ಕೋಲಾರ – ಗಾಂಧೀಜಿ ಅವರ ತತ್ವ , ಆದರ್ಶಗಳು, ಜೀವನ ಮಾರ್ಗಗಳು ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳೋಣ : ಕೋಲಾರ ಉಪವಿಭಾಗಾಧಿಕಾರಿ ಸೋಮಶೇಖರ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಇಂದು ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ನಗರದ ಗಾಂಧೀವನದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಅವರ 152 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಾಂಧೀಜಿಯವರು ಜಗತ್ತಿಗೆ ಶಾಂತಿ , ಸತ್ಯ ಹಾಗೂ ಅಹಿಂಸೆಯನ್ನು ಸಾರಿದರು. ಇದಕ್ಕೂ ಮೊದಲು ಭಗವಾನ್ ಬುದ್ದ ಶಾಂತಿಯ ಸಂದೇಶ ಸಾರಿದ್ದರೂ , ನಾವೆಲ್ಲರೂ ಅದನ್ನು ಮರೆತಿದ್ದವು . ಗಾಂಧೀಜಿಯವರು ಶಾಂತಿ ಮಂತ್ರವನ್ನು ಪುನಃ ಚಾಲನೆಗೆ ತಂದರು ಎಂದು ತಿಳಿಸಿದರು . ಜಗತ್ತಿನ ಹಲವು ದೇಶಗಳು ಸ್ವಾತಂತ್ರ್ಯವನ್ನು ಹಿಂಸಾ ಹೋರಾಟದ ಮೂಲಕ ಪಡೆದಿವೆ. ಆದರೆ ಭಾರತ ದೇಶವು ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾ ಮಾರ್ಗದ ಮೂಲಕ ಸತ್ಯಾಗ್ರಹಗಳನ್ನು ಮಾಡಿ ಸ್ವಾತಂತ್ರ್ಯ ಗಾಂಧೀಜಿಯವರು ವಿವಿಧ ಧರ್ಮಗಳನ್ನು ಒಂದುಗೂಡಿಸಿ ಸಹಭಾಳ್ವೆ ನಡೆಸುವಂತೆ ಸಂದೇಶ ಸಾರಿದರು. ಹಳ್ಳಿಗಳ ಉದ್ದಾರವಾದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ . ಹರಿಜನ ಎಂಬ ಪತ್ರಿಕೆಯನ್ನು ಪ್ರಾರಂಭಿಸುವ ಮೂಲಕ ಸಮಾಜದ ಪಿಡಗುಗಳನ್ನು ಹೋಗಲಾಡಿಸಲು ಶ್ರಮಿಸಿದರು ಎಂದು ತಿಳಿಸಿದರು.ಮಾಜಿ ಪ್ರಧಾನ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವು ಸಹ ಇಂದೆ ಆಗಿದ್ದು , ಇವರು ದೇಶಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ . ಇವರ ಸರಳತೆ ದೇಶಕ್ಕೆ ಮಾದರಿಯಾಗಿದೆ . ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಸಮಾಜ ಏಳಿಗೆಗೆ ಶ್ರಮಿಸಬೇಕು ಎಂದು ತೋರಿಸಿಕೊಟ್ಟರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮುದ್ರಿಸಿರುವ ಮಾರ್ಚ್ ಆಫ್ ಕರ್ನಾಟಕ ಹಾಗೂ ಜನಪದ ಸಂಚಿಕೆಗಳನ್ನು ಬಿಡುಗಡೆಗೊಳಿಸಲಾಯಿತು . ಭಗವದ್ಗೀತೆ , ಬೈಬಲ್ , ಕುರಾನ್ ಹಾಗೂ ರಘುಪತಿ ರಾಘವ ರಾಜ ರಾಮ್ ಕತೆಗಳನ್ನು ಪಠಣ ಮಾಡುವ ಮೂಲಕ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು , ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಯರಾಮ ರೆಡ್ಡಿ , ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಂಗಸ್ವಾಮಿ , ನಗರಸಭೆ ಆಯುಕ್ತರಾದ ಶ್ರೀಕಾಂತ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜೇಗೌಡ ಅವರು ಸೇರಿದಂತೆ ಭಾರತ್ ಸೇವಾದಳದ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು .