ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಿಸಲು ಜಿಲ್ಲಾಡಳಿತವು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಎಂದು ಅಬಕಾರಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ -19 ವೈರಸ್ ವಿಚಾರವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು . ಜಿಲ್ಲೆಯ ಎಲ್ಲಾ ಅಧಿಕಾರಿಗಳ ಕಾರ್ಯವೈಖರಿಯಿಂದ ಕರೋನವನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದರು . ಜಿಲ್ಲೆಯಲ್ಲಿ ಇದುವರೆಗೂ 1497 ಕೋವಿಡ್ ಸೋಂಕಿತರಿದ್ದು , 806 ಜನ ಗುಣಮುಖರಾಗಿದ್ದಾರೆ , 29 ಜನ ಕೋವಿಡ್ -19 ನಿಂದ ಮೃತ ಪಟ್ಟಿದ್ದು , 662 ಕೋವಿಡ್ -19 ಪ್ರಕರಣಗಳು ಸಕ್ರಿಯವಾಗಿವೆ ಎಂದ ಅವರು ಜಿಲ್ಲೆಯಲ್ಲಿ ಕೋವಿಡ್ -19 ರಿಂದ ಮೃತ ಪಟ್ಟವರ ಪ್ರಮಾಣ ಕಡಿಮೆ ಇದೆ ಎಂದು ತಿಳಿಸಿದರು . ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಅವಶ್ಯಕವಿರುವ ಉಪಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು .ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಆರ್ . ರಮೇಶ್ ಕುಮಾರ್ ಅವರು ಮಾತನಾಡಿ , ಕೋವಿಡ್ -19 ಸಾಂಕ್ರಮಿಕ ರೋಗದ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಕಡಿಮೆಯಿದ್ದು , ಮಾಧ್ಯಮಗಳ ಮೂಲಕ ಜನರಿಗೆ ಅರಿವನ್ನು ಮೂಡಿಸಬೇಕು ಎಂದರು . ಕೋವಿಡ್ ಅಲ್ಲದ ರೋಗಿಗಳು ಆಸ್ಪತ್ರೆಗೆ ಬಂದಂತಹ ಸಂದರ್ಭದಲ್ಲಿ ಕಡ್ಡಾಯವಾಗಿ ಕೋವಿಡ್ -19 ಟೆಸ್ಟ್ ಮಾಡುವಂತೆ ವೈದ್ಯರು ಒತ್ತಡ ಹೇರುತ್ತಿದ್ದು , ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು . ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿ , ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಹೇಳಿದರು . ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ ಅವರು ಮಾತನಾಡಿ ಕೋವಿಡ್ ಅಲ್ಲದ ರೋಗಿಗಳಿಗೆ ಪ್ರತ್ಯೇಕವಾಗಿ 100 ಹಾಸಿಗೆಗಳನ್ನು ಮೀಸಲಿಡಬೇಕೆಂದು ತಿಳಿಸಿದರು . ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಿಸಲು ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ . ಕೋವಿಡ್ -19 ಸೋಂಕಿಗೆ ತುತ್ತಾದ ವ್ಯಕ್ತಿಯ ಮನೆಯ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಪರಿವರ್ತಿಸಲಾಗುತ್ತದೆ . ಕಂಟೈನ್‌ಮೆಂಟ್ ವಲಯಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಬರುವುದಿಲ್ಲ ಎಂದು ಮಾಹಿತಿ ನೀಡಿದರು . ಸಭೆಯಲ್ಲಿ ಶಾಸಕರಾದ ಕೆ.ವೈ.ನಂಜೇಗೌಡ , ವಿಧಾನ ಪರಿಷತ್ ಸದಸ್ಯರಾದ ಗೋವಿಂದ ರಾಜು , ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ.ಎಸ್ . ವೆಂಕಟೇಶ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ , ಕೆ.ಜಿ.ಎಫ್ . ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕಿಯಾ ಕರಣಾಕರನ್ , ಅಪರ ಜಿಲ್ಲಾಧಿಕಾರಿಗಳಾದ ಶಿವಸ್ವಾಮಿ , ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ | ವಿಜಯ್ ಕುಮಾರ್ , ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ | ನಾರಾಯಣಸ್ವಾಮಿ , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ . ಚಾರಿಣಿ , ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು .