ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ ಹೊರ ವಲಯದಲ್ಲಿನ ಪುಂಗನೂರು ಕ್ರಾಸ್ ಸಮೀಪದ ಸೀತಾ ರಾಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಪ್ರದೇಶಿಕ ಸಭೆಯನ್ನು ಕೋಚಿಮುಲ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಚ್.ವಿ.ತಿಪ್ಪಾರೆಡ್ಡಿ ಉದ್ಘಾಟಿಸಿದರು.
ಶ್ರೀನಿವಾಸಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕು ಎಂದು ಕೋಚಿಮುಲ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಚ್.ವಿ.ತಿಪ್ಪಾರೆಡ್ಡಿ ಹೇಳಿದರು.
ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ ಕುಸಿದಿದೆ. ಆದರೆ ಬೇಡಿಕೆ ಹೆಚ್ಚಿದೆ. ಇಂಥ ಪರಿಸ್ಥಿತಿಯಲ್ಲಿ ರೈತರು ಹಾಲು ಉತ್ಪಾದನೆ ಹೆಚ್ಚಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಮೆಕ್ಕೆ ಜೋಳದ ಬೆಲೆ ಹೆಚ್ಚಾಗಿರುವುದರಿಂದ ಪಶು ಆಹಾರದ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು.
ಹಾಲು ಒಕ್ಕೂಟ ವಾರ್ಷಿಕ ರೂ. 1300 ಕೋಟಿ ವ್ಯವಹಾರ ಮಾಡುತ್ತಿದೆ. ಹಾಲು ಉತ್ಪಾದಕರೆಗ ವಾರವೊಂದಕ್ಕೆ ರೂ.18 ಕೋಟಿ ಬಟವಾಡೆ ಮಾಡುತ್ತಿದೆ. ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಸಮೀಪ 10 ಎಕರೆ ವಿಸ್ತೀರ್ಣದಲ್ಲಿ ಮೋಚಿಮುಲ್ಗೆ ಪೂರಕ ವಸ್ತುಗಳ ಉತ್ಪಾದನಾ ಘಟಕ ಪ್ರಾರಂಭಿಸಲಾಗುವುದು. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಒಕ್ಕೂಟದಿಂದಲೇ ಕಟ್ಟಡಗಳನ್ನು ನಿರ್ಮಿಸಿಕೊಡಲು ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಹನುಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಲು ಉತ್ಪಾದನೆಯನ್ನು ದಿನವೊಂದಕ್ಕೆ 1ಲಕ್ಷ ಲೀಟರ್ಗೆ ಹೆಚ್ಚಿಸಬೇಕು.
ಅಗತ್ಯ ಇರುವ ಕಡೆ ಹೊಸದಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಬೇಕು. ಗುಣಮಟ್ಟದ ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಕೋಚಿಮುಲ್ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಕೇಂದ್ರ ಕಚೇರಿ ವ್ಯವಸ್ಥಾಪಕ ಡಾ. ಬಿ.ಶಿವರಾಜು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ನಾಗೇಶ್ ಮಾತನಾಡಿ ಹಾಲು ಶೇಖರಣೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುಕೆ, ಪಶು ವೈದ್ಯಕೀಯ ಸೌಲಭ್ಯ, ಪಶು ಆಹಾರ ಮತ್ತು ಮೇವಿನ ಬೀಜ ಸರಬರಾಜು ವಿಷಯಗಳ ಬಗ್ಗೆ ಚರ್ಚಿಸಿದರು.
ಕ್ಯಾಂಪ್ ಕಚೇರಿ ಉಪ ವ್ಯವಸ್ಥಾಪಕ ಡಾ. ಶ್ರೀಕಾಂತ್, ಡಾ. ಗುರಪ್ಪ, ನಿರ್ದೇಶಕಿ ಕಾಂತಮ್ಮ, ಸಹಾಯಕ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮತ್ತಿತರರು ಇದ್ದರು.