ಪಹಣಿ ಖಾತೆಗಳಲ್ಲಿ ಅಕ್ರಮ,ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು :ರೈತ ಸಂಘ ಹಾಗೂ ಹಸಿರುಸೇನೆಯ ಆಗ್ರಹ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಪಹಣಿ ಖಾತೆಗಳಲ್ಲಿ ಅಕ್ರಮ,ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು :ರೈತ ಸಂಘ ಹಾಗೂ ಹಸಿರುಸೇನೆಯ ಆಗ್ರಹ

 

ಶ್ರೀನಿವಾಸಪುರ, ಫೆ.26: ತಾಲ್ಲೂಕಿನಾದ್ಯಂತ ಅರಣ್ಯಭೂಮಿ ಸರ್ವೆ ನಂಬರುಗಳನ್ನು ಹಳೇ ಭೂದಾಖಲೆಗಳು ಮತ್ತು ಸರ್ವೆ ದಾಖಲೆಗಳಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡಿ ದರಖಾಸ್ತು ಮಂಜೂರು ಮತ್ತು ಪಹಣಿ ಖಾತೆಗಳಲ್ಲಿ ಅಕ್ರಮವಾಗಿ ಮಾಡಿದ್ದು, ಕೂಡಲೇ ಇವುಗಳನ್ನು ರದ್ದುಗೊಳಿಸಿ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಂಡು ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.
ಅವರು ಇಂದು ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡುತ್ತಾ ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಇನ್ನೂ ಕಟ್ಟಕಡೆಯ ಬಡವರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ರೈತರು, ಕೃಷಿ ಜಮೀನಿನ ಪಕ್ಕದಲ್ಲಿರುವ ಅರಣ್ಯ ಭೂಮಿಯನ್ನು ಒಂದು ಅಡಿ ಒತ್ತುವರಿ ಮಾಡಿಕೊಂಡರೆ ಅದನ್ನು ದೊಡ್ಡ ವಿಷಯ ಮಾಡಿ ರೈತನ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ, ದರ್ಪ ತೋರುವ ಅರಣ್ಯ ಅಧಿಕಾರಿಗಳಿಗೆ ರಾಜಾರೋಷವಾಗಿ ತಾಲ್ಲೂಕಿನಾದ್ಯಂತ ಅರಣ್ಯಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರ ಮೇಲೆ ಕ್ರಮ ಕೈಗೊಂಡು ಅರಣ್ಯಭೂಮಿಯನ್ನು ಉಳಿಸಲು ಅಧಿಕಾರಿಗಳು ಮುಂದಾಗದೇ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಅರಣ್ಯಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಲು ಇಲಾಖೆಯ ಸಿಬ್ಬಂದಿಯ ಜೊತೆಗೆ ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳ ತಂಡವೇ ರಾತ್ರೋರಾತ್ರಿ ಕೆಲಸ ಮಾಡಿ ಬಲಾಡ್ಯರಿಂದ ಲಕ್ಷ…ಲಕ್ಷ ಹಣವನ್ನು ಪಡೆದುಕೊಂಡು ಅವರ ಹೆಸರಿಗೆ ನಕಲಿ ದಾಖಲೆಗಳ ಮುಖಾಂತರ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಬ್ಯಾಂಕ್ ಅಧಿಕಾರಿಗಳು ಲಕ್ಷ ರೂಪಾಯಿ ರೈತರು ಸಾಲ ಕೇಳಿದರೆ ನೂರಾರು ಕಾನೂನು, ದಾಖಲೆಗಳನ್ನು ಕೇಳುತ್ತಾರೆ ಆದರೆ ಕೆನರಾ ಬ್ಯಾಂಕ್ ಅಧಿಕಾರಿಗಳು ನೂರಾರು ಎಕರೆ ಅರಣ್ಯ ಭೂಮಿಗೆ ಕೋಟ್ಯಾಂತರ ರೂಗಳ ಸಾಲವನ್ನು ಪ್ರಭಾವಿ ರಾಜಕಾರಣಿಗಳಿಗೆ ನೀಡಿದ್ದಾರೆ. ಅದರ ಜೊತೆಗೆ ಬಡವರು ಹಾಗೂ ಸ್ವಾಧೀನದಲ್ಲಿರುವ ರೈತರು ಸರ್ಕಾರಿ ಗೋಮಾಳ ಮಂಜೂರಾತಿಗಾಗಿ 50, 53, 57 ರ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ವರ್ಷಗಳು ಕಳೆದಿವೆ. ಅರ್ಜಿ ಸಲ್ಲಿಸಿದವರಿಗೆ ಬಡವರಿಗೆ ಇದುವರೆವಿಗೂ ಭೂಮಿ ಮಂಜೂರಾಗಿಲ್ಲ. ಆದರೆ ಗೋಮಾಳ, ಗುಂಡುತೋಪು, ಕೆರೆಅಂಗಳ, ರಾತ್ರೋರಾತ್ರಿ ಭೂ ಮಾಫಿಯಾ ದೊರೆಗಳಿಗೆ ಯಾವ ರೀತಿ ಮಂಜೂರಾಗುತ್ತದೆ ಯಕ್ಷ ಪ್ರಶ್ನೆಯಾಗಿದೆ. ಅದರ ಜೊತೆಗೆ ಸರ್ಕಾರದಿಂದ ಜನಸಾಮಾನ್ಯರಿಗೆ ಬರುವ ಕೋಟ್ಯಾಂತರ ರೂಪಾಯಿ ಅನುದಾನಗಳು ಅಧಿಕಾರಿಗಳ ಜೇಬು ಸೇರುತ್ತಿದೆ. ಗಿಡ ನಾಟಿ ಮಾಡುವುದರಿಂದ ಹಿಡಿದು ಉಚಿತ ಉಜ್ವಲ ಯೋಜನೆ (ಗ್ಯಾಸ್ ಸ್ಟೌವ್ ವಿತರಣೆ)ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುವ ಜೊತೆಗೆ ಕೂಡಲೇ ತಾಲ್ಲೂಕಿನಾದ್ಯಂತ ಒತ್ತುವರಿಯಾಗಿರುವ ಅರಣ್ಯಭೂಮಿಯನ್ನು ತೆರವುಗೊಳಿಸಿ ಕುಮ್ಮಕ್ಕು ನೀಡಿರುವ ಅಧಿಕಾರಿಗಳು ಮತ್ತು ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಂಡು ಇಲಾಖೆಯಲ್ಲಿನ ಭ್ರಷ್ಟಾಚಾರದಲ್ಲಿ ತೊಡಗಿರುವ ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಿ ಕೆಲಸದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿ.ಒ.ಆರ್.ಪಿ ನವೀನ್‍ಕುಮಾರ್, ಅನಿಲ್‍ಕುಮಾರ್, ತಾಲ್ಲೂಕಿನಾದ್ಯಂತ ಅರಣ್ಯಭೂಮಿ ಒತ್ತುವರಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ ಆದರೆ ಒತ್ತುವರಿ ಮಾಡಿಕೊಂಡಿರುವವರು ಪ್ರಭಾವಿ ರಾಜಕಾರಣಿಗಳು ಆದರೂ ಅವರ ವಿರುದ್ಧ ಕ್ರಮ ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಭರವಸೆಯನ್ನು ನೀಡಿದರು.
ಈ ಹೋರಾಟದಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾದ್ಯಕ್ಷೆ ಎ.ನಳಿನಿ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಂಗಸಂದ್ರ ತಿಮ್ಮಣ್ಣ, ಷೇಕ್ ಷಫೀವುಲ್ಲಾ, ಶಿವ, ಸಹದೇವಣ್ಣ, ಲೋಕೇಶ್, ಲಕ್ಷ್ಮಣ್, ಮುನಿಯಪ್ಪ, ಸುಪ್ರೀಂ ಚಲ ಜಗದೀಶ್, ಬೂರಗನಹಳ್ಳಿ ಆನಂದ್, ನಾರಾಯಣಸ್ವಾಮಿ ಆಲಮಟ ಶಿವ, ಮತ್ತಿತರರು ಹಾಜರಿದ್ದರು.