ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಕೋಲಾರ ರೈತ ಸಂಘದಿಂದ ಪಶು ಸಂಗೋಪನೆ ಇಲಾಖೆ ಮುಂದೆ ಹೋರಾಟ : ಸಿಬ್ಬಂದಿ ಭರ್ತಿ ಮಾಡಿ, ಹಣ ಕೇಳುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ
ಕೋಲಾರ-ಅ,23, ಜಿಲ್ಲಾದ್ಯಂತ ಪಶು ಇಲಾಖೆ ಖಾಲಿ ಇರುವ ಸಿಬ್ಬಂದಿಯನ್ನು ಕೂಡಲೇ ಭರ್ತಿ ಮಾಡಿ ಗ್ರಾಮೀಣ ಪ್ರದೇಶದ ಸೇವೆಗೆ ಹೆಚ್ಚಿನ ಆದ್ಯತೆ ನೀಡಿ, ಚಿಕಿತ್ಸೆ ನೀಡಲು ಹಣ ಕೇಳುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಪಶು ಸಂಗೋಪನೆ ಇಲಾಖೆ ಮುಂದೆ ಹೋರಾಟ ಮಾಡಿ ಸಹಾಯಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
* * * * *
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲೆಯಲ್ಲಿ ಸತತ ಬರಗಾಲದ ಹಿನ್ನಲೆಯಲ್ಲಿ ಅಂರ್ತಜಲ ದಿನೆ ದಿನೆ ಕುಸಿತಗೊಂಡು ಕೊಳವೆಬಾವಿಗಳು ಕೈಕೊಟ್ಟು ಬೆಳೆ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ಸಿಲುಕಿ ಕೃಷಿಯಿಂದ ವಿಮುಕ್ತಿ ಹೊಂದುತ್ತಿದ್ದ, ಜಿಲ್ಲೆಯ ರೈತರ ಬಾಳಿಗೆ ಬೆಳಕಾಗಿ ಹೈನೋದ್ಯಮ ಕೈ ಹಿಡಿದಿದೆ ಶೇಕಡ 90 ರಷ್ಟು ಗ್ರಾಮೀಣ ಪ್ರದೇಶ ಜನರು ಹೈನುಗಾರಿಕೆಯಿಂದ ಜೀವನ ಮಾಡುತ್ತಿದ್ದು, ಹಾಲು ಉತ್ಪಾದನೆಯಲ್ಲಿ ಕೋಲಾರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಆದರೆ ಜಿಲ್ಲೆಯ ಹೈನುಗಾರಿಕೆಯ ಬೆಳಕಾಗಿರುವ ಪಶು ಹಸುಗಳನ್ನು ರಕ್ಷಣೆ ಮಾಡಬೇಕಾದ ಇಲಾಖೆ ಇದ್ದು, ಇಲ್ಲದಂತಾಗಿ ಪ್ರತಿ ಒಂದು ಚಿಕಿತ್ಸೆಗೆ ಖಾಸಗಿ ವೈದ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಜಿಲ್ಲೆಯಲ್ಲಿದೆ ಜಿಲ್ಲೆಯಾದ್ಯಂತ ಇರುವ ಪಶು ವೈದ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಇಲ್ಲದೆ ಪ್ರತಿಯೊಬ್ಬ ಹಿರಿಯ ವೈದ್ಯರಿಗೆ ಮೂರು ತಾಲ್ಲೂಕುಗಳ ಜವಾಬ್ದಾರಿ ನೀಡುತ್ತಿದ್ದಾರೆ. ಕಾರಣ ಸಮರ್ಪಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪಶು ವೈದ್ಯ ಸೇವೆ ಇಲ್ಲದೆ ಜನ ಸಾಮಾನ್ಯರು ಪರದಾಡಬೇಕಾದ ಪರಿಸ್ಥಿತಿ ಇದ್ದರು ಇದನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಉಸ್ತುವಾರಿ ಸಚಿವರು ಮತ್ತು ಸರ್ಕಾರ ವಿಫಲವಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಇರುವ ಸಿಬ್ಬಂದಿ ಗ್ರಾಮೀಣ ಪ್ರದೇಶಗಳ ಸೇವೆಯೆಂದರೆ ಅಸಹ್ಯವಾಗಿ ವರ್ತನೆ ಮಾಡುವ ಜೊತೆಗೆ ಹಳ್ಳಿಗೆ ಕಾಲಿಟ್ಟರೆ ಹಣ ವಿಲ್ಲದೆ ಯಾವುದೇ ಚಿಕಿತ್ಸೆ ನೀಡುತ್ತಿಲ್ಲ ಅದರ ಜೊತೆಗೆ ಸರ್ಕಾರದಿಂದ ಬರುವ ಔಷಧಿಗಳನ್ನು ಸಮರ್ಪಕವಾಗಿ ವಿತರಣೆ ಮಾಡದೆ, ದಾಸ್ತಾನು ಮಾಡಿರುವ ಕೊಠಡಿಗಳಲ್ಲಿಯೇ ಕೊಳೆಯುತ್ತಿದ್ದರೂ ಅದರ ಬಗ್ಗೆ ಗಮನಹರಿಸದ ಪಶು ಉಪನಿರ್ದೇಶಕರ ರೈತ ವಿರೋಧಿ ದೋರಣೆಗೆ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಇಲಾಖೆ ಎಂಬುದು ಭ್ರಷ್ಟಾಚಾರದ ಕೂಪವಾಗಿದೆ. ಮಾತ್ರೆಯಿಂದ ಸೂಜಿಯವರೆಗೂ ಹಣ ಇಲ್ಲದೆ ವೈದ್ಯರು ಕಾರಿನಿಂದ ಕೆಳಗಡೆ ಸಹ ಇಳಿಯುವುದಿಲ್ಲ. ಅದರ ಜೊತೆಗೆ ಖಾಸಗಿ ಮೆಡಿಕಲ್ ಸ್ಟೋರ್‍ಗೆ ಔಷಧಿಗಳನ್ನು ಬರೆದುಕೊಡುವ ದೊಡ್ಡ ದಂದೆಯಾಗಿಸಿಕೊಂಡಿದ್ದಾರೆ. ಜಿಲ್ಲೆಯ ಜನರ ಮೇಲೆ ಉಪ ನಿರ್ದೇಶಕರಿಗೆ ಕರುಣೆ ಇದ್ದರೆ, ಕೂಡಲೇ ಜಿಲ್ಲಾಧ್ಯಂತ ಖಾಲಿ ಇರುವ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಗ್ರಾಮೀಣ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಇರುವ ಸಿಬ್ಬಂದಿ ಚಿಕಿತ್ಸೆ ನೀಡಲು ಹಣಕ್ಕಾಗಿ ಪೀಡಿಸುವ ವೈದ್ಯರ ವಿರುದ್ಧ ಕ್ರಮ ಕೈಗೊಂಡು ಸರ್ಕಾರದಿಂದ ಬರುವ ಪಶು ಇಲಾಖೆ ಅನುದಾನಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸಲು ಕರಪತ್ರದ ಮುಖಾಂತರ ಜಾಗೃತಿ ಮೂಡಿಸಬೇಕು. ಇಲ್ಲವಾದರೆ ಇಲಾಖೆಗೆ ಶಾಶ್ವತವಾಗಿ ಬೀಗ ಜಡಿಯುವ ಚಳುವಳಿಯನ್ನು ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ನಿರ್ದೇಶಕರಾದ ಆಚಿಜನೇಯರೆಡ್ಡಿರವರು ಮಾತನಾಡಿ ಇಲಾಖೆಯಲ್ಲಿ ಶೇಕಡ 60% ರಷ್ಟು ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಗೆ 3-4 ಹೋಬಳಿಗಳಿಗೆ ಪ್ರಭಾರವಾಗಿ ನೇಮಕ ಮಾಡಿ ಕೆಲಸದ ಒತ್ತಡ ಹೆಚ್ಚಾಗಿದೆ ಜೊತೆಗೆ ಗ್ರಾಮೀಣ ಪ್ರದೇಶಗಳ ಸಮರ್ಪಕವಾದ ಸೇವೆಗೆ ಹಣ ಕೇಳುವ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದು, ಅದನ್ನು ಸರಿಪಡಿಸುವ ಜೊತೆಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಿರಿಯ ಅಧಿಕಾರಿಗಳೊಡನೆ ಚರ್ಚೆ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡುವ ಭರವಸೆಯನ್ನು ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಸಹದೇವಣ್ಣ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾತ ಫಾರುಕ್‍ಪಾಷ, ಮೀಸೆ ವೆಂಕಟೇಶಪ್ಪ, ಸುಪ್ರೀಂಚಲ, ನವೀನ್, ತೆರ್ನಹಳ್ಳಿ ಆಂಜಿನಪ್ಪ, ಹೊಸಹಳ್ಳಿ ವೆಂಕಟೇಶ್, ಅಂಬರೀಶ್, ತೆರ್ನಹಳ್ಳಿ ವೆಂಕಿ, ಪ್ರಸನ್ನಕುಮಾರ್, ಸಂತೋಷ್, ಮುಂತಾದವರಿದ್ದರು.