ಡಿಸಿಸಿ ಬ್ಯಾಂಕ್‌ ಬಡ್ಡಿ ರಹಿತಿ ಸಾಲದ ಮೊತ್ತವನ್ನು ರೂ.50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ : ಶಾಸಕ ಕೆ.ಆರ್.ರಮೇಶ್‌ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಡಿಸಿಸಿ ಬ್ಯಾಂಕ್‌  ಬಡ್ಡಿ ರಹಿತಿ ಸಾಲದ ಮೊತ್ತವನ್ನು ರೂ.50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್‌ ಕುಮಾರ್ ಹೇಳಿದರು.  ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಸಾಲದ ಹಣದ ಚೆಕ್‌ ವಿತರಿಸಿ ಮಾತನಾಡಿ, ಜಾತಿ, ಮತ ಹಾಗೂ ಪಕ್ಷ ಭೇದವಿಲ್ಲದೆ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಈವರಿಗೆ 40 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಸಾಲ ಪಡೆದುಕೊಂಡಿದ್ದಾರೆ. ಇನ್ನೂ 20 ಸಾವಿರ ಮಂದಿಗೆ ಸಾಲ ನೀಡಲಾಗುವುದು. ಸಾಲದ ಹಣ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.  ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ಹೆಚ್ಚಿದ್ದು, ಬಡ ಕುಟುಂಬಳು ಬೀದಿಗೆ ಬೀಳುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದನ್ನು ತಡೆಯಬೇಕು. ಇಲ್ಲವಾದರೆ ಸ್ತ್ರೀ ಶಕ್ತಿ ಸಂಘದ ಸದಸ್ಯರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.  ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್‌ ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ ಮಾದರಿಯನ್ನು ಅಳವಡಿಸಿಕೊಂಡಿದೆ. ಆದ್ದರಿಂದ ಫಲಾನುಭವಿಗಳು ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಠೇವಣಿ ಇಡಬೇಕು. ಗ್ರಾಹಕರಿಗೆ ಎಟಿಎಂ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.  ಈ ಸಂದರ್ಭದಲ್ಲಿ 48 ಸ್ತ್ರೀ ಶಕ್ತಿ ಸಂಘಗಳಿಗೆ ರೂ.2.30 ಕೋಟಿ ಸಾಲ ವಿತರಣೆ ಮಾಡಲಾಯಿತು.  ಮುಖಂಡರಾದ ದಿಂಬಾಲ ಅಶೋಕ್‌, ಅಕ್ಬರ್‌ ಷರೀಫ್‌, ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ಬಿ.ಜಿ.ಸೈಯದ್‌ ಖಾದರ್‌, ಸರ್ದಾರ್‌, ನಾರಾಯಣಸ್ವಾಮಿ, ಲಕ್ಷ್ಮಣರೆಡ್ಡಿ, ಶ್ರೀರಾಮರೆಡ್ಡಿ, ಗುರಪ್ಪ, ನಂಜುಂಡಪ್ಪ, ಸರಸ್ವತಮ್ಮ, ಶಿವಾರೆಡ್ಡಿ ಇದ್ದರು.