ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ನ.14-20ರವರೆಗಿನ ಸಹಕಾರಿ ಸಪ್ತಾಹದಲ್ಲಿ ಸದಸ್ಯತ್ವ ಹೆಚ್ಚಿಸಲು ಚಿಂತನೆ ಸಹಕಾರಿಗಳ ಆತ್ಮವಿಮರ್ಶೆಗೆ ಇದು ಸಕಾಲ-ಬ್ಯಾಲಹಳ್ಳಿ ಗೋವಿಂದಗೌಡ
ಕೋಲಾರ:- ಅವಿಭಜಿತ ಜಿಲ್ಲೆಯಲ್ಲಿ ಶೇ.28 ರಷ್ಟಿರುವ ಸಹಕಾರ ಸಂಸ್ಥೆಗಳ ಸದಸ್ಯತ್ವವನ್ನು ಕನಿಷ್ಟ 75ಕ್ಕೇರಿಸುವ ಗುರಿ ತಲುಪಲು ತಮ್ಮ ಪ್ರಾಮಾಣಿಕ ಕೊಡುಗೆ ಏನು ಎಂಬುದರ ಕುರಿತು ಸಹಕಾರಿ ಸಪ್ತಾಹದಲ್ಲಿ ಸಹಕಾರಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ಬುಧವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಸಹಕಾರಿ ಸಪ್ತಾಹದ ಅಂಗವಾಗಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ಪ್ರತಿವರ್ಷ ನವೆಂಬರ್ 14 ರಿಂದ 20 ರವರೆಗೂ ದಿವಂಗತ ಪ್ರಧಾನಿ ನೆಹರು ಹುಟ್ಟುಹಬ್ಬದ ಅಂಗವಾಗಿ ಸಹಕಾರಿ ಸಪ್ತಾಹ ಮಾಡುತ್ತಿದ್ದೇವೆ, ಆದರೆ ಸದಸ್ಯತ್ವದ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಎರಡೂ ಜಿಲ್ಲೆಗಳು ಆರ್ಥಿಕವಾಗಿ ಉಳಿಯಲು ಕಾರಣರಾದ ಜಿಲ್ಲೆಗೆ ಮಿಶ್ರತಳಿ ರಾಸುಗಳನ್ನು ತಂದ ಮಾಜಿ ಕೇಂದ್ರ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪ ಹಾಗೂ ಹಾಲು ಒಕ್ಕೂಟದ ಸಹಕಾರಿ ಕಲ್ಪನೆ ಹೊಂದಿದ್ದ ಕುರಿಯನ್ ಅವರ ಸ್ಮರಣೆ ಅತ್ಯಗತ್ಯ ಎಂದರು.
ರಾಜಕೀಯವಾಗಿ ಬೆಳೆಯಲು ನಾವು ಸಹಕಾರಿ ಸಂಸ್ಥೆಗಳನ್ನು ಮೆಟ್ಟಿಲುಗಳಾಗಿ ಬಳಸಿಕೊಳ್ಳುತ್ತಿದ್ದೇವೆ, ನಮ್ಮ ಸ್ವಾರ್ಥಕ್ಕಾಗಿ ಈ ಸಂಸ್ಥೆಗಳಲ್ಲಿ ರಾಜಕೀಯ ತಂದು ಹಾಳು ಮಾಡುವ ಕೆಲಸ ನಿರಂತರವಾಗಿ ನಡೆದಿದೆ ಎಂದು ತಿಳಿಸಿದರು.
ರಾಜಕೀಯ ಚುನಾವಣೆಗೆ ಸೀಮಿತವಾಗಿರಲಿ ನಂತರ ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಬೆರಸಬಾರದು ಎಂಬ ಕಲ್ಪನೆ ಬಲಗೊಳ್ಳಬೇಕು, ಇಲ್ಲವಾದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಬದುಕಿನ ಜೀವಾಳವಾದ ಹೈನೋದ್ಯಮಕ್ಕೆ ಕುತ್ತುಬರುತ್ತದೆ ಎಂದು ಎಚ್ಚರಿಸಿದರು.
ರಾಜಕೀಯ ಕಾರಣಗಳಿಗಾಗಿ ಅನೇಕ ಎಂಪಿಸಿಎಸ್ಗಳಲ್ಲಿ ಆಡಿಟ್ಗೆ ಅಡ್ಡಿ ಪಡಿಸಿರುವ ನಿದರ್ಶನಗಳಿವೆ ಇದು ಸರಿಯಲ್ಲ ಎಂದ ಅವರು, ನಮ್ಮ ಮನಸ್ಸು ಶುದ್ದ ಮಾಡಿಕೊಂಡು ಬಡ ಜನರಿಗೆ ನೆರವಾಗೋಣ ಎಂಬ ಸಂಕಲ್ಪದೊಂದಿಗೆ ಸಪ್ತಾಹ ಆಚರಿಸೋಣ ಎಂದರು.
ಸಹಕಾರದ ಮಹತ್ವ ಸಾರಲು
ನ.14 ರಿಂದ ಸಪ್ತಾಹ
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವೆಂಕಟಸ್ವಾಮಿ, ಸಹಕಾರಿ ಸಪ್ತಾಹವನ್ನು ನಾವು ನ.14 ರಿಂದ 20 ರವರೆಗೂ ಆಚರಿಸುತ್ತಿದ್ದೇವೆ, ಜನತೆಗೆ ಸಹಕಾರ ಸಂಸ್ಥೆಗಳ ಮಹತ್ವವನ್ನು ತಿಳಿಸುವುದೇ ಇದರ ಉದ್ದೇಶವಾಗಿದೆ ಎಂದರು.
ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ 2019 ಕಾರ್ಯಕ್ರಮವನ್ನು ನ.14 ರಿಂದ 20 ರವರೆಗೆ `ನವ ಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಧ್ಯೇಯವಾಕ್ಯದಡಿ ಜಿಲ್ಲೆಯ ವಿವಿಧ ಕಡೆ ಆಚರಿಸುತ್ತಿರುವುದಾಗಿ ತಿಳಿಸಿದರು.
ಈ ಸಂಬಂಧ ನ.14 ರಂದು 9-30 ಗಂಟೆಗೆ ನಗರದ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿ ಆವರಣದಲ್ಲಿ ಶಾಸಕ ಕೆ.ಶ್ರೀನಿವಾಸಗೌಡರಿಂದ ಸಹಕಾರ ಸಪ್ತಾಹದ ಧ್ವಜಾರೋಹಣ ನೆರವೇರಿಸುವರು ಎಂದರು.
ಈ ದಿನದಂದು `ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ’ ವಿಷಯದಡಿ ಕಾರ್ಯಕ್ರಮ ಆಚರಿಸಲಾಗುವುದು ಎಂದರು.
ಮೊದಲ ದಿನದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವೇ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಕರ್ನಾಟಕ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಜಿಲ್ಲಾ ಸರಬರಾಜು ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಶಾಂತಮ್ಮ, ಸಹಕಾರಿ ಯೂನಿಯನ್ ಉಪಾಧ್ಯಕ್ಷ ಎಂ.ಕೃಷ್ಣೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ,ಕೆವಿ.ದಯಾನಂದ್,ಅನಿಲ್ ಕುಮಾರ್, ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್,ಹಾಗೂ ಯೂನಿಯನ್ನ ಎಲ್ಲಾ ನಿರ್ದೇಶಕರು ಉಪಸ್ಥಿತರಿರುವರು ಎಂದು ತಿಳಿಸಿದರು.
ನ.15 ರಂದು ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಎಂಪಿಸಿಎಸ್ನ ಆವರಣದಲ್ಲಿ `ಸಹಕಾರ ಸಂಸ್ಥೆಗಳಿಗಾಗಿ ಶಾಸನಾಧಿಕಾರ ರೂಪಿಸುವುದು’ ಕುರಿತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ನ.16 ರಂದು ಬಂಗಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ `ಸಹಕಾರ ಸಂಸ್ಥೆಗಳ ಯಶೋಗಾಥೆಗಳ ಮೂಳಕ ಸಹಕಾರ ಶಿಕ್ಷಣ ತರಬೇತಿಯನ್ನು ಪುನರ್ ರೂಪಿಸುವುದು’ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ನ.17 ರಂದು ಮಾಲೂರಿನಲ್ಲಿ `ಸಹಕಾರ ಸಂಸ್ಥೆಗಳ ಸಹಕಾರವನ್ನು ಬಲಗೊಳಿಸುವುದು’ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ನ.18 ರಂದು ಮುಳಬಾಗಿಲಿನ ಎಪಿಎಂಸಿ ಯಾರ್ಡ್ನ ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಶಿಬಿರ ಕಚೇರಿಯಲ್ಲಿ `ಸಹಕಾರ ಸಂಸ್ಥೆಗಳ ಮೂಲಕ ಸರ್ಕಾರದ ಹೊಸ ಯೋಜನೆಗಳು’ ದಿನವನ್ನಾಗಿ ಆಚರಿಸುತ್ತಿರುವುದಾಗಿ ತಿಳಿಸಿದರು.
ನ. 19 ರಂದು ಕೆಜಿಎಫ್ನ ಕಿಂಗ್ ಜಾರ್ಜ್ ಹಾಲ್ನಲ್ಲಿ `ಯುವಜನ ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು’ ಶಾಸಕಿ ರೂಪಕಲಾ ಶಶಿಧರ್ ಮತ್ತಿತರರು ಉಪಸ್ಥಿತರಿರುವರು ಎಂದರು.
ನ.20 ರಂದು ಬೆಳಗ್ಗೆ 10-30 ಗಂಟೆಗೆ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ `ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಡಿಕೆ ಮತ್ತು ಗಣಕೀಕರಣ’ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕರಾದಅಂಕತಟ್ಟಿ ಎ.ಸಿ.ಭಾಸ್ಕರ್, ಉರಿಗಿಲಿ ರುದ್ರಸ್ವಾಮಿ, ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್,ದೊಡ್ಡಶಿವಾರ ಎಸ್ಎಫ್ಸಿಎಸ್ ಅಧ್ಯಕ್ಷ ಗೋವರ್ಧನರೆಡ್ಡಿ,ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಭಾರತಿ,ಸಿಬ್ಬಂದಿ ರವಿ, ಲಕ್ಷ್ಮಿ ಮತ್ತಿತರರಿದ್ದರು.
ಚಿತ್ರಶೀರ್ಷಿಕೆ:(ಫೋಟೊ-14ಕೋಲಾರ1):ಕೋಲಾರದಲ್ಲಿ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ಸಹಕಾರಿ ಯೂನಿಯನ್ ಅಧ್ಯಕ್ಷ ವೆಂಕಟಸ್ವಾಮಿ ಸುದ್ದಿಗೋಷ್ಟಿ ನಡೆಸಿ ಸಹಕಾರಿ ಸಪ್ತಾಹದ ಕುರಿತು ಮಾಹಿತಿ ನೀಡಿದರು.