ವರದಿ : ಕೆ.ಜಿ.ವೈದ್ಯ, ಕುಂದಾಪುರ
ಕುಂದಾಪುರ : ಜ್ಞಾನ ಮತ್ತು ಧರ್ಮಗಳಿಂದಾಗಿ ಮನುಷ್ಯ ಇತರ ಪ್ರಾಣಿಗಳಿಗಿಂತ ಶ್ರೇಷ್ಠನಾದ. ಜ್ಞಾನವಿಲ್ಲದೆ ಧರ್ಮಾಚರಣೆ ಅಸಾಧ್ಯ. ಮೊದಲು ಮಗುವಿಗೆ ಜ್ಞಾನ ನೀಡುವವರು ಅದರ ತಂದೆ – ತಾಯಿ, ನಂತರ ಗುರುಗಳು. ಆದರಿಂದ ಗುರು ಅಥವಾ ಶಿಕ್ಷಕರಿಗೆ ಸಮಾಜದಲ್ಲಿ ವಿಶೇಷ ಮಾನ್ಯತೆ ಇದೆ. ಮಗುವಿಗೆ ಜ್ಞಾನದ ಬೆಳಕು ನೀಡಿ, ಮನುಷ್ಯನನ್ನಾಗಿ ಮಾಡಿ, ಎಲ್ಲ ಸಾಧನೆಗಳಿಗೂ ಕಾರಣೀಭೂತರಾಗುವ ಗುರುಗಳನ್ನು ದೇವರೆಂದೇ ಪರಿಗಣಿಸಲಾಗುತ್ತದೆ – ಎಂದು ಪುರೋಹಿತ ನೇರಂಬಳ್ಳಿ ಪ್ರಾಣೇಶ ತಂತ್ರಿ ಹೇಳಿದರು.
ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದಂಗವಾಗಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ನಿವೃತ್ತ ಹಿರಿಯ ಶಿಕ್ಷಕರಾದ ಹರಿಕೃಷ್ಣ ಹಂದೆ, ಸುಬ್ರಹ್ಮಣ್ಯ ಜೋಶಿ, ನಾಗಪ್ಪಯ್ಯ ಹೆಬ್ಬಾರ್, ರಾಮಕೃಷ್ಣ ವರ್ಣ, ಗಣಪಯ್ಯ ಚಡಗ, ಇಂದ್ರಾಕ್ಷಿ ಉಡುಪ ಮತ್ತು ಶೈಲಜಾ ವೈದ್ಯರನ್ನು ಪರಿಷತ್ ವತಿಯಿಂದ ಗೌರವಿಸಲಾಯಿತು. ನಾಗಪಾತ್ರಿ ರಾಜಶೇಖರ ಹೊಳ್ಳ, ಕೋಣಿ ಕೃಷ್ಣದೇವ ಕಾರಂತ, ಸೀತಾರಾಮ ಧನ್ಯ, ವಾದಿರಾಜ ಹೆಬ್ಬಾರ್, ವೆಂಕಟೇಶಮೂರ್ತಿ ಭಟ್, ಅರುಂಧತಿ ವೈದ್ಯ ಮತ್ತು ಕಲ್ಪನಾ ಐತಾಳರು ಶಿಕ್ಷಕರನ್ನು ಗೌರವಿಸಿದರು.
ಸನ್ಮಾನಿತರಾದ ಹರಿಕೃಷ್ಣ ಹಂದೆ ಮತ್ತು ಇಂದ್ರಾಕ್ಷಿ ಉಡುಪ ಮಾತನಾಡಿ, ಶಿಕ್ಷಕರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ. ಶಿಕ್ಷಕರು ಸೇವೆಯಿಂದ ನಿವೃತ್ತರಾದಮೇಲೂ ಅವರನ್ನು ಗುರುತಿಸಿ ಗೌರವಿಸುವುದರಿಂದ ಅವರಲ್ಲಿ ಇನ್ನಷ್ಟು ಜೀವನೋತ್ಸಾಹ ತುಂಬುತ್ತದೆ ಎಂದು ಹೇಳಿ ಪರಿಷತ್ ಕಾರ್ಯಗಳನ್ನು ಶ್ಲಾಘಿಸಿದರು. ಸ್ಥಳೀಯ ಸುಬ್ರಾಯ ಉಡುಪ ಕುಟುಂಬದವರಿಗೆ ಪರಿಷತ್ ವತಿಯಿಂದ ವೈದ್ಯಕೀಯ ನೆರವು ನೀಡಲಾಯಿತು. ವಲಯಾಧ್ಯಕ್ಷ ಬಿ. ಎನ್. ಪ್ರಕಾಶ್ ಉಪಾಧ್ಯ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ನಾಗೇಂದ್ರ ಬಿಳಿಯ, ರಾಮಚಂದ್ರ ವರ್ಣ, ರವೀಂದ್ರ ದೊಡ್ಮನೆ ಉಪಸ್ಥಿತರಿದ್ದರು. ಅಶೋಕ ಹೊಳ್ಳ ಮತ್ತು ನಾಗರತ್ನ ಉಡುಪ ಸನ್ಮಾನಿತರ ಪರಿಚಯ ನೀಡಿದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಸ್ವಾಗತಿಸಿದರು. ಖಜಾಂಚಿ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿ, ಕೌಶಿಕ್ ವಂದಿಸಿದರು.