ಜೆಒಸಿಯಿಂದ ಖಾಯಂಗೊಂಡ ನೌಕರರಿಗೆ ಸುರೇಶ್‍ಕುಮಾರ್ ಅಭಯ ಖಾಯಂಪೂರ್ವ ಸೇವೆ,ಪಿಂಚಣಿ ಬೇಡಿಕೆ ಈಡೇರಿಕೆಗೆ ಚರ್ಚಿಸಿ ನಿರ್ಧಾರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜೆಒಸಿ ಕೋರ್ಸುಗಳಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಖಾಯಂ ಪೂರ್ವ ಸೇವೆ, ಹಳೆ ಪಿಂಚಣಿ ಮತ್ತಿತರ ಬೇಡಿಕೆಗಳ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಿ ಈಡೇರಿಸುವುದಾಗಿ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಭರವಸೆ ನೀಡಿದರು.
ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜೆಒಸಿಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಸಂಘದ ಪದಾಧಿಕಾರಿಗಳು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಹಾಗೂ ನೂತನವಾಗಿ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯರನ್ನು ಸನ್ಮಾನಿಸಿ, ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸಚಿವರು ಈ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಪುಟ್ಟಣ್ಣ, ಎಸ್.ವ್ಹಿ.ಸಂಕನೂರ, ಚಿದಾನಂದಗೌಡರಿಗೆ ಹಾಲಿ ಎಂಎಲ್‍ಸಿಗಳಾದ ಬಸವರಾಜ ಹೊರಟ್ಟಿ, ಮರಿತಿಬ್ಬೆಗೌಡ, ಅರುಣಶಹಾಪೂರ, ಕೆ.ಟಿ.ಶ್ರೀಕಂಠೇಗೌಡ ಅವರನ್ನೂ ಸನ್ಮಾನಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲಾಯಿತು.
ಜೆಒಸಿಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಮ್ಮ ಖಾಯಂ ಪೂರ್ವ ಸೇವೆಯನ್ನು ನಿಶ್ಚಿತ ಹಳೆ ಪಿಂಚಣಿಗೆ ಪರಿಗಣಿಸುವಂತೆ ಸಚಿವರಿಗೆ ಮನವಿ ಮಾಡಲಾಯಿತು.
ಜೆಒಸಿ ನೌಕರರು 20 ವರ್ಷಗಳಿಗೂ ಅಧಿಕ ಸೇವೆ ಪೂರೈಸಿದ್ದರೂ, ಖಾಯಂ ಆಗಿ ವಿವಿಧ ಇಲಾಖೆಗಳಿಗೆ ವಿಲೀನಗೊಂಡಿರುವುದರಿಂದಾಗಿ ಸಿಗುವ ಸೇವಾ ಅವಧಿ ಅತ್ಯಲ್ಪವಾಗಿದೆ, ಇದರಿಂದ ನಿವೃತ್ತರಾದ ಮೇಲೆ ನಮ್ಮ ಜೀವನ,ಬದುಕಿಗೆ ಯಾವುದೇ ಆಸರೆ ಇಲ್ಲವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.