ದಿಲ್ಲಿ ಚಲೋ ನಡೆಸುತ್ತಿರುವ ರೈತರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಅಖಿಲ ಭಾ. ರೈತ ಸಂಘರ್ಷ ಸ. ಸ. ತಾ.ಘಟಕದ ಸದಸ್ಯರಿಂದ ಪ್ರತಿಭಟನೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ದಿಲ್ಲಿ ಚಲೋ ನಡೆಸುತ್ತಿರುವ ರೈತರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ  ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ತಾಲ್ಲೂಕು ಘಟಕದ ಸದಸ್ಯರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಾತಕೋಟ ನವೀನ್‌ ಕುಮಾರ್‌ ಪ್ರತಿಭಟನೆ ನಡೆಸುತ್ತಿದ್ದ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಫಲವಾಗಿ ದೇಶದ ಕೃಷಿ ಬಿಕ್ಕಟ್ಟು ಉಲ್ಬಣಗೊಂಡಿದೆ. ರೈತ ಹಾಗೂ ಕಾರ್ಮಿಕ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಲು ದೆಹಲಿ ಜಾಥಾ ಕೈಗೊಂಡಿರುವ ರೈತರನ್ನು ಸರ್ಕಾರ ಬಲಪ್ರಯೋಗದ ಮೂಲಕ ಹಿಮ್ಮೆಟ್ಟಲು ಪ್ರಯತ್ನಿಸುತ್ತಿದೆ ಎಂದು ಎಂದು ಹೇಳಿದರು.  ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್‌.ಸೂರ್ಯನಾರಾಯಣ ಮಾತನಾಡಿ, ಶಾಂತಿಯುತವಾಗಿ ದೆಹಲಿ ಜಾಥಾ ಕೈಗೊಂಡಿರುವ ರೈತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನಾರ್ಹ. ಪ್ರಧಾನಿ ಮೋದಿ ಅವರು ಇದರ ನೈತಿಕ ಹೊಣೆ ಹೊತ್ತು ದೇಶದ ರೈತರ ಕ್ಷಮೆ ಕೇಳಬೇಕು. ಕೃಷಿಗೆ ಸಂಬಂಧಿಸಿದ ಮೂರು ಕಾಯಿದೆಗಳು ಹಾಗೂ ವಿದ್ಯುತ್‌ ಕಾಯಿದೆ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.  ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅವರಿಗೆ ನೀಡಲಾಯಿತು.  ವಿವಿಧ ರೈತ ಪರ ಸಂಘಟನೆಗಳ ಮುಖಂಡರಾದ ಎನ್‌.ವೀರಪ್ಪರೆಡ್ಡಿ, ಎಸ್‌.ಎನ್‌.ನಾಗರಾಜ್‌, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಎನ್.ಜಿ.ಶ್ರೀರಾಮರೆಡ್ಡಿ, ಹೆಬ್ಬಟ ರಮೇಶ್‌, ಜಿ.ಈಶ್ವರಮ್ಮ, ಎನ್‌.ನಾಗಭೂಷಣ, ಪ್ರೇಮ್‌ ಕುಮಾರ್‌ ಇದ್ದರು.