ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ.ಸೆ.21, ನಗರಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸುವ ಜತೆಗೆ ಜನಪ್ರತಿಧಿನಿಗಳು ಅಧಿಕಾರಿಗಳ ಹಗ್ಗಜಗ್ಗಾಟ ಬಿಟ್ಟು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಡೂಮ್ ಲೈಟ್ ವೃತ್ತದ ಪೆಟ್ರೋಲ್ ಬಂಕ್ ಬಳಿ ಜನಪ್ರತಿನಿದಿಗಳ ಅಣುಕು ಪ್ರದರ್ಶನ ಮಾಡಿ ರಸ್ತೆಯಲ್ಲಿ ಬಿದ್ದಿರುವ ಹಳ್ಳದಲ್ಲಿ ಬಾಗೀನ ಅರ್ಪಿಸುವ ಮೂಲಕ ನಗರಸಭೆ ಅಧಿಕಾರಿ ಮಂಜುನಾಥ್‍ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಹೋರಾಟದ ನೇತೃತ್ವವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾ ಕೇಂದ್ರ ಕೋಲಾರದಲ್ಲಿನ ರಸ್ತೆಗಳು ಇಂದು ಜನಸಾಮಾನ್ಯರ ಮರಣಶಾಸನ ಬರೆಯುವ ರಸ್ತೆಗಳಾಗಿ ಮಾರ್ಪಟ್ಟಿದ್ದು, ಒಂದೇ ಒಂದು ರಸ್ತೆಯಲ್ಲಿಯೂ ನೆಮ್ಮದಾಗಿ ಓಡಾಡಲು ಸಾಧ್ಯವಿಲ್ಲವಾಗಿದೆ. ನಗರಸಭೆ ಚುನಾವಣೆ ನಡೆದು ಒಂದು ವರ್ಷವೇ ಕಳೆದಿದ್ದರೂ ಆಡಳಿತ ಮಂಡಳಿಯಿಲ್ಲ. ಜತೆಗೆ ಅಮೃತ್‍ಸಿಟಿ, ಒಳಚರಂಡಿ ಯೋಜನೆಯ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿ ನಡೆಯುತ್ತಿವೆ. ಇದರಿಂದಾಗಿ ಅಭಿವೃದ್ಧಿ ಶೂನ್ಯ ಮಟ್ಟಕ್ಕೆ ಇಳಿದಿದೆ. ಇಂತಹ ಸಮಸ್ಯೆಗಳನ್ನು ಜನರು ಪ್ರತಿನಿತ್ಯ ಎದುರಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ತಮಗೆ ಸಂಬಂಧವೇ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಜತೆಗೆ ತಾಲೂಕಿನ ಎಸ್.ಅಗ್ರಹಾರ ಕೆರೆ ಬಾಗೀನ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲವೆಂದು ಮುನಿಸಿಕೊಂಡು ಅಧಿಕಾರಿಗಳ ಎತ್ತಂಗಡಿಗೆ ಪಣತೊಟ್ಟಿರುವುದು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸುತ್ತಿರುವುದು, ಡಿವೈಎಸ್ಪಿ ವರ್ಗಾವಣೆಯಾಗಿರುವುದು ಖಂಡನೀಯವಾಗಿದೆ. ಇನ್ನು ಸಂಸದರು ಬಂದಾಗ ಹೋದಾಗಲೆಲ್ಲಾ ಕೋಚಿಮುಲ್, ಡಿಸಿಸಿ ಬ್ಯಾಂಕ್‍ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿಕೊಂಡೇ ಇದ್ದಾರೆ ಹೊರತು ಅಭಿವೃದ್ಧಿ ಕಡೆಗೆ ಒತ್ತು ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಹದಗೆಟ್ಟಿರುವ ಸರ್ಕಾರಿ ಆಸ್ಪತ್ರೆಗೆ ಸಂಪರ್ಕವಿರುವ ಈ ರಸ್ತೆಗಳಲ್ಲಿ ಮಹಿಳೆಯರು ಹೆಣ್ಣುಮಕ್ಕಳು ಗರ್ಬಿಣಿ ಹೆಣ್ಣುಮಕ್ಕಳು ಸಂಚಾರ ನಡೆಸುವುದು ಹೇಗೆ ಈ ಎಲ್ಲಾ ಸಮಸ್ಯೆಗಳು ಜನಪ್ರತಿನಿದಿಗಳಿಗೆ ಕಾಣಿಸುತ್ತಿಲ್ಲವೇ, ಇನ್ನೂ ಕೋಲಾರ ಶಾಸಕರು, ಎಂಎಲ್‍ಸಿಯವರೂ ಅಭಿವೃದ್ಧಿ ವಿಚಾರದಲ್ಲಿ ಆಡಳಿತ ಸರಿಪಡಿಸುತ್ತೇವೆ ಎಂದು ಹೇಳಿಕೆಗಳಿಗಷ್ಟೇ ಸೀಮಿತರಾಗಿಬಿಟ್ಟಿದ್ದಾರೆ ಹೊರತು ಒಂದು ಹೆಜ್ಜೆಯೂ ಮುಂದಕ್ಕೆ ಇಡುತ್ತಿಲ್ಲ. ಹಾಗಾಗಿ ಸಮಸ್ಯೆಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ ಹೊರತು ನಿವಾರಣೆಯಾಗುತ್ತಿಲ್ಲ. ಅತ್ತ ಜಿಲ್ಲಾ ಪಂಚಾಯಿತಿಯಲ್ಲಿ ಸಿಇಒ ಹುದ್ದೆ ಖಾಲಿಯಾಗಿ 2 ತಿಂಗಳಾಗುತ್ತಾ ಬಂದಿದ್ದರೂ ಸಿಇಒ ನೇಮಕದ ಬಗ್ಗೆ ಮಾತನಾಡದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕೆಸಿವ್ಯಾಲಿ ಯೋಜನೆಯಡಿ ಕೋಟಿಕೋಟಿ ಲೂಟಿಯಾಗಿದೆ. ಅಧಿಕಾರಿಗಳು ಶಿಷ್ಟಾಚಾರ ಪಾಲಿಸದೆ ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಸಭೆಗಳಲ್ಲಿ ಸುದೀರ್ಘ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರ ಕೋಲಾರ ನಗರ ಸೇರಿದಂತೆ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸದಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಇನ್ನಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಸಮನ್ವಯತೆಯಿಂದ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಿದ್ದು, ಇಲ್ಲವಾದಲ್ಲಿ ಜನರೇ ಬೀದಿಗಿಳಿದು ತಕ್ಕಪಾಠ ಕಲಿಸುವ ಕಾಲ ಜೊತೆಗೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು
ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಅಧಿಕಾರಿ ಮಂಜುನಾಥ್‍ರವರು ಕೆಲವು ರಸ್ತೆಗಳು ಲೋಕೋಪಯೋಗಿ ಮತ್ತು ನಮಗೆ ಬರುತ್ತವೆ ಮಳೆ ಕಡಿಮೆಯಾದ ನಂತರ ರಸ್ತೆಗಳನ್ನು ಸರಿಪಡಿಸುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್, ಐತಾಂಡಹಳ್ಳಿ ಮಂಜುನಾಥ್, ಬಂಗವಾದಿ ನಾಗರಾಜ್‍ಗೌಡ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಮಾಸ್ತಿ ವೆಂಕಟೇಶ್, ವಕ್ಕಲೇರಿ ಹನುಮಯ್ಯ, ಸುಬ್ರಮಣಿ, ರಾಮಸ್ವಾಮಿ ಸುಪ್ರೀಂಚಲ, ಜಗದೀಶ್, ಸುಧಾಕರ್, ಸಹದೇವಣ್ಣ, ಮೀಸೆ ವೆಂಕಟೇಶಪ್ಪ, ವಿನೋದ್, ರವಿ ಮುಂತಾದವರಿದ್ದರು.