ಪತ್ರಕರ್ತರ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಸಭೆ ಮಾರ್ಚ್ ವೇಳೆಗೆ ಪತ್ರಕರ್ತರಿಗೆ ನಿವೇಶನ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ಪತ್ರಕರ್ತರ ಸಹಕಾರ ಸಂಘದಲ್ಲಿ ಈಗಾಗಲೇ ನಿವೇಶನಕ್ಕಾಗಿ ನೊಂದಾಯಿಸಿಕೊಂಡಿರುವ ಪತ್ರಕರ್ತರಿಗೆ ಮಾರ್ಚ್ ಅಂತ್ಯದೊಳಗೆ ರಿಯಾಯಿತಿ ದರದಲ್ಲಿ ನಿವೇಶನ ಒದಗಿಸುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಘೋಷಿಸಿದರು.
ಮಂಗಳವಾರ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ 2019-20ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಈಗಾಗಲೇ 4 ಎಕರೆ ಜಮೀನನ್ನು ಗುರುತಿಸಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ಈಗಾಗಲೇ ಪತ್ರಕರ್ತರ ಸಹಕಾರ ಸಂಘದಲ್ಲಿ 60 ಪತ್ರಕರ್ತರು ನಿವೇಶನಕ್ಕಾಗಿ ನೊಂದಾಯಿಸಿದ್ದು, ಡಿಸೆಂಬರ್ ಅಂತ್ಯದೊಳಗೆ ಶೇ.50 ರಷ್ಟು ಹಣವನ್ನು ಠೇವಣಿ ಇಡುವ ಪತ್ರಕರ್ತರಿಗೆ ನಿವೇಶನವನ್ನು ನೀಡುವುದಾಗಿ ತಿಳಿಸಿದರು.
ಪತ್ರಕರ್ತರ ಸಹಕಾರ ಸಂಘ ಕೆ.ಎಸ್.ಗಣೇಶ್ ನೇತೃತ್ವದಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ, ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಲಾಭದ ಹಾದಿಯಲ್ಲಿ ಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೈಯೆಲ್ಲಾ ಕಣ್ಣಾಗಿಸಿ ಒಂದು ಸಂಘ ನಡೆಸಬೇಕಾಗುತ್ತದೆ, ಟೀಕೆಗಳಿಗೆ ಕಿವಿಗೊಡುವ ಅಗತ್ಯವಿಲ್ಲ, ನಮ್ಮ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಂಡರೆ ಸಾಕು ಮತ್ತು ಸಹಕಾರ ರಂಗದಲ್ಲಿರುವವರು ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, 2007 ರಲ್ಲಿ ಸಹಕಾರ ಸಂಘಕ್ಕೆ ಶ್ರೀಕಾರ ಹಾಡಿದರೂ 5 ವರ್ಷ ಬಾಲಗ್ರಹ ಪೀಡಿತವಾಗಿದ್ದ ಸಂಘಕ್ಕೆ ಗಣೇಶ್ ನೇತೃತ್ವದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರು ಜೀವ ತುಂಬಿದ್ದಾರೆ, ಸಂಘ ಇದೀಗ 1.74 ಲಕ್ಷ ಲಾಭದೊಂದಿಗೆ ಸ್ವಂತಬಲದ ಮೇಲೆ ನಿಲ್ಲುವ ಶಕ್ತಿ ಪಡೆದುಕೊಂಡಿದೆ ಎಂದರು.
ಇದಕ್ಕೆ ಸಂಘದ ಅಧ್ಯಕ್ಷ ಗಣೇಶ್ ಹಾಗೂ ಕಾಯದರ್ಶಿ ಗಂಗಾಧರ್ ಅವರ ನಿಸ್ವಾರ್ಥ ಸೇವೆ ಕಾರಣವಾಗಿದೆ, ಷೇರು ಬಂಡವಾಳವೂ 3.32 ಲಕ್ಷಕ್ಕೇರಿರುವುದು ಸ್ವಾಗತಾರ್ಹ ಬೆಳವಣಿಗೆ, ಸಾಲ ನೀಡಲು ಭಯವಿತ್ತು ಆದರೆ ಸಾಲ ನೀಡಿಕೆ ಮತ್ತು ಶೇ.100 ವಸೂಲಾತಿ ಶ್ಲಾಘನೀಯ ಎಂದರು.
ಅರ್ಧಕೋ.ವಹಿವಾಟು
50ಕೋಟಿಗೆ ಏರಿಕೆ

ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಅಧ್ಯಕ್ಷತೆ ವಹಿಸಿ, ಈ ವರ್ಷ ಅರ್ಧ ಕೋಟಿ ವಹಿವಾಟು ನಡೆಸಿದ್ದೇವೆ, ಮುಂದಿನ ವರ್ಷಗಳಲ್ಲಿ ಎಲ್ಲಾ ನಿರ್ದೇಶಕರು, ಷೇರುದಾರರ ಸಹಕಾರಿದಿಂದ 50 ಕೋಟಿಗೆ ಏರಿಸುವ ಗುರಿ ತಲುಪುವ ವಿಶ್ವಾಸವಿದೆ ಎಂದರು.
ನಯಾಪೈಸೆ ಅವ್ಯವಹಾರ ಮಾಡಿಲ್ಲ, ಸದಸ್ಯರ ನಂಬಿಕೆ ಉಳಿಸಿಕೊಂಡಿದ್ದೇವೆ, ಚುನಾವಣೆ ರಾಜಕೀಯ ಬೇಡ, ಸಂಘ ಉಳಿಸಿ ಬೆಳೆಸೋಣ, ಕೋವಿಡ್ ಸಂಕಷ್ಟದ ಕಾಲದಲ್ಲೂ ನಷ್ಟವಾಗದಂತೆ ಸುಭದ್ರವಾದ ಹೆಜ್ಜೆ ಇಡುತ್ತಿದ್ದೇವೆ, ರಾಜ್ಯ ಪತ್ರಕರ್ತರ ಸಹಕಾರ ಸಂಘದ ಮಾದರಿ ಸದಸ್ಯರಿಗೆ 3 ಲಕ್ಷ ಸಾಲ ನೀಡುವ ಆಶಯವಿದೆ ಎಂದರು.
ಈಗ 10 ಸಾವಿರ ರೂ ನೀಡುತ್ತಿರುವ ಕೈಸಾಲವನ್ನು 20 ಸಾವಿರಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಘೋಷಿಸಿ, ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಅಗತ್ಯ, ಪಡಿತರ ಡಿಪೋ ಮಾಡೋಣ ಎಂದರು.
ಸಂಘದ ಸದಸ್ಯರ ಮನವಿಯಂತೆ ಪ್ರತಿ ತಾಲ್ಲೂಕಿನಲ್ಲಿ ಸದಸ್ಯರು ಮುಂದೆ ಬಂದರೆ ಸಂಘದ ಹೆಸರಿನಲ್ಲಿ ಛಾಪಾ ಕಾಗದ ಮಾರಾಟ ಕೇಂದ್ರ ಸ್ಥಾಪನೆಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಕಾರ್ಯದರ್ಶಿ ಎ.ಜಿ.ಸುರೇಶ್‍ಕುಮಾರ್, ಪತ್ರಕರ್ತರಾದ ರಾಜೇಂದ್ರ,ಎಸ್.ವಿ.ಲೋಕೇಶ್,ಜೆ.ಸತ್ಯರಾಜ್, ಸಿ.ಜಿ.ಮುರಳಿ ಮತ್ತಿತರರು ಮಾತನಾಡಿ, ಲಾಭದಾಯಕ ಚಟುವಟಿಕೆಗಳಿಗೆ ಒತ್ತು ನೀಡಿ, ನೀಡುತ್ತಿರುವ ಸಾಲ 25 ಸಾವಿರಕ್ಕೆ ಏರಿಸಿ, ಗೋವಿಂದಗೌಡರನ್ನು ನಂಬಿ ನಿವೇಶನಕ್ಕೆ ಹಣ ಚೀಟಿ ಮೂಲಕ ಹಣ ಠೇವಣಿ ಇಟ್ಟಿದ್ದೇವೆ, ಕಾಲಮಿತಿಯಲ್ಲಿ ನಿವೇಶನ ಶೀಘ್ರ ಕೊಡಿಸಿ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರ ಸಂಘದ ಉಪಾಧ್ಯಕ್ಷ ಕೋ.ನಾ.ಮಂಜುನಾಥ್, ಸಂಘ ಕಳೆದ ಸಾಲಿನಲ್ಲಿ ನಡೆದ ವಿವಿಧ ಚಟುವಟಿಕೆಗಳ ಕುರಿತು ವರದಿ ಮಂಡಿಸಿ, ಮುಂದಿನ ಸಾಲಿನಲ್ಲಿ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಪತ್ರಕರ್ತರ ಸಂಘದ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ನಿರ್ದೇಶಕರಾದ ಎ.ಸದಾನಂದ,ಹೆಚ್.ಎನ್.ಮುರಳಿಧರ್, ಆರ್.ವೆಂಕಟೇಶ್‍ಬಾಬಾ, ಎಸ್.ಎನ್.ಪ್ರಕಾಶ್,ಬಿ.ಸುರೇಶ್, ಎಂ.ನಾಗರಾಜಯ್ಯ,ಎಂ.ನಾರಾಯಣಪ್ಪ,ಕೆ.ರಾಮಮೂರ್ತಿ, ಪಿಎನ್.ದಾಸ್,ಎನ್.ದುನಿಯಾ ಮುನಿಯಪ್ಪ, ಕಾರ್ಯದರ್ಶಿ ಗಂಗಾಧರ್ ಮತ್ತಿತರರಿದ್ದು, ಅವಿಭಜಿತ ಜಿಲ್ಲೆಯ ಷೇರುದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.