JANANUDI NETWORK
ತಾಯಂದಿರು ಸಾಲ ಮರುಪಾವತಿಸಿ ಶೂನ್ಯಬಡ್ಡಿ ಪ್ರಯೋಜನ ಪಡೆಯಿರಿ :ಪುಢಾರಿಗಳ ಮಾತು ಕೇಳಿ ತಪ್ಪು ಮಾಡದಿರಿ-ಬ್ಯಾಲಹಳ್ಳಿ ಗೋವಿಂದಗೌಡ
ಕೋಲಾರ:- ನಂಬಿಕೆಗೆ ಮತ್ತೊಂದು ಹೆಸರು ತಾಯಂದಿರಾಗಿದ್ದು, ಬ್ಯಾಂಕಿನ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರಲು ಹುನ್ನಾರ ನಡೆಸುವ ಕೆಲವು ಪುಢಾರಿಗಳ ಮಾತು ಕೇಳದೇ ನೀವು ಪಡೆದಿರುವ ಸಾಲವನ್ನು ಮರುಪಾವತಿ ಮಾಡಿ ಶೂನ್ಯ ಬಡ್ಡಿಯ ಪ್ರಯೋಜನ ಪಡೆಯಿರಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಳಹಳ್ಳಿ ಗೋವಿಂದಗೌಡ ಮನವಿ ಮಾಡಿದರು.
ಭಾನುವಾರ ತಾಲ್ಲೂಕಿನ ಹೋಳೂರು ಹೋಬಳಿ,ಹೊಳಲಿ. ಬೇತಮಂಗಲ ಹೋಬಳಿಯೆ ಬಡಮಾಕನಹಳ್ಳಿ, ಕಂಗಾನಲ್ಲೂರು ಮತ್ತಿತರ ಗ್ರಾಮಗಳಲ್ಲಿ ಸಾಲ ವಸೂಲಾತಿ ಅಭಿಯಾನ ನಡೆಸಿದ ಅವರು ಬಡಮಾಕನಹಳ್ಳಿಯಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಇದೀಗ ಪ್ರತಿ ಮಹಿಳೆಗೂ 1 ಲಕ್ಷದವರೆಗೂ ಶೂನ್ಯಬಡ್ಡಿ ಸಾಲ ನೀಡುವ ಯೋಜನೆ ಜಾರಿ ಮಾಡುತ್ತಿವೆ, ಶೂನ್ಯ ಬಡ್ಡಿ ಸಾಲ ನೀಡುವ ಉದ್ದೇಶ ಅರ್ಥಮಾಡಿಕೊಳ್ಳಿ, ಈ ಸಾಲ ಎಂದಿಗೂ ಮನ್ನಾ ಆಗೋದಿಲ್ಲ, ಕೆಲವು ಬಾಯಿಬಡುಕರ ಮಾತನ್ನು ನಂಬಿ ಶೂನ್ಯಬಡ್ಡಿ ಸೌಲಭ್ಯದಿಂದ ವಂಚಿತರಾಗದಿರಿ ಎಂದರು.
ಬಡಮಾಕನಹಳ್ಳಿ ರೇಣುಕಾ ಯಲ್ಲಮ್ಮದೇವಿ ಸ್ವಸಹಾಯ ಸಂಘ ಹಾಗೂ ಅಂಬೇಡ್ಕರ್ ಸ್ವಸಹಾಯ ಸಂಘದ ರೇಣುಕಮ್ಮ ಮತ್ತಿತರರು ಮಾತನಾಡಿ, ಸಾಲ ಮನ್ನಾ ಎಂಬ ಕೆಲವು ಮಂದಿ ನೀಡಿದ ತಪ್ಪುಮಾಹಿತಿಯಿಂದ ಸಾಲ ಮರುಪಾವತಿ ಮಾಡದೇ ವಿಳಂಬ ಮಾಡಿದ್ದಾಗಿ ಒಪ್ಪಿಕೊಂಡರು.
ಬ್ಯಾಂಕಿನ ಅಧ್ಯಕ್ಷರೇ ಖುದ್ದು ಸಾಲ ವಸೂಲಾತಿಗೆ ಬಂದಿರುವುದು ಮನಸ್ಸಿಗೆ ನೋವಾಗಿದೆ, ಈ ತಪ್ಪು ಎಂದಿಗೂ ಮಾಡೋದಿಲ್ಲ ಎಂದು ಅಭಯ ನೀಡಿದ ರೇಣುಕಮ್ಮ ಸ್ಥಳದಲ್ಲೇ 30 ಸಾವಿರ ರೂ ಸಾಲದ ಬಾಕಿ ಮರುಪಾವತಿ ಮಾಡಿದರು.
ಅದೇ ರೀತಿ ಪಡೆದ ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡುವ ಮೂಲಕ ನಮ್ಮ ಮೇಲೆ ಬ್ಯಾಂಕ್ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವುದಾಗಿ ನುಡಿದ ಮಹಿಳೆಯರು, ಸಾಲ ಮರುಪಾವತಿಯ ಮೂಲಕ ನಮ್ಮದೇ ಬ್ಯಾಂಕ್ ಬೆಳೆಯಲು ನೆರವಾಗುತ್ತೇವೆ ಎಂದರು.
ಈ ಬಾರಿಯ ಬಜೆಟ್‍ನಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಯೋಜನೆ ಜಾರಿ ಮಾಡುತ್ತಿದೆ, ರಾಜ್ಯವೂ ನಿಮಗೆ ನೆರವಾಗಲಿದ್ದು, ನಿಮ್ಮ ಆರ್ಥಿಕ ಬಲವರ್ಧನೆಗೆ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ, ಸಾಲ ಮರುಪಾವತಿ ಮಾಡಿ ನಂಬಿಕೆ ಗಟ್ಟಿಯಾದರೆ ಮಾತ್ರ ಈ ಸೌಲಭ್ಯಗಳನ್ನು ಮತ್ತೆ ಮತ್ತೆ ಪಡೆಯಲು ಸಾಧ್ಯ ಎಂದರು.
ಕೋಲಾರ ಡಿಸಿಸಿ ಬ್ಯಾಂಕ್ ಹೆಣ್ಣು ಮಕ್ಕಳನ್ನು ನಂಬಿದೆ ಆದ್ದರಿಂದಲೇ ಇಡೀ ರಾಜ್ಯದಲ್ಲಿ ಯಾವುದೇ ಡಿಸಿಸಿ ಬ್ಯಾಂಕ್ ನೀಡದಷ್ಟು ಸಾಲ ಸೌಲಭ್ಯವನ್ನು ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳೆಯರಿಗೆ ಒದಗಿಸಿದೆ ಎಂದರು.
ಡಿಸಿಸಿ ಬ್ಯಾಂಕ್ ಎರಡು ದಶಕಗಳ ಕಾಲ ದಿವಾಳಿಯಾಗಿ ರೈತರು, ಮಹಿಳೆಯರಿಗೆ ಯಾವುದೇ ಸೌಲಭ್ಯಗಳು ಸಿಗದಂತಾಗಿತ್ತು ಎಂಬುದನ್ನು ಉದಾಹರಿಸಿದ ಬ್ಯಾಲಹಳ್ಳಿ ಗೋವಿಂದಗೌಡ ಇಂತಹ ಪರಿಸ್ಥಿತಿ ಮತ್ತೆ ಬರಲು ಬಿಡೋದಿಲ್ಲ, ಬ್ಯಾಂಕ್ ಇಂದು ರಾಜ್ಯದ ನಂ.1 ಆಗಿದ್ದು, ಈ ಗೌರವ ಉಳಿಸಿಕೊಳ್ಳಲು ತಾಯಂದಿರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಬೇತಮಂಗಲ ಎಸ್‍ಎಫ್‍ಸಿಎಸ್ ಅಧ್ಯಕ್ಷ ದೊಡ್ಡಕಾರಿ ಪ್ರಸನ್ನ, ಮುಖಂಡರಾದ ನಲ್ಲೂರು ಶಂಕರ್, ಬ್ಯಾಟೇಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀರಾಮಣ್ಣ, ಸದಸ್ಯೆ ವಿಮಲಮ್ಮ, ಶಾಮಲಮ್ಮ, ಸುಕನ್ಯಾ ಮತ್ತಿತರರು ಉಪಸ್ಥಿತರಿದ್ದರು.