ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ ಜಿಲ್ಲೆಯಲ್ಲಿ ಗಡಿನಾಡು ಕೋಲಾರ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ:ಜೆ. ಮಂಜುನಾಥ್
ಕೋಲಾರ: ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಡಿನಾಡ ಕೋಲಾರ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದರು.
ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕ್ರಿಕೆಟ್ ವಿಶ್ವದಲ್ಲೇ ಅತ್ಯುತ್ತಮ ಕ್ರೀಡೆಯಾಗಿದ್ದು, ಭಾರತೀಯರ ಅಚ್ಚುಮೆಚ್ಚಿನ ಕ್ರೀಡೆಯಾಗಿದೆ. ಈ ಕ್ರೀಡೆಯನ್ನು ಕೋಲಾರ ಜಿಲ್ಲೆಯಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯ ಹುತ್ತೂರು ಹೋಬಳಿ, ಹೊಳಲಿ ಗ್ರಾಮದ 16 ಎಕರೆ ಸರ್ಕಾರಿ ಗೋಮಾಳ ಜಮೀನು ಲಭ್ಯವಿದೆ. ಸರ್ಕಾರವು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಬೆಂಗಳೂರು ಅವರ ಸಹಯೋಗದೊಂದಿಗೆ ಇಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟ ಭೂ ಮಂಜೂರಾತಿ 1969 ನಿಯಮ 22(ಎ) 1, 6 ರ ಅನ್ವಯ ಮಾರ್ಗಸೂಚಿ ಬೆಲೆಯ ಶೇ 5 ರಷ್ಟು ವಾರ್ಷಿಕ ಗುತ್ತಿಗೆ ದರವನ್ನು ನಿಗದಿಪಡಿಸಿ, ಎರಡು ವರ್ಷಕ್ಕೊಮ್ಮೆ ಶೇ 10 ರಷ್ಟು ಗುತ್ತಿಗೆ ದರವನ್ನು ಹೆಚ್ಚಿಸಿಕೊಂಡು ಹೋಗುವಂತಹ ಷರತ್ತಿಗೆ ಒಳಪಟ್ಟು 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಜಮೀನನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‍ಗೆ ಮಂಜೂರು ಮಾಡಲಾಗಿದೆ. ಇದರಿಂದ ಕೋಲಾರ ಜಿಲ್ಲೆಯ ಕ್ರೀಡಾಪಟು ಹಾಗೂ ಕ್ರೀಡಾಭಿಮಾನಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹೊಳಲಿ ಗ್ರಾಮದಲ್ಲಿರುವ ಒಂದು ಎಕರೆ ಜಮೀನಿನ ಬೆಲೆ ಸುಮಾರು 3 ಲಕ್ಷ 90 ಸಾವಿರ ಇದೆ. ಕ್ರಿಕೆಟ್ ಕ್ರೀಡಾಂಗಣದ 16 ಎಕರೆ ಜಮೀನಿಗೆ ವಾರ್ಷಿಕವಾಗಿ 3,17,600 ರೂಗಳನ್ನು ಶೇ 5 ರ ದರದಲ್ಲಿ ನಿಗದಿಮಾಡಲಾಗಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಈ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗುತ್ತದೆ ಎಂದರು.
ಕ್ರೀಡೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇದು ದೊಡ್ಡ ಹೆಜ್ಜೆಯಾಗಿದೆ. ಕ್ರಿಕೆಟ್ ಕ್ರೀಡಾಂಗಣದ ಕರಡು ಪ್ರತಿ ಸಿದ್ಧವಾಗಿದ್ದು, ಸರ್ವೆ ಇಲಾಖೆಯ ತಹಶೀಲ್ದಾರ್‍ರ ಸಲಹೆ ಮೇರೆಗೆ ಕ್ರೀಡಾಂಗಣದ ಸ್ಥಳಕ್ಕೆ ಬೌಂಡರಿ ನಿರ್ಮಿಸಲಾಗುವುದು. ಹೈವೇ ರಸ್ತೆಯಿಂದ ಹೊಳಲಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲಾಗುವುದು ಹಾಗೂ ಗ್ರಾಮದ ರಸ್ತೆಯನ್ನು ಅಗಲೀಕರಣ ಮಾಡಲು ನಿರ್ಧರಿಸಲಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ಜಿಲ್ಲಾ ಪ್ರತಿನಿಧಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಸಮನ್ವಯಾಧಿಕಾರಿ ರಮೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ 2 ಕ್ರಿಕೆಟ್ ಮೈದಾನಗಳನ್ನು ನಿರ್ಮಾಣ ಮಾಡಲು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನೆಟ್ ಪ್ರಾಕ್ಟೀಸ್ ಮಾಡಲು ಕಠಿಣವಾದ ಪಿಚ್‍ನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಬ್ಯಾಟಿಂಗ್, ಬೌಲಿಂಗ್, ಲೆಗ್‍ಸ್ಪಿನ್, ಆಫ್‍ಸ್ಪಿನ್, ಔಟ್‍ಸ್ಪಿನ್, ಎಲ್ಲಾ ರೀತಿಯ ಬೌಲಿಂಗ್ ತರಬೇತಿ ಸೌಲಭ್ಯವನ್ನು ಜಿಲ್ಲೆಯಲ್ಲಿ ನಡೆಸಲು ಅನುಮತಿ ದೊರೆತಿದೆ. ಫೆವಿಲಿಯನ್ ಹಾಗೂ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
20-20 ಟೂರ್ನ್‍ಮೆಂಟ್ಸ್, ರಣಜಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಬಿಸಿಸಿಐಯಿಂದ ಅನುಮತಿ ದೊರೆತಿದೆ. ಬೇಸಿಗೆ ಶಿಬಿರ, ವಾರ್ಷಿಕ ಶಿಬಿರಗಳನ್ನು ನಡೆಸಲಾಗುವುದು. ಜಿಲ್ಲೆಯಲ್ಲಿನ ಪ್ರತಿಭಾನ್ವಿತ 40 ಆಟಗಾರರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಿ, ರಾಜ್ಯ ಮಟ್ಟಕ್ಕೆ ಹಾಗೂ ರಣಜಿ ಪಂದ್ಯಗಳಿಗೆ ಆಯ್ಕೆ ಮಾಡಲಾಗುವುದು. ಅವರನ್ನು ಅಂತರರಾಷ್ಟ್ರೀಯ ಕ್ರೀಡಾಪಟುಗಳ ಮಟ್ಟಕ್ಕೆ ತಯಾರು ಮಾಡಲಾಗುವುದು ಎಂದು ತಿಳಿಸಿದರು.
ಒಂದು ಕ್ರೀಡಾಂಗಣ ನಿರ್ಮಾಣ ಮಾಡಲು 4 ಎಕರೆ ಜಮೀನು ಅವಶ್ಯಕತೆ ಇದೆ. ಒಂದು ವರ್ಷದೊಳಗೆ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ಹಂತ ಹಂತವಾಗಿ ಫೆವಿಲಿಯನ್, ವಿಶ್ರಾಂತಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು. ಈಗಾಗಲೇ ಶಿವಮೊಗ್ಗ, ಬೆಳಗಾಂ, ಮೈಸೂರು ಜಿಲ್ಲೆಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಲಾಗಿದೆ. ಉಚಿತ ಶಿಬಿರಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಹಾಯಕ ಕಮೀಷನರ್ ಸೋಮಶೇಖರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು..