ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾಣಿಜ್ಯ ಮಳಿಗೆಗಳ ತೆರಿಗೆಯನ್ನು ಸಮರ್ಪಕವಾಗಿ ವಸೂಲಿ ಮಾಡಬೇಕು ಎಂದು ಪೌರಾಡಳಿತ , ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸಚಿವರಾದ ಕೆ ಆರ್ ನಾರಾಯಣಗೌಡ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಗಣದಲ್ಲಿ ಪೌರಾಡಳಿತ , ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಜಿಲ್ಲೆಯಲ್ಲಿ ತೆರಿಗೆ ಹಣ ಕಡಿಮೆ ಆಗುತ್ತಿದ್ದು ಅಧಿಕಾರಿಗಳು ಗಮನ ಹರಿಸಬೇಕು , ಪ್ರತಿ ತಾಲ್ಲೂಕಿನ ಲೀಗಲ್ ಅಡೋಸರ್ ಗಳಿಂದ ಸರ್ಕಾರಕ್ಕೆ ಬರುವ ಆದಾಯ ಕುಂಠಿತಗೊಳ್ಳುತ್ತಿದೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು . ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈಗಾಗಲೇ ಯರಗೋಳ್ ಡ್ಯಾಂ ಯೋಜನೆ ಮುಕ್ತಾಯ ಹಂತದಲ್ಲಿದ್ದು , ಮುಂದಿನ ಜನವರಿ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ . ಹಸಿಕಸ ಮತ್ತು ಒಣಕಸಕ್ಕೆ ಸಂಬಂಧಿಸಿದಂತೆ ಮಂಡ್ಯ ಮತ್ತು ತುಮಕೂರು ಜಿಲ್ಲೆಗಳು ಪ್ರಗತಿ ಸಾಧಿಸಿವೆ ಅದೇ ರೀತಿ ಕೋಲಾರ ಜಿಲ್ಲೆಯಲ್ಲಿಯೂ ಪ್ರಗತಿ ಸಾಧಿಸಬೇಕು ಎಂದರು . ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಏಜೆನ್ಸಿ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು , ಮುಂದಿನ ದಿನಗಳಲ್ಲಿ ಇಲಾಖೆಯ ವತಿಯಿಂದ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು . ಸಭೆಯಲ್ಲಿ ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ , ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಶ್ರೀನಿವಾಸ ಗೌಡ , ಕೆ . ಜಿ . ವಿಪ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್ , ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು , ವೈ ಎ ನಾರಾಯಣಸ್ವಾಮಿ , ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ , ಉಪವಿಭಾಗಾಧಿಕಾರಿಗಳಾದ ಸೋಮಶೇಖರ್ , ಸೇರಿದಂತೆ ಪೌರಾಡಳಿತ , ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು