ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಿಗೆ ಸಚಿವ ಹೆಚ್.ನಾಗೇಶ್ ಚಾಲನೆ ವರ್ಗಾವಣೆಯಿಂದ ಶಿಕ್ಷಕರ ಕೊರತೆ ಎದುರಾಗದಂತೆ ಎಚ್ಚರವಹಿಸಿ-ಸೂಚನೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಿಗೆ ಸಚಿವ ಹೆಚ್.ನಾಗೇಶ್ ಚಾಲನೆ
ವರ್ಗಾವಣೆಯಿಂದ ಶಿಕ್ಷಕರ ಕೊರತೆ ಎದುರಾಗದಂತೆ ಎಚ್ಚರವಹಿಸಿ-ಸೂಚನೆ

ಕೋಲಾರ:- ಹೆಚ್ಚಿನ ಶಿಕ್ಷಕರು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ವರ್ಗಾವಣೆ ಬಯಸಿ ಹೋಗಿರುವುದರಿಂದ ಜಿಲ್ಲೆಯಲ್ಲಿ ಕಠಿಣ ವಿಷಯಗಳಾದ ಇಂಗ್ಲೀಷ್, ಗಣಿತಕ್ಕೆ ಶಿಕ್ಷಕರ ಕೊರತೆ ಕಾಡುವ ಸಾಧ್ಯತೆ ಇದ್ದು, ಹುದ್ದೆಗಳು ಖಾಲಿ ಇಲ್ಲದಂತೆ ಅಗತ್ಯ ಕ್ರಮವಹಿಸಿ ಎಂದು ರಾಜ್ಯ ಅಬಕಾರಿ,ಉದ್ಯಮಶೀಲ,ಕೌಶಲ್ಯಾಭಿವೃದ್ದಿ ಸಚಿವ ಹೆಚ್.ನಾಗೇಶ್ ಸೂಚನೆ ನೀಡಿದರು.
ಬುಧವಾರ ನಗರದ ಅಲಮಿನ್ ಶಾಲೆ ಆವರಣದಲ್ಲಿ ಜಿಲ್ಲಾಮಟ್ಟದ ಪ್ರತಿಭಾಕಾರಂಜಿ,ಕಲೋತ್ಸವ ಸ್ವರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಹೆಚ್ಚಿನ ಶಿಕ್ಷಕರ ವರ್ಗಾವಣೆಯಿಂದಾಗಿ ಜಿಲ್ಲೆ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಎಲ್ಲೂ ಹುದ್ದೆಗಳು ಖಾಲಿ ಇಲ್ಲದಂತೆ ಅಗತ್ಯ ಕ್ರಮವಹಿಸಲು ತಿಳಿಸಿದರು.
ರಾಜ್ಯಮಟ್ಟ ಗೆದ್ದರೆ
ಐಪ್ಯಾಡ್-ಭರವಸೆ
ಜಿಲ್ಲಾ ಪ್ರತಿಭಾಕಾರಂಜಿ ಸ್ವರ್ಧೆಗಳಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮಕ್ಕಳಿಗೆ ಐಪ್ಯಾಡ್ ಅಥವಾ ಲ್ಯಾಪ್‍ಟಾಪ್‍ಗಳನ್ನು ಬಹುಮಾನವಾಗಿ ನೀಡುವುದಾಗಿ ಸಚಿವರು ಘೋಷಿಸಿದರು.
ಪ್ರತಿಭೆಗಳಿಗೆ ನಿರಂತರವಾದ ಪ್ರೋತ್ಸಾಹ ಅಗತ್ಯವಾಗಿದ್ದು,ರಾಜ್ಯಮಟ್ಟದಲ್ಲಿ ಮಿಂಚಿ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಸಲಹೆ ನೀಡಿದ ಅವರು, ರಾಷ್ಟ್ರಮಟ್ಟದಲ್ಲೂ ಜಿಲ್ಲೆಯ ಕೀರ್ತಿಪತಾಕೆ ಹಾರಿಸಿ ಎಂದರು.
ಉಪನ್ಯಾಸಕರಾಗಿಯೇ ತಾವು ಜೀವನ ಆರಂಭಿಸಿದ್ದು, ನಂತರ ಕೋಲಾರದಲ್ಲಿಬೆಸ್ಕಾಂ ಇಂಜಿನಿಯರ್ ಆಗಿದ್ದಾಗ ಶಾಸಕ ಶ್ರೀನಿವಾಸಗೌಡರು ಸಮರ್ಪಕ ಕರೆಂಟ್‍ಗಾಗಿ ಧರಣಿ ಮಾಡಿ ಕಚೇರಿಗೆ ಬೀಗ ಜಡಿದಿದ್ದನ್ನು ಸ್ಮರಿಸಿಕೊಂಡರು.

ಪೊಲೀಸ್‍ಮೆಹಬೂಬ್‍ಗೆ ರಾಜ್ಯೋತ್ಸವ ಪ್ರಶಸ್ತಿ
ಸಂಚಾರಿ ಪೊಲೀಸ್ ಆಗಿ ಅತ್ಯುತ್ತಮ ಸೇವೆಗೆ ಹೆಸರಾಗಿರುವ ಮುಖ್ಯಪೇದೆ ಮೆಹಬೂಬ್‍ರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡುವುದಗಿ ತಿಳಿಸಿ, ಈ ಬಾರಿ ಸಮಯ ಮಿರಿದ್ದರೆ ಮುಂದಿನ ಬಾರಿ ಪ್ರಶಸ್ತಿ ಖಚಿತ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಉತ್ತಮ ಸೇವೆಗೆ ಹೆಸರಾಗಿ ಕರ್ತವ್ಯದಲ್ಲಿದ್ದಾಗಲೇ ಅಪಘಾತದಲ್ಲಿ ಸಾವನ್ನಪ್ಪಿದ್ದ ಪೇದೆ ಮೀಸೆ ತಿಮ್ಮಯ್ಯರಂತೆ ನೀವು ಮೀಸೆ ಬೆಳೆಸಿ ಎಂದು ಮಹೆಬೂಬ್‍ಗೆ ಸಲಹೆ ನೀಡಿದರು.
ಉಡುಪ,ರಾಮಯ್ಯ
ಸ್ಮರಣೆ-ಶ್ರೀನಿವಾಸಗೌಡ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಶ್ರೀನಿವಾಸಗೌಡ, ಮಕ್ಕಳಲ್ಲಿ ಸಮಯಪ್ರಜ್ಞೆ ಮೂಡಿಸಿ ಎಂದು ಶಿಕ್ಷಕರಿಗೆ ಕರೆ ನೀಡಿ, ತಾವು ವಿದ್ಯಾರ್ಥಿಯಾಗಿದ್ದಾಗ ಉತ್ತಮ ಹೆಸರು ಗಳಿಸಿದ ಶಿಕ್ಷಕ ರಾಮಯ್ಯ,ಪದವಿ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಉಡುಪ ಅವರ ಸೇವೆಯನ್ನು ಸ್ಮರಿಸಿ ಅವರ ಆದರ್ಶ ಪಾಲಿಸಿ ಎಂದರು.
ಜಿಲ್ಲೆ ಶೈಕ್ಷಣಿಕವಾಗಿ ಮತ್ತಷ್ಟು ಸಾಧನೆ ಮಾಡಬೇಕಾಗಿದ್ದು, ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಿ, ಜಿಲ್ಲೆಗೆ ಮತ್ತಷ್ಟು ರ್ಯಾಂಕ್‍ಗಳು ಬರುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಡಿಡಿಪಿಐ ಕೆ.ರತ್ನಯ್ಯ, ಪ್ರತಿಭಾ ಕಾರಂಜಿ ಮೂಲಕ ಉತ್ತಮ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗುತ್ತಿದೆ, ಇದೂ ಸಮಗ್ರ ಶಿಕ್ಷಣದ ಒಂದು ಭಾಗವಾಗಿದ್ದು, ಇಲ್ಲಿ ಯಾವುದೇ ಪ್ರತಿಭೆಗೂ ಅನ್ಯಾಯವಾಗದಂತೆ ತೀರ್ಪುಗಾರರರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದರು.
ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳ ಉದ್ಘಾಟನಾ ಸಮಾರಂಭ ಹಾಗೂ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಿ, ಎಲ್ಲಾ ಶಿಕ್ಷಕರು,ಪ್ರತಿಭಾ ಪ್ರದರ್ಶನಕ್ಕೆ ಬಂದಿರುವ ಮಕ್ಕಳಿಗೆ ಒಂದೇ ಮಾದರಿಯ ಹೋಳಿಗೆ ಊಟ ನೀಡಿ ಯಾವುದೇ ಲೋಪಗಳಾಗದಂತೆ ಎಚ್ಚರ ವಹಿಸಿರುವ ನೋಡಲ್ ಅಧಿಕಾರಿಗಳಾದ ಕೃಷ್ಣಪ್ಪ, ಶಶಿವಧನ,ಗಾಯತ್ರಿ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು.
ಜಿಲ್ಲೆಯ ಆರು ಕ್ಷೇತ್ರ ವಲಯಗಳಿಂದ ನೂರಾರು ಮಕ್ಕಳು ಪಾಲ್ಗೊಂಡಿದ್ದು, ಇಲ್ಲಿ ಪ್ರಥಮ ಸ್ಥಾನ ಗಳಿಸಿದವರನ್ನು ವಿಭಾಗಮಟ್ಟಕ್ಕೆ ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಜಿಪಂ ಸದಸ್ಯ ಅರವಿಂದ್, ಡಿವೈಪಿಸಿ ಶ್ರೀನಿವಾಸಮೂರ್ತಿ, ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್,ಡಯಟ್ ಪ್ರಾಂಶುಪಾಲ ಶ್ರೀಕಂಠ, ಹಿರಿಯ ಉಪನ್ಯಾಸಕ ಜಯರಾಮರೆಡ್ಡಿ, ಬಿಇಒಗಳಾದ ನಾಗರಾಜಗೌಡ,ಸೋಮೇಶ್, ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಎಂ.ವಿ.ರಂಗಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಮೈಲೇರಪ್ಪ, ಖಾಸಗಿ ಶಿಕ್ಷಣ ಸಂಸ್ಥೆಗಳ ಮುನಿಯಪ್ಪ, ವಿವಿಧ ಶಿಕ್ಷಕ,ನೌಕರರ ಸಂಘಟನೆಗಳ ಪದಾಧಿಕಾರಿಗಳಾದ ಇ.ಶ್ರೀನಿವಾಸಗೌಡ, ಕೆ.ವಿ.ಜಗನ್ನಾಥ್, ನಾಗರಾಜ್,ರುದ್ರಪ್ಪ, ವಿ.ಮುರಳಿಮೋಹನ್,ಶಂಕರಪ್ಪ,ಜಿ.ಶ್ರೀನಿವಾಸ್, ಮುನಿಯಪ್ಪ, ಆರ್.ಶ್ರೀನಿವಾಸನ್, ಕೆ.ಟಿ.ನಾಗರಾಜ್, ವಜೀರ್, ಇಸಿಒಗಳಾದ ಸಿ.ಎಂ.ವೆಂಕಟರಮಣಪ್ಪ, ಬೈರರೆಡ್ಡಿ,ಮೋಹನಾಚಾರಿ ಮತ್ತಿತರರಿದ್ದರು.