ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಪತ್ರಿಕಾ ಸರಬರಾಜುದಾರರೇ ನಿಜವಾದ ಕೊರೋನಾ ವಾರಿಯರ್ಸ್
ಲಾಕ್ಡೌನ್ನಲ್ಲೂ ಮನೆಮನೆಗೂ ಪತ್ರಿಕೆ-ಬ್ಯಾಲಹಳ್ಳಿ ಗೋವಿಂದಗೌಡ
ಕೋಲಾರ:- ಕೊರೋನಾ ಸಂಕಷ್ಟದಲ್ಲೂ ಪ್ರತಿ ಮನೆಗೂ ಪತ್ರಿಕೆ ತಲುಪಿಸಿ ಜಾಗೃತಿ ಮೂಡಿಸುವ ಪತ್ರಿಕಾ ವಿತರಣಾ ಯುವಕರೇ ನಿಜವಾದ ಕೋವಿಡ್ ವಾರಿಯರ್ಸ್ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಅವರು ಪತ್ರಿಕಾ ಹಾಕುವ ಹುಡುಗರಿಗೆ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಪತ್ರಿಕೆಗೆ ಸುದ್ದಿ ಸಂಗ್ರಹಿಸಿ ತಲುಪಿಸುವ ಕೆಲಸ ಪತ್ರಕರ್ತರು ಮಾಡಿದರೂ ಅವರು ಮಾಡಿದ ಸುದ್ದಿ ಕೊನೆಯದಾಗಿ ಫಲಾನುಭವಿಗಳಾದ ನಾಗರೀಕರಿಗೆ ತಲುಪುವುದು ಪತ್ರಿಕೆ ಹಾಕುವ ಇವರಿಂದಲೇ ಎಂದು ತಿಳಿಸಿದರು.
ಪತ್ರಿಕಾರಂಗಕ್ಕೆ ಒಂದು ರೀತಿಯಲ್ಲಿ ಇವರು ಆಧಾರ ಸ್ಥಂಭ ಎಂದು ಬಣ್ಣಿಸಿದ ಅವರು, ತಮ್ಮ ಓದು,ವಿದ್ಯಾಭ್ಯಾಸ,ಉದ್ಯೋಗದ ನಡುವೆಯೂ ಮುಂಜಾನೆ 4 ಗಂಟೆಗೆ ಪತ್ರಿಕೆಗಳನ್ನು ಹಿಡಿದು ಮನೆಮನೆಗೂ ತಲುಪಿಸುವ ಮೂಲಕ ಪತ್ರಿಕೆ ಓದುವ ಹವ್ಯಾಸವನ್ನು ಜೀವಂತವಾಗಿಟ್ಟಿದ್ದಾರೆ ಎಂದರು.
ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪತ್ರಕರ್ತರು ಸೇರಿದಂತೆ ಸಮಾಜದಲ್ಲಿ ಸಂಕಷ್ಟದಲ್ಲಿರುವ ಅನೇಕ ಸಮುದಾಯಗಳಿಗೆ ಲಾಕ್ಡೌನ್ ಸಂದರ್ಭದಲ್ಲಿ ನೆರವು ಒದಗಿಸಲು ಅನೇಕ ದಾನಿಗಳು ಮುಂದೆ ಬಂದರು ಆದರೆ ಈವರೆಗೂ ಪತ್ರಿಕೆ ಹಾಕುವ ಈ ಹುಡುಗರಿಗೆ ಯಾರೂ ನೆರವಾಗಿರಲಿಲ್ಲ ಎಂದರು.
ಪತ್ರಿಕಾ ವಿತರಣಾ ವ್ಯವಸ್ಥಾಪಕ ಸೋಮಶೇಖರ್, ಇಂತಹ ಸಂಕಷ್ಟದ ಸಂದರ್ಭದಲ್ಲಿ ಮನ್ವಂತರ ಸೇವಾ ಟ್ರಸ್ಟ್ ಮೂಲಕ ನೆರವು ನೀಡಲು ಮುಂದೆ ಬಂದ ಬ್ಯಾಲಹಳ್ಳಿ ಗೋವಿಂದಗೌಡರು ಹಾಗೂ ಟ್ರಸ್ಟ್ನ ಪಾ.ಶ್ರೀ.ಅನಂತರಾಮ್ ಮತ್ತಿತರರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್,ಖಜಾಂಚಿ ಎಸ್.ಎನ್.ಪ್ರಕಾಶ್, ಪತ್ರಕರ್ತರಾದ ಕೋ.ನಾ.ಮಂಜುನಾಥ್, ಗಿರೀಶ್, ಸುನೀಲ್, ಪತ್ರಿಕಾ ವಿತರಣೆ ವ್ಯವಸ್ಥಾಪಕ ಸೋಮಶೇಖರ್, ಶ್ರೀನಿವಾಸಶೆಟ್ಟಿ, ಸಾಗರ್,ಹರೀಶ್ ಮತ್ತಿತರರಿದ್ದರು.