ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಕೋವಿಡ್ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಗೆದ್ದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಇದೀಗ ಮೌಲ್ಯಮಾಪನವನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.
ಜು.13 ರಿಂದ ಆರಂಭಗೊಳ್ಳಲಿರುವ ಮೌಲ್ಯಮಾಪನಕ್ಕೆ ನಡೆಸಿರುವ ಸಿದ್ದತೆಗಳ ಕುರಿತು ಮಾಹಿತಿ ನೀಡಿರುವ ಅವರು, ಈಗಾಗಲೇ ಜಂಟಿ ಮುಖ್ಯ ಮೌಲ್ಯಮಾಪಕರ ನೇತೃತ್ವದಲ್ಲಿ ಉಪಮುಖ್ಯ ಮೌಲ್ಯಮಾಪಕರು, ಉತ್ತರ ಪತ್ರಿಕೆಗಳ ಬಂಡಲ್‍ಗಳ ಡಿಕೋಡಿಂಗ್ ಕಾರ್ಯವನ್ನು ಮುಗಿಸಿದ್ದು, ಸಹಾಯಕಮೌಲ್ಯಮಾಪಕರು ಜು.13 ರಿಂದ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಘನತೆಗೆ ಕುಂದು ಬಾರದ ರೀತಿಯಲ್ಲಿ ಮೌಲ್ಯಮಾಪನವನ್ನು ಸಮರ್ಥವಾಗಿ ನಿರ್ವಹಿಸುವಂತೆ ಶಿಕ್ಷಕರಿಗೆ ಕರೆ ನೀಡಿರುವ ಅವರು, ಮೌಲ್ಯಮಾಪನದಲ್ಲಿ ತಪ್ಪು ಮಾಡಿ ದಂಡ ತೆರುವ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ವಿದ್ಯಾರ್ಥಿಯ ಬದುಕಿನಲ್ಲಿ ಪ್ರತಿ ಅಂಕವೂ ಮುಖ್ಯ ಎಂಬುದನ್ನು ಅರಿತು ಸೂಕ್ತವಾಗಿ ಗಮನಿಸಿ ಅಂಕ ನೀಡಿ, ಯಾವುದೇ ಪ್ರತಿಭೆಗೆ ನಿಮ್ಮಿಂದ ಅನ್ಯಾಯವಾಗಬಾರದು ಎಂದು ತಿಳಿಸಿದ್ದಾರೆ.
ಕೋವಿಡ್ ಆತಂಕ : ಮುನ್ನೆಚ್ಚರ ಅಗತ್ಯ
ಮೌಲ್ಯಮಾಪನಕ್ಕೆ ಬರುವ ಶಿಕ್ಷಕರು ಬೆಳಗ್ಗೆ 9 ಗಂಟೆಗೆ ಸೂಚಿಸಿರುವ ಕೇಂದ್ರಗಳಲ್ಲಿ ಹಾಜರಿರುವಂತೆ ತಿಳಿಸಿರುವ ಅವರು, ಬಂದೊಡನೆ ಥರ್ಮಲ್ ಸ್ಕ್ರೀನಿಂಗ್ ಒಳಗಾಗಿ ಮತ್ತು ಯಾವುದೇ ಕಾರಣಕ್ಕೂ ಗುಂಪು ಸೇರಬಾರದು, ಸಾಮಾಜಿಕ ಅಂತರ ಪಾಲಿಸಿ ಎಂದು ಕೋರಿದ್ದಾರೆ.
ಕುಡಿಯುವ ನೀರನ್ನು ಮನೆಯಿಂದಲೇ ತರಲು ಸಲಹೆ ನೀಡಿರುವ ಅವರು, ಊಟದ ಡಬ್ಬಿಯನ್ನು ನೀವೇ ತನ್ನಿ ಎಂದು ಶಿಕ್ಷಕರಿಗೆ ಸೂಚಿಸಿದ್ದಾರೆ.
ಓರ್ವ ಡಿಸಿ ಜತೆ 6 ಮೌಲ್ಯಮಾಪಕರು
ಪ್ರತಿಯೊಬ್ಬ ಉಪ ಮೌಲ್ಯಮಾಪಕರ ನೇತೃತ್ವದಲ್ಲಿ 6 ಮಂದಿ ಸಹಾಯಕ ಮೌಲ್ಯಮಾಪಕರು ಕಾರ್ಯನಿರ್ವಹಿಸಲು ಈಗಾಗಲೇ ಸಾಮಾಜಿಕ ಅಂತರ ಪಾಲಿಸಿ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಹಾಯಕ ಮೌಲ್ಯಮಾಪಕರು ಕೋವಿಡ್ ಮಾರ್ಗಸೂಚಿ ಪಾಲಿಸಿ ಕೇಂದ್ರಕ್ಕೆ ಬಂದು ತಮಗೆ ಸೂಚಿಸಿರುವ ಕೊಠಡಿಗಳಲ್ಲಿ ಕೂರಲು ತಿಳಿಸಲಾಗಿದೆ, ಆನಂತರ ಅವರ ಮೊಬೈಲ್‍ಗೆ ಒಟಿಪಿ ನಂಬರ್ ಕಳುಹಿಸಿದ ನಂತರ ಕಂಪ್ಯೂಟರ್ ಕೊಠಡಿಗೆ ಆಗಮಿಸಿ ಅಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿ ದಿನ ಓರ್ವ ಶಿಕ್ಷಕರಿಗೆ 20 ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಮಾತ್ರ ಅವಕಾಶವಿದೆ, ಸಹಾಯಕ ಮೌಲ್ಯಮಾಪಕರು ಕೇಂದ್ರದಲ್ಲಿ ಮೊದಲು ಉಪಮುಖ್ಯ ಮೌಲ್ಯಮಾಪಕರೊಂದಿಗೆ ನಿಮಗೆ ನೀಡುವ ಕೀ ಉತ್ತರ ಪತ್ರಿಕೆ ಆಧರಿಸಿ ಚರ್ಚಿಸಿ, ಮಕ್ಕಳು ಬರೆದಿರುವ ಉತ್ತರಗಳಲ್ಲಿ ಕೀ ಉತ್ತರಗಳನ್ನು ಹೊರತುಪಡಿಸಿಯೂ ಅರ್ಹ ಉತ್ತರ ಇದ್ದರೆ ಅಂಕ ನೀಡಿ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧೀಕಾರಿ ಎ.ಎನ್.ನಾಗೇಂದ್ರಪ್ರಸಾದ್
ಮೌಲ್ಯಮಾಪನದ ನಂತರ ಮತ್ತೊಮ್ಮೆ ಕ್ರಾಸ್ ಚೆಕ್ ಮಾಡಿ, ಉಪಮುಖ್ಯಮೌಲ್ಯಮಾಪಕರಿಂದ ಅನುಮೋದನೆ ಪಡೆದ ನಂತರವೇ ಅಂಕಗಳನ್ನು ಅಂಕಗಳ ವಹಿಯಲ್ಲಿ ದಾಖಲಿಸಲು ಸೂಚಿಸಿದ್ದಾರೆ.
ಮೌಲ್ಯಮಾಪನ ಕಾರ್ಯದಲ್ಲಿ ಲೋಪಗಳಿಗೆ ಅವಕಾಶ ಇಲ್ಲದಂತೆ ಎಚ್ಚರಿಕೆ ವಹಿಸಿ, ಜತೆಗೆ ಕೋವಿಡ್ ನಿಯಮ ಪಾಲಿಸಿ ಆರೋಗ್ಯ ಸುರಕ್ಷತೆಗೂ ಗಮನಹರಿಸಿ ಎಂದು ಸಲಹೆ ನೀಡಿದ್ದಾರೆ.
ಮೌಲ್ಯಮಾಪನ ಕೇಂದ್ರಗಳ ವಿವರ
ಕೋಲಾರ ನಗರದಲ್ಲಿ ನವ ನಳಂದ ಶಾಲೆಯಲ್ಲಿ ಕನ್ನಡ, ಮಹಿಳಾ ಸಮಾಜದಲ್ಲಿ ಇಂಗ್ಲೀಷ್, ಸೈನಿಕ್ ಪಬ್ಲಿಕ್ ಶಾಲೆಯಲ್ಲಿ ಹಿಂದಿ, ಸುಗುಣಾ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಗಣಿತ, ಸೆಂಟ್‍ಆನ್ಸ್‍ನಲ್ಲಿ ವಿಜ್ಞಾನ, ಚಿನ್ಮಯ ವಿದ್ಯಾಲಯದಲ್ಲಿ ಸಮಾಜ ವಿಜ್ಞಾನದ ಮೌಲ್ಯಮಾಪನ ನಡೆಯುತ್ತಿದೆ ಎಂದರು.