ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ: ಜಡಿ ಮಳೆಯಿಂದ ಟೊಮೆಟೊ ಬೆಳೆಗೆ ಬಾಧಿಸುತ್ತಿರುವ ಅಂಗಮಾರಿ, ಚುಕ್ಕೆ ರೋಗಕ್ಕೆ ಸೂಕ್ತ ಔಷಧಿ ನೀಡಿ, ಈಗಾಗಲೇ ನಷ್ಟವಾಗಿರುವ ಬೆಳೆಗೆ ಪ್ರತಿ ಎಕರೆಗೆ 1 ಲಕ್ಷರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಂತ ಸಾವಿರಾರು ಹೆಕ್ಟೇರ್‍ನಲ್ಲಿ ಟೊಮೆಟೊ ಬೆಳೆಯನ್ನು ಉತ್ತಮವಾಗಿ ಬೆಳೆಯಲಾಗಿದೆ. ಆದರೆ ಇತ್ತೀಚೆಗೆ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಅಂಗಮಾರಿ ಮತ್ತು ಚುಕ್ಕೆ ರೋಗಕ್ಕೆ ಬೆಳೆ ತುತ್ತಾಗಿದೆ ಎಂದು ಹೇಳಿದರು.
ಬೆಳೆ ಸಮೃದ್ಧವಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಳೆಯಿದ್ದರೂ ಸಹ ಈ ರೋಗಗಳಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ರೋಗಗಳಿಂದಾಗಿ ಬೆಳೆ ನಷ್ಟವಾಗಿ ಮತ್ತೆ ಖಾಸಗಿ ಸಾಲದ ಶೂಲಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿಯೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಔಷಧಿಗಳನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಯಾವ ಅಧಿಕಾರಿಗಳೂ ಸಹ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲ. ಈ ಬಗ್ಗೆ ಈಗಾಗಲೇ ರೈತರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಮತ್ತೊಂದೆಡೆ ಈ ರೋಗ ನಿಯಂತ್ರಣಕ್ಕಾಗಿ ರೈತರು ಖಾಸಗಿ ಅಂಗಡಿಗಳ ಮೊರೆ ಹೋಗಿ ಲಕ್ಷಾಂತರರೂಪಾಯಿ ಸುರಿಯಬೇಕಾದ ಪರಿಸ್ಥಿತಿಯಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಂಗಮಾರಿ ಮತ್ತು ಚುಕ್ಕೆ ರೋಗ ಬಂದಿರುವ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಷ್ಟವಾಗಿರುವ ರೈತರ ಬೆಳೆಗೆ 1 ಲಕ್ಷರೂ ಪರಿಹಾರದ ಜೊತೆಗೆ ಈ ರೋಗಗಳಿಗೆ ಗುಣಮಟ್ಟದ ಔಷಧಿಯನ್ನು ಸರಕಾರದಿಂದ ಕಲ್ಪಿಸಿಕೊಡಬೇಕಿದ್ದು, ಇಲ್ಲವಾದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಮಾನ್ಯರು ಕೂಡಲೇ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ರವಿಕುಮಾರ್, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಉಪಾಧ್ಯಕ್ಷ ವಡಗೂರು ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ವಿ.ನಳಿನಿ, ಸಹದೇವಣ್ಣ, ಸುಪ್ರೀಂ ಚಲ, ಮಂಗಸಂದ್ರ ತಿಮ್ಮಣ್ಣ, ನಾಗೇಶ್ ಉಪಸ್ಥಿತರಿದ್ದರು.