಗೃಹ ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ಕೋಲಾರರವರು ಪೌಷ್ಠಿಕಾಂಶದಲ್ಲಿ ಜೈವಿಕ ಬಲವರ್ಧಿತ ತಳಿಗಳ ಕುರಿತು, ಡಾ. ಜ್ಯೋತಿ ಕಟ್ಟೆಗೌಡರ್, ವಿಜ್ಞಾನಿ (ತೋಟಗಾರಿಕೆ), ಕೃಷಿ ವಿಜ್ಞಾನ ಕೇಂದ್ರ, ಕೋಲಾರ. ಕೈತೋಟದಲ್ಲಿ ತೋಟಗಾರಿಕಾ ಬೆಳೆಗಳ ಉತ್ಪಾದನಾ ಕ್ರಮಗಳು ಕುರಿತು ಹಾಗೂ ಡಾ. ಶ್ವೇತಾ, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಮಹಾವಿದ್ಯಾಲಯ, ಬೆಂಗಳೂರು ಕೈತೋಟದ ವಿವಿಧ ಮಾದರಿಗಳ ಕುರಿತು, ಡಾ. ಮಾಧವಿ ರೆಡ್ಡಿ, ಪ್ರೋಫೆಸರ್, ಎಸ್.ಡಿ.ಯು.ಎ.ಹೆಚ್.ಇ.ಆರ್, ಕೋಲಾರ, ಸಮತೋಲಿತ ಆಹಾರಕ್ಕಾಗಿ ಪೌಷ್ಠಿಕ ಆಹಾರದ ಕುರಿತು ಉಪನ್ಯಾಸ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲ ವಿಜ್ಞಾನಿಗಳು ಮತ್ತು ಸಿಬ್ಬಂದಿವರ್ಗದವರು ಹಾಗೂ ಇಫ್ಕೋ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು. ಡಾ. ಅನಿಲಕುಮಾರ್ ಎಸ್, ಸ್ವಾಗತ ಭಾಷಣವನ್ನು ಮಾಡಿದರು. ಡಾ. ಅಂಬಿಕಾ ಡಿ.ಎಸ್ ವಿಜ್ಞಾನಿ (ತೋಟಗಾರಿಕೆ) ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ಡಾ. ಚಿಕ್ಕಣ್ಣ ಜಿ.ಎಸ್, ವಿಜ್ಞಾನಿ (ಗೃಹ ವಿಜ್ಞಾನ) ವಂದನಾರ್ಪಣೆ ಮಾಡಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಶಶಿಧರ್ ಕೆ.ಆರ್ ಹಾಗೂ ಡಾ. ಜ್ಯೋತಿ ಕಟ್ಟೇಗೌಡರ್ ಹಾಗೂ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸುಮಾರು 102 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ರೈತಮಹಿಳೆಯರು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.