JANANUDI.COM NETWORK
ಕೋಟ ಡಬಲ್ ಮರ್ಡರ್ ಕೇಸ್ : ಜಿ.ಪಂ ಸದಸ್ಯ ರಾಘು ಕಾಂಚನ್ ಜಾಮೀನು ವಜಾ
ಕುಂದಾಪುರ : ಅವಿಭಜಿತ ಜಿಲ್ಲೆಗಳನ್ನೇ ಬೆಚ್ಚಿ ಬೀಳಿಸಿದ 2019ರ ಜನವರಿ 26ರಂದು ಕೋಟದಲ್ಲಿ ನಡೆದಿದ್ದ ಯತೀಶ್ ಕಾಂಚನ್ ಹಾಗೂ ಭರತ್ ಜೋಡಿ ಕೊಲೆ ಪ್ರಕರಣದಲ್ಲಿ ಹೈ ಕೋರ್ಟ್ ಮೂಲಕ ಜಾಮೀನು ಪಡೆಯುವಲ್ಲಿ ಯಶಸ್ವಿಯಾದ ಹತ್ಯಾ ಕಾಂಡದ ಸೂತ್ರಧಾರ ಎನ್ನಲಾದ ಜಿಲ್ಲಾ ಪಂಚಾಯತ್ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ವಜಾಗೊಳಿಸಿ ಆದೇಶ ನೀಡಿದೆ
ಹತ್ಯೆಯಾದÀ ಭರತ್ನ ತಾಯಿ ಪಾರ್ವತಿ, ಆರೋಪಿ ರಾಘವೇಂದ್ರ ಕಾಂಚನ್ಗೆ ಜಾಮೀನು ಲಭಿಸಿದ ಬಗ್ಗೆ ದಿಟ್ಟವಾಗಿ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದು, ಅಂದು ನಡೆದ ಬರ್ಬರ ಹತ್ಯೆಗೆ ಇಡೀ ಕರಾವಳಿ ಮಾತ್ರವಲ್ಲ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಕರಾವಳಿಯಲ್ಲಿ ಮೊದಲ ಬಾರಿಗೆ ಹತ್ಯಾ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಪೊಲಿಸರು ಶಾಮೀಲಾಗಿದ್ದು ಬೆಳಕಿಗೆ ಬಂದ ಅಮಾನುಷ ಪ್ರಕರಣ ಇದಾಗಿತ್ತು. ಅಲ್ಲದೇ ಜಿಲ್ಲಾ ಪಂಚಾಯಿತಿ ಸದಸ್ಯರು ಕೊಲೆಗೆ ಸಂಚು ಹೂಡಿದ್ದರು ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ರಾಘವೇಂದ್ರ ಕಾಂಚನ್ ಅವರನ್ನು ಆರೋಪಿಯನ್ನಾಗಿ ಮಾಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೆಳ ನ್ಯಾಯಾಲಯದಲ್ಲಿ ಜಾಮೀನು ದೊರೆಯದಿದ್ದ ಕಾರಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಹೈಕೋರ್ಟಿನ ಮೊರೆ ಹೋಗಿ ಅಲ್ಲಿ ಶರತ್ತು ಬದ್ದ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಆರು ಆರೋಪಿಗಳಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಉಚ್ಛ ನ್ಯಾಯಾಲಯದಲ್ಲಿ ಜಾಮೀನು ದೊರಕುತ್ತಿದ್ದಂತೆ ಹತ್ಯೆಯಾದ ಭರತನ ತಾಯಿ ಪಾರ್ವತಿ, ತನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಲು ಟೊಂಕ ಕಟ್ಟಿದ್ದು, ಕಡು ಬಡತನದಲ್ಲಿ ಬೇಯುತ್ತಿರುವ ಭರತನ ತಾಯಿ ಪಾರ್ವತಿ ಆರೋಪಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಪಾರ್ವತಿಯವರ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಜಾಮೀನು ವಜಾಗೊಳಿಸಿ ಆದೇಶ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಸಂತ್ರಸ್ಥೆ ಪಾರ್ವತಿ ಪರ ಸುಪ್ರೀಂ ಕೋರ್ಟ್ ವಕೀಲ ಚಂದ್ರಶೇಖರ್ ವಾದ ಮಂಡಿಸಿದ್ದರು. ಹತ್ಯಾ ಪ್ರಕರಣಗಳಲ್ಲಿ ರಾಜಕೀಯ ಪ್ರಭಾವ, ವಕೀಲರ ದಿಟ್ಟ ವಾದಗಳಿಂದ ಹೇಗೂ ಜಾಮೀನು ಪಡೆದು ಯಾವುದೇ ಪಾಪ ಪ್ರಜ್ಞೆಯಿಲ್ಲದಂತೆ ಹಾಯಾಗಿರಬಹುದೆಂದು ಆರೋಪಿಗಳು ಸ್ವಚ್ಛಂದವಾಗಿರುವಾಗಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ಜಾಮೀನು ರದ್ದಾಗಿರುವುದರ ಮೂಲಕ ಹೆತ್ತ ಕರುಳನ್ನು ಬರ್ಬರವಾಗಿ ಕಳೆದುಕೊಂಡ ಸಂತ್ರಸ್ಥೆಗೆ ನ್ಯಾಯ ದೊರಕಿರುವ ಅಪರೂಪದ ಪ್ರಕರಣ ಇದಾಗಿದೆ.