ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ:- ಅದ್ದೂರಿ ಗಣೇಶೋತ್ಸವಕ್ಕೆ ಹೆಸರಾಗಿದ್ದ ಕೋಲಾರ ನಗರದಲ್ಲಿ ಈ ಬಾರಿ ಕೊರೋನಾ ಮಾರಿಯಿಂದಾಗಿ ಹಬ್ಬ ಕಳೆಗುಂದಿದ್ದು, ಗಾಂಧಿವನದಲ್ಲಿ ಅದ್ದೂರಿಯಿಂದ ನಡೆಯುತ್ತಿದ್ದ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯ ಗಣೇಶೋತ್ಸವವೂ ಸರಳವಾಗಿ ನಡೆಯಿತು.
ಅಖಿಲಭಾರತ ಹಿಂದೂ ಮಹಾಸಭಾ ಪುಟ್ಟ ಗಣಪನ್ನು ಪೂಜಿಸಿ ಸರಳವಾಗಿ ಗಣೇಶೋತ್ಸವ ಆಚರಿಸಿತು. ಜತೆಗೆ ಮತ್ತಿತರ ನೂರಾರು ಸಂಘಟನೆಗಳ ಯುವಕರು ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಟಾಪಿಸುತ್ತಿದ್ದ ಗಣೇಶೋತ್ಸವ ವೈಭವ ಈ ಬಾರಿ ಕಂಡು ಬರಲೇ ಇಲ್ಲ.
ನಗರದಲ್ಲಿ ಧರ್ಮರಕ್ಷಣೆಯ ಸಂದೇಶವೊತ್ತ ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ವಿನಾಯಕೋತ್ಸವಕ್ಕೆ ಕೊರೋನಾ ಮಾರಿ ಅಡ್ಡಿಯಾಗಿದ್ದು, ಸರಳವಾಗಿ ಗಣೇಶೋತ್ಸವ ಆಚರಿಸಲಾಯಿತು.
ಅದ್ದೂರಿ ವಿಸರ್ಜನಾ ಮೆರವಣಿಗೆಗೂ ಬ್ರೇಕ್
ಭಜರಂಗದಳ ಸಂಘಟನೆಯ ಯುವಕರು, ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ನೇತೃತ್ವದಲ್ಲಿ ನಗರದ ಗಾಂಧಿವನದಲ್ಲಿ ಧರ್ಮರಕ್ಷಣೆ, ಸೌಹಾರ್ದತೆಯ ಹೊಣೆ ಹೊತ್ತ ಶಾಂತ ಗಣಪನ ಬೃಹತ್ ಮೂರ್ತಿಯನ್ನಿಟ್ಟು ಅದ್ದೂರಿಯಿಂದ ಪೂಜಿಸುತ್ತಿದ್ದರು.
ಆದರೆ ಕೊರೋನಾ ಮಾರ್ಗಸೂಚಿ ಪಾಲನೆಯ ಹಿನ್ನಲೆಯಲ್ಲಿ ಗಣಪನ ಮೂರ್ತಿಯನ್ನು ಗಾಂಧಿವನದ ವೇದಿಕೆಯಲ್ಲಿ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.
ಕೊರೋಮಾ ಮಾರ್ಗಸೂಚಿ ಹಿನ್ನಲೆಯಲ್ಲಿ ಪ್ರತಿವರ್ಷವೂ ನಡೆಯುತ್ತಿದ್ದ ನಗರದ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಬರುತ್ತಿದ್ದ ನೂರಾರು ಗಣೇಶ ಮೂರ್ತಿಗಳ ಅದ್ದೂರಿ ವಿಸರ್ಜನಾ ಮೆರವಣಿಗೆಗೆ ಈ ಬಾರಿ ಬ್ರೇಕ್ ಬಿದ್ದಿದೆ.
ಬಜರಂಗದಳ ಈ ಬಾರಿ ಅದ್ದೂರಿ ಮೆರವಣಿಗೆ ರದ್ದುಗೊಳಿಸಿದ್ದು, ಆಯಾ ಬಡಾವಣೆಯ ಆಯೋಜಕರು ತಾವೇ ಸಾಮಾಜಿಕ ಅಂತರ ಕಾಯ್ದುಕೊಂಡು ಗಣಪನ ವಿಸರ್ಜನೆ ಮಾಡಲು ಸಂಘಟನೆಯ ಮುಖಂಡ ಬಾಲಾಜಿ ಮನವಿ ಮಾಡಿದರು.
ಕೋವಿಡ್ ಮಾರ್ಗಸೂಚಿಯಂತೆ ಒಂದು ವಾರ್ಡಿಗೆ ಒಂದು ಗಣಪನ ಪ್ರತಿಷ್ಟಾಪನೆಗೆ ಮಾತ್ರವೇ ಅವಕಾಶ ನೀಡಿದ್ದು, ಜತೆಗೆ ನಗರಸಭೆ, ಪೊಲೀಸ್ ಇಲಾಖೆ, ಅಗ್ನಿಶಾಮಕದಳ, ಆರೋಗ್ಯ ಇಲಾಖೆಗಳ ಅನುಮತಿಯ ಉಸಾಬರಿಯಿಂದ ಬೇಸರಗೊಂಡ ಅನೇಕ ಯುವಕರು ತಮ್ಮ ಬಡಾವಣೆಗಳಲ್ಲಿ ಗಣಪತಿ ಪ್ರತಿಷ್ಟಾಪನೆಯ ಆಲೋಚನೆಯನ್ನೇ ಕೈಬಿಟ್ಟಿದ್ದಾರೆ.
ಆದರೂ ವಾರ್ಡಿಗೊಂದರಂತೆ ಅನೇಕ ಕಡೆಗಳಲ್ಲಿ 4 ಅಡಿಗಿಂತ ಚಿಕ್ಕದಾದ ಗಣಪನನ್ನು ಪ್ರತಿಷ್ಟಾಪಿಸಿ ಪೂಜಿಸಿ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ.
ವಿನಾಯಕ ವಿಸರ್ಜನಾ ಸಮಿತಿ ಆಶ್ರಯದಲ್ಲಿ ಗಣಪನನ್ನು ಪ್ರತಿಷ್ಟಾಪಿಸಿದ್ದು, ಗಾಂಧಿವನದಲ್ಲಿನ ಪುಟ್ಟ ವೇದಿಕೆಯಲ್ಲಿ ಶ್ರದ್ದಾಭಕ್ತಿಗಳಿಂದ ಪೂಜಿಸಲಾಯಿತು.
ಭಜರಂಗದಳದ ಬಾಲಾಜಿ, ಜಿಲ್ಲಾ ಸಂಚಾಲಕ ಬಾಬು, ಅಪ್ಪಿ, ಡಿ.ಆರ್.ನಾಗರಾಜ್, ಬಿಆರ್ಎಂ ಸಂತೋಷ್, ಮಂಜುನಾಥ್, ವಿಶ್ವನಾಥ್, ರವಿ, ನಾಗೇಶ್, ಕನಕೇಶ್, ನರೇಶ್, ವಿಜಯಕುಮಾರ್, ವಿಶ್ವ, ಜೋಗ್ ಮತ್ತಿತರರು ನೇತೃತ್ವ ವಹಿಸಿದ್ದರು.
ತೆಂಗಿನಕಾಯಿಗಳ ಹಬ್ಬವಾಗಿ ಆಚರಣೆ
ಗಣೇಶ ಹಬ್ಬವನ್ನು ಜಿಲ್ಲೆಯಲ್ಲಿ ಸಾಮಾನ್ಯವಾಗಿ ತೆಂಗಿನಕಾಯಿಗಳ ಹಬ್ಬವೆಂದೇ ಕರೆಯಲಾಗುತ್ತದೆ. ಕೆಲವು ಕುಟುಂಬಗಳು ಮಾತ್ರವೇ ಗಣೇಶನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುತ್ತವೆ.
ಆದರೆ ಅತಿ ಹೆಚ್ಚಿನ ಸಂಖ್ಯೆಯ ನಾಗರೀಕರು ದೇವಾಲಯಗಳು, ಅಶ್ವಥ್ಥಕಟ್ಟೆ, ತಮ್ಮ ಹಿರಿಯರ ಸಮಾಧಿಗಳಿಗೆ ಹೋಗಿ ತೆಂಗಿನಕಾಯಿ ಹೊಡೆದು ಪೂಜೆ ಸಲ್ಲಿಸುವುದು ಪ್ರಮುಖ ಆಚರಣೆಯಾಗಿದ್ದು, ತೆಂಗಿನಕಾಯಿ ಹಬ್ಬವೆಂದೇ ಖ್ಯಾತಿಯಾಗಿದ್ದು, ನಗರದ ಅಶ್ವಥ್ಥಕಟ್ಟೆ, ಸ್ವಶಾನಗಳಲ್ಲಿ ನೂರಾರು ಮಂದಿ ಪೂಜೆ ಸಲ್ಲಿಸಿದರು.