ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಡಿಸಿಸಿ ಬ್ಯಾಂಕಿನಿಂದ ನಿವೇಶನ,ಮನೆ ಸಾಲ ಪಡೆದವರ ಮನೆಗೆ ಭೇಟಿ ಮರುಪಾವತಿಯಾಗದಿದ್ದರೆ ಆಸ್ತಿ ಹರಾಜು- ಬ್ಯಾಲಹಳ್ಳಿಗೋವಿಂದಗೌಡ ಎಚ್ಚರಿಕೆ
ಕೋಲಾರ: ಪಡೆದ ಸಾಲ ಮರುಪಾವತಿಸುವ ಬದ್ದತೆ ತೋರಿ, ನಿವೇಶನ ಮತ್ತು ಮನೆ ಅಡಮಾನ ಸಾಲವನ್ನು ನೀವು ಸಕಾಲದಲ್ಲಿ ಪಾವತಿಸದಿದ್ದರೆ ಕಾನೂನು ರೀತಿ ಆಸ್ತಿ ಹರಾಜು ಮಾಡಬೇಕಾಗುತ್ತದೆ ಎಂದು ಸಾಲ ಪಡೆದ ಫಲಾನುಭವಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಎಂ.ಗೋವಿಂಡಗೌಡ ಎಚ್ಚರಿಕೆ ನೀಡಿದರು.ಭಾನುವಾರ ಡಿಸಿಸಿ ಬ್ಯಾಂಕಿಗೆ ಅಡಮಾನ ಸಾಲ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳ ಮನೆಗೆ ಖುದ್ದು ಭೇಟಿ ನೀಡಿದ ಅವರು, ಸಾಲ ಮರುಪಾವತಿವಂತೆ ಗ್ರಾಹಕರಿಗೆ ತಾಕೀತು ಮಾಡಿದರಲ್ಲದೇ, ಬ್ಯಾಂಕಿನಿಂದ ಪಡೆದುಕೊಂಡಿರುವ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕಾದ ಜವಾಬ್ದಾರಿ ನಿಮ್ಮಮೇಲಿದೆ ಎಂದು ಕಿವಿಮಾತು ಹೇಳಿದರು.
ಸಾಲ ಪಡೆದುಕೊಳ್ಳಲು ಸಾಕಷ್ಟು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮಂಜೂರು ಮಾಡಿಸಿಕೊಳ್ಳುತ್ತೀರಾ, ಅಷ್ಟೇ ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು ಎಂಬ ಜವಾಬ್ದಾರಿಯಿಲ್ಲವೇ, ಬಡ ಮಹಿಳೆಯರಿಗೆ, ರೈತರಿಗೆ ಇರುವ ಪ್ರಾಮಾಣಿಕತೆ ನಿಮಗಿಲ್ಲವೇ ಎಂದು ಪ್ರಶ್ನಿಸಿದರು.ಬ್ಯಾಂಕಿನಿಂದ ಸಾಲ ಪಡೆದ 35ಕ್ಕೂ ಹೆಚ್ಚು ಮಂದಿ ಅಡ ಮಾನ ಸಾಲದ ಕಂತುಗಳನ್ನು ಪಾವತಿ ಮಾಡುತ್ತಿಲ್ಲ. ಅಧಿಕಾರಿಗಳು ಸಾಲ ಕೇಳಲು ಮನೆ ಬಳಿಗೆ ಬರಲು ನಿಮ್ಮ ವರ್ತನೆಗೆ ಬೇಸತ್ತಿದ್ದಾರೆ. ನಿಮಗೆ ಇರುವ ಆರ್ಥಿಕ ಅದಾಯದ ಆಧಾರದ ಮೇಲೆ ಅಡಮಾನ ಸಾಲ ನೀಡಲಾಗಿದೆ. ಪ್ರತಿ ತಿಂಗಳು ಕಂತು ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗಿದ್ದರೂ ಮರುಪಾವತಿಗೆ ಏನು ಸಮಸ್ಯೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಣಿಜ್ಯ ಬ್ಯಾಂಕ್ಗಳಲ್ಲಿ ಸಾಲ ಮಾಡಿದ್ದರೆ ಸುಮ್ಮನೆ ಬಿಡುತ್ತಿರಲಿಲ್ಲ, ಮನೆ ಮುಂದೆ ಡಂಗೋರ ಸಾರಿ ಅವಮಾನ ಮಾಡುತ್ತಿದ್ದರು, ಅವರ ರೀತಿ ನಾವು ಮಾಡೋದಕ್ಕೆ ಹೋಗಲ್ಲ. ಕಂತು ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಬೇರೆಯವರಿಗೆ ಸಾಲ ವಿತರಿಸಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.ಸಾಲ ಮರು ಪಾವತಿ ಮಾಡದಿದ್ದರೆ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕೆ ಯಾರ ಮುಲಾಜಿಗೂ ಒಳಗಾಗದೆ ಕ್ರಮಕೈಗೊಳ್ಳಲಾಗುವುದು. ಇದರಿಂದ ಅಡಮಾನ ಇಟ್ಟಿರುವ ನಿವೇಶನ ಅಥವಾ ಮನೆ ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ಅರಿತು ಮರುಪಾವತಿ ಮಾಡಿ ಎಂದು ಸೂಚಿಸಿದರು.
ನಗರದ ಕಾಠರಿಪಾಳ್ಯದ ಪುಷ್ಪಮ್ಮ ಮಗ ಪಡೆದಿದ್ದ ಸಾಲವನ್ನು ಸ್ಥಳದಲ್ಲೇ 50 ಸಾವಿರ ಸಾಲ ಮರುಪಾವತಿ ಮಾಡಿ ಮಾತನಾಡಿ, ಕಷ್ಟಕ್ಕೆ ಪಡೆದುಕೊಂಡಿರುವ ಸಾಲ ಮರುಪಾವತಿ ಮಾಡಿದ್ದರೆ ಸಮಸ್ಯೆಗಳು ಹೆಚ್ಚಾಗುತ್ತಿರುತ್ತವೆ. ಎಲ್ಲಿ ಸಾಲ ಮಾಡಿದರೂ ಪಾವತಿ ಮಾಡಬೇಕಾದ ಜವಾಬ್ದಾರಿ ಇದೆ. ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆದುಕೊಂಡು ತಡವಾಗಿ ಕೊಟ್ಟರು ಪುನಃ ಅವರಿಂದ ಸಾಲ ದೊರೆಯುವುದಿಲ್ಲ, ಬ್ಯಾಂಕ್ ಪದ್ದತಿಯೂ ಅಷ್ಟೇ ಎಂದರು.ಪಡೆದುಕೊಂಡ ಸಾಲ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದರೆ ಮರು ಪಾವತಿ ಮಾಡಲು ಸುಲಭವಾಗುತ್ತದೆ. ಉಳಿದ ಬಾಕಿ ಮೊತ್ತವನ್ನು ಮಂಗಳವಾರದೊಳಗೆ ಪಾವತಿ ಮಾಡಿಸುವುದಾಗಿ ಎಂದು ಭರವಸೆ ನೀಡಿದರು.
ನಗರದ ಸಿ.ಬೈರೇಗೌಡ ನಗರ, ಕೀಲುಕೋಟೆ, ಮುನೇಶ್ವರ ನಗರ, ಕಾಠರೀಪಾಳ್ಯ, ಕಾರಂಜಿಕಟ್ಟೆ, ಕುರುಬರಪೇಟೆ ಬಡಾವಣೆಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಭೇಟಿ ನೀಡಿ ಸಾಲ ವಸೂಲಿ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರೊಂದಿಗೆ ಬ್ಯಾಂಕಿನ ಸಿಬ್ಬಂದಿ ಅಮಿನಾ, ಪ್ರಶಾಂತ್ ಮತ್ತಿತರರಿದ್ದರು..