ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ.ಅ.19: ಡಿ.ಕೆ.ರವಿ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸೀತಿಹೊಸೂರು ಮುರಳಿಗೌಡ ನೇತೃತ್ವದಲ್ಲಿ ಜಿಲ್ಲೆಯಿಂದ ಅನೇಕರು ತೆರಳಿ, ಆರ್.ಆರ್.ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರನ್ನು ಸನ್ಮಾನಿಸಿ, ಚುನಾವಣಾ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಸೀತಿಹೊಸೂರು ಮುರಳಿಗೌಡ, ಕುಸುಮಾ ಅವರಿಗೆ ನಮ್ಮ ಸಂಘದಿಂದ ಸಂಪೂರ್ಣ ಬೆಂಬಲ ನೀಡಲಾಗಿದ್ದು, ಅವರ ಗೆಲುವಿಗಾಗಿ ಈಗಾಗಲೇ ಕೋಲಾರಮ್ಮ ದೇವಾಲಯದಲ್ಲಿ 501 ತೆಂಗಿನಕಾಯಿ ಒಡೆದು ವಿಶೇಷ ಪೂಜೆಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಡಿ.ಕೆ.ರವಿ ಅವರು ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಬಡಬಗ್ಗರಿಗೆ ಸರ್ಕಾರದ ಯೋಜನೆಗಳನ್ನು ತಲಪಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು, ಅವರು ಕಂಡಿದ್ದ ಕನಸುಗಳನ್ನು ಡಿ.ಕೆ ರವಿ ರವರ ಪತ್ನಿ ಕುಸುಮ ರವಿ ಅವರು ನೆರವೇರಿಸಲಿ ಎಂಬ ಉದ್ದೇಶದಿಂದ ಅವರಿಗೆ ಡಿ.ಕೆ.ರವಿ ಅಭಿಮಾನಿಗಳ ಸಂಘ ಬೆಂಬಲ ನೀಡುತ್ತಿದ್ದು, ಕುಸುಮಾ ಅವರು ಗೆಲ್ಲುವುದರಲ್ಲಿ ಸಂಶಯವಿಲ್ಲ. ನಮ್ಮ ಸಂಘವನ್ನು ಟೀಕಿಸುವವರ ವಿರುದ್ಧ ಏನೂ ಮಾತನಾಡುವುದಿಲ್ಲ. ಚುನಾವಣೆಯಲ್ಲಿ ಆರ್.ಆರ್ ನಗರದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಅಭ್ಯರ್ಥಿ ಕುಸುಮ ರವಿ ಮಾತನಾಡಿ, ಡಿ.ಕೆ.ರವಿ ಅಭಿಮಾನಿ ಸಂಘದವರು ತನಗೆ ಚುನಾವಣೆಯಲ್ಲಿ ಬೆಂಬಲ ನೀಡುತ್ತಿರುವುದನ್ನು ಸ್ವಾಗತಿಸಿ ಡಿ.ಕೆ.ರವಿ ಅವರು ಕಂಡಿದ್ದ ಕನಸುಗಳನ್ನು ನಾನು ನನಸು ಮಾಡುತ್ತೇನೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಈಗಾಗಲೇ ಆರ್.ಆರ್.ವಿಧಾನಸಭಾ ಕ್ಷೇತ್ರದಲ್ಲಿ ಏನೆಲ್ಲಾ ವಿದ್ಯಮಾನಗಳು ನಡೆಯುತ್ತಿದೆ ಎಂಬುದನ್ನು ಮತದಾರರು ನೋಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಎಂದು ನನ್ನ ವಿರುದ್ಧ ಎಫ್.ಐ.ಆರ್ ಪ್ರಕರಣ ದಾಖಲು ಮಾಡಿ ನಮಗೆ ಭಯ ಬೀಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕೆ ನಾನು ಅಂಜುವುದಿಲ್ಲ. ಧೈರ್ಯವಾಗಿ ಚುನಾವಣೆಯನ್ನು ಎದುರಿಸುತ್ತೇನೆ, ಚುನಾವಣೆಯಲ್ಲಿ ಮತದಾರರು ಕೊಡುವ ತೀರ್ಮಾನಕ್ಕೆ ತಲೆ ಬಾಗುತ್ತೇನೆ ಎಂದರು.
ಚುನಾವಣೆ ಇರಲಿ ಬಿಡಲಿ ನನ್ನ ಸಮಾಜ ಸೇವೆಯನ್ನು ಕ್ಷೇತ್ರದಲ್ಲಿ ಮುಂದುವರೆಸಿಕೊಂಡು ಹೋಗುತ್ತೇನೆ. ನನ್ನ ಪತಿ ಡಿ.ಕೆ.ರವಿ ಅವರು ಕೋಲಾರ ಜಿಲ್ಲೆಯಲ್ಲಿ ಅಧಿಕಾರಿಯಾಗಿದ್ದಾಗ ಏನೇನು ಕಾರ್ಯಕ್ರಮ ಹಮ್ಮಿಕೊಂಡು ಮನೆ ಮಾತಾಗಿದ್ದರೋ ಅದೇ ಮಾದರಿಯಲ್ಲಿ ನಾನು ಕೂಡ ಆರ್.ಆರ್ ವಿಧಾನ ಸಭಾ ಕ್ಷೇತ್ರದಲ್ಲಿ ಮಾಡುತ್ತೇನೆ. ಚುನಾವಣೆಯಲ್ಲಿ ನನ್ನ ಗೆಲವಿಗೆ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಶ್ರಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀನಿವಾಸ್, ಖಾದ್ರಿಪುರ ಮುರಳಿ, ಅರುಣ್, ನವೀನ್, ಮಂಜುನಾಥ್, ಸುಧಾಕರ್ ಮತ್ತಿತರರು ಭಾಗವಹಿಸಿದ್ದರು.
