ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ.ಜೂ,6: ಜಿಲ್ಲೆಯಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ
ಕೋಲಾರ.ಜೂ,6: ಜಿಲ್ಲೆಯಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಆವರಣದೊಳಗೆ ಪ್ರವೇಶಿಸದಾಗ ಪೊಲೀಸರು ಕಾಂಪೌಂಡ್ ಗೇಟ್ ಬಾಗಿಲು ಮುಚ್ಚಿ ಒಳಗೆ ಬಿಡಲು ನಿರಾಕರಿಸಿದಾಗ ಸಂಘದ ಮುಖಂಡರಿಗೂ ಹಾಗೂ ಪೊಲೀಸರಿಗೂ ವಾಗ್ವಾದ ನಡೆದು ಕೊನೆಗೆ ಸಂಘಟನೆಯವರು ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಹೋಗಿ ರಸ್ತೆ ಅಡ್ಡಗಟ್ಟಿದ ಮೇಲೆ ಪೊಲೀಸರು ಮುಖಂಡರ ಮನವೊಲಿಸಿ ಜಿಲ್ಲಾಧಿಕಾರಿಗಳ ಆವರಣದೊಳಗೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಿಲ್ಲಾದ್ಯಂತ ರೈತರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ನಿರಂತರ ಬರಗಾಲ, ನೀರಿನ ಸಮಸ್ಯೆ, ಬಿಸಿಲಿನ ತಾಪ, ಅಲಿಕಲ್ಲಿ ಮಳೆ, ಬೆಳೆದ ಬೆಳೆಗಳು ರೈತರ ಕೈಗೆ ಸಿಗಲಾರದ ಪರಿಸ್ಥಿತಿ ತಲುಪಿವೆ. ಎರಡು ಮೂರು ವರ್ಷಗಳಿಂದ ಬೆಳೆವಿಮೆ ಹಾಗೂ ಬೆಳೆನಷ್ಟ ಪರಿಹಾರಕ್ಕಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರೂ ಪರಿಹಾರಗಳು ಸಿಗುತ್ತಿಲ್ಲವೆಂದು ಹೋರಾಟಗಾರರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ ಜಿಲ್ಲಾಡಳಿತದ ವೈಪಲ್ಯಗಳನ್ನು ಖಂಡಿಸಿದರು.
ಬಗರ್ ಹುಕ್ಕುಂ ಸಾಗುವಳಿಗಾಗಿ ಹತ್ತಾರು ವರ್ಷಗಳಿಂದ ಕಾಯುತ್ತಿದ್ದ ರೈತರಿಗೆ ಫಾರಂ ನಂ. 57 ರಲ್ಲಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿತು. ನಿಗಧಿತ ದಿನಾಂಕದ ಒಳಗೆ ಲೋಕಸಭಾ ಚುನಾವಣೆ ಘೋಷಣೆಯಾದ ಹಿಲ್ಲನೆಯಲ್ಲಿ ರಾಜ್ಯದ ಕೆಲವು ತಾಲೂಕು ಕಚೇರಿಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಿಲ್ಲ. ಇದರಿಂದ ಸಾಗುವಳಿದಾರರು ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ರೈತರ ಅರ್ಜಿ ಹಾಕಿಕೊಳ್ಳಲು ಮತ್ತಷ್ಟು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಕೋಲಾರ ಜಿಲ್ಲೆಯಲ್ಲಿ ನಿವೇಶನ ರಹಿತರು ಗ್ರಾಮ ಪಂಚಾಯತಿಗಳಲ್ಲಿ ಮತ್ತು ನಗರಸಭೆಗಳಲ್ಲಿ ಅರ್ಜಿ ಹಾಕಿಕೊಂಡಿದ್ದರೂ ಸಹ ಅಧಿಕಾರಿಗಳು ಪಟ್ಟಿ ಕುಳುಹಿಸುವಾಗ ತಾರತಮ್ಯ ತೋರಿ ಕೆಲವರನ್ನು ಪಟ್ಟಿಯಿಂದ ಕೈಬಿಟ್ಟಿದಾರೆಂದು ದೂರಿದರು.
ಜಿಲ್ಲೆಯಲ್ಲಿ ಕೃಷಿ ಕೂಲಿಕಾರರಿಗೆ ಉದ್ಯೋಗ ಕಲ್ಪಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಉದ್ಯೋಗಖಾತ್ರಿ ಯೋಜನೆ ಶ್ರೀಮಂತ ರೈತರು ಮತ್ತು ಪಟ್ಟಭದ್ರರು ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಆರೋಪಿಸಿದರು.
ಬೆಂಗಳೂರು-ಚನೈ ಎಕ್ಸ್ಪ್ರೆಸ್ವೇ, ಎನ್.ಹೆಚ್-75 ಮತ್ತು ಹೈಟೆನ್ಶನ್ ಟವರ್ ನಿರ್ಮಾಣ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡರವರಿಗೆ ಸೂಕ್ತ ಪರಿಹಾರ ಕೊಡಿಸಲು ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಜಿಲ್ಲಾಡಳಿತ ವಿಫಲವಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಮತ್ತು ರೈತ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕೆಂದು ಎಚ್ಚರಿಸಿದರು.
ತಹಸೀಲ್ದಾರ್ ನಾಗಮಣಿ ರವರು ಮನವಿ ಸ್ವೀಕರಿಸಿ ಕೆಲವು ಸಮಸ್ಯೆಗಳು ಜಿಲ್ಲಾಮಟ್ಟದಲ್ಲಿ ಬಗೆಹರಿದಿದ್ದು, ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರುಗಳಾದ ಪಾತಕೋಟೆ ನವೀನ್ಕುಮಾರ್, ಕುರ್ಕಿ ದೇವರಾಜ್, ಎನ್.ಎನ್.ಶ್ರೀರಾಮ್, ಸಹ ಕಾರ್ಯದರ್ಶಿಗಳಾದ ವಿ.ನಾರಾಯಣರೆಡ್ಡಿ, ಎನ್ ಯಲ್ಲಪ್ಪ, ಎಂ.ಎಸ್ ನಾಗರಾಜ್, ಮುಖಂಡರಾದ ಸಿ.ಮುನಿಸ್ವಾಮಿಗೌಡ, ಕೆ.ವೆಂಕಟಪ್ಪ, ಆರ್.ವೆಂಕಟೇಶ್, ಚಂಗೇಗೌಡ, ರಮೇಶ್, ವೆಂಕಟಲಕ್ಷ್ಮಮ್ಮ, ಮುನಿರತ್ನಮ್ಮ ಇನ್ನಿತರರು ಉಪಸ್ಥಿತರಿದ್ದರು.