ಕೆಜಿಎಫ್ ತಾಲ್ಲೂಕಿನ ಪ್ರತಿಕುಟುಂಬಕ್ಕೂ ಶೂನ್ಯಬಡ್ಡಿ ಸಾಲ ತಾಯಂದಿರನ್ನು ಶೋಷಣೆ ಮುಕ್ತಗೊಳಿಸಲು ಸಂಕಲ್ಪ-ರೂಪಕಲಾ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಕೆಜಿಎಫ್ ತಾಲ್ಲೂಕಿನ ಪ್ರತಿಕುಟುಂಬಕ್ಕೂ ಶೂನ್ಯಬಡ್ಡಿ ಸಾಲ
ತಾಯಂದಿರನ್ನು ಶೋಷಣೆ ಮುಕ್ತಗೊಳಿಸಲು ಸಂಕಲ್ಪ-ರೂಪಕಲಾ

 

 

 

 

ಕೆಜಿಎಫ್:- ಬಡಜನರೇ ಹೆಚ್ಚಿರುವ ಕೆಜಿಎಫ್ ತಾಲ್ಲೂಕಿನ ಪ್ರತಿಕುಟುಂಬಕ್ಕೂ ಶೂನ್ಯ ಬಡ್ಡಿ ಸಾಲ ಸಿಗುವಂತೆ ಮಾಡಿ ಶೋಷಣೆಯಿಂದ ಮುಕ್ತಗೊಳಿಸಲು ಸಂಕಲ್ಪ ಮಾಡಿರುವುದಾಗಿ ಶಾಸಕರೂ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರೂಪಕಲಾ ಶಶಿಧರ್ ತಿಳಿಸಿದರು.
ಮಂಗಳವಾರ ಕೆಜಿಎಫ್ ಡಿಸಿಸಿ ಬ್ಯಾಂಕ್ ಶಾಖೆಯ ಆವರಣದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ 48 ಲಕ್ಷರೂಗಳ ಶೂನ್ಯಬಡ್ಡಿ ಸಾಲವನ್ನು ಹರಿಸಿನ,ಕುಂಕುಮ,ಹೂ,ತಾಂಬೂಲದೊಂದಿಗೆ ವಿತರಿಸಿ ಅವರು ಮಾತನಾಡುತ್ತಿದ್ದರು.
ನಾನು ಸುಳ್ಳು ಹೇಳಿ ರಾಜಕೀಯ ಮಾಡಲು ಕೆಜಿಎಫ್‍ಗೆ ಬರಲಿಲ್ಲ, ರಾಜಕೀಯ ಜೀವನದಲ್ಲಿ ಇರುವವರೆಗೂ ಪ್ರಾಮಾಣಿಕ ಸೇವೆಯೇ ನನ್ನ ಗುರಿಯಾಗಿದೆ, ಬಡವರು,ತಾಯಂದಿರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾವಲಂಬಿ ಬದುಕಿಗೆ ದಾರಿ ತೋರುವ ನನ್ನ ಪ್ರಯತ್ನ ಮುಂದುವರೆಯುತ್ತದೆ ಎಂದರು.
ನನ್ನನ್ನು ಆಶೀರ್ವದಿಸಿ ಶಾಸಕರನ್ನಾಗಿ ಮಾಡಿದ್ದೀರಿ, ನಿಮಗೆ ಮೋಸ ಮಾಡುವುದಿಲ್ಲ,ನೀವು ನನ್ನ ಕುಟುಂಬವಿದ್ದಂತೆ ನಿಮ್ಮ ಹಿತ ಕಾಯುವ ಕಾರ್ಯದಲ್ಲಿ ಆತ್ಮವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುತ್ತೇನೆ ಎಂದರು.
ಮೀಟರ್ ಬಡ್ಡಿದಂಧೆ ವಿರುದ್ದ ನನ್ನ ಹೋರಾಟ ನಿರಂತರ ಎಂದ ಅವರು ತಾಯಂದಿರ ಸ್ವಾವಲಂಬಿ ಬದುಕಿಗೆ ನನ್ನ ಪ್ರಯತ್ನ ಮುಂದುವರೆಸಿದ್ದೇನೆ, ಡಿಸಿಸಿ ಬ್ಯಾಂಕಿನಿಂದ ಶೂನ್ಯಬಡ್ಡಿ ಸಾಲ ಸೌಲಭ್ಯ ನೀಡುತ್ತಿದ್ದು, ತಾಯಂದಿರುವ ಸಮರ್ಪಕ ಮರುಪಾವತಿ ಮೂಲಕ ನಂಬಿಕೆ ಉಳಿಸಿಕೊಳ್ಳಬೇಕು ಎಂದರು.
ಶೇ.95ಕ್ಕೂ ಹೆಚ್ಚಿನ ತಾಯಂದಿರು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ವಾಪಸ್ಸು ಮಾಡುತ್ತಿದ್ದಾರೆ ಎಂದ ಅವರು, ಸಾಲ ಮನ್ನಾ ಆಗುತ್ತದೆ ಎಂಬ ಅಪಪ್ರಚಾರಕ್ಕೆ ಕಿವಿಗೊಡದಿರಿ ಎಂದು ಕಿವಿಮಾತು ಹೇಳಿದರು.
ಸಾಲಮನ್ನಾ ಎಂಬ ಸುಳ್ಳು ಸುದ್ದಿ ಹಬ್ಬಿಸುವವರು ನಿಮಗೆ ಮುಂದಿನ ದಿನಗಳಲ್ಲಿ ಶೂನ್ಯ ಬಡ್ಡಿ ಸಾಲ ಸಿಗದಂತೆ ಮಾಡಿ ಮತ್ತೆ ಮೀಟರ್ ಬಡ್ಡಿಗೆ ದಾಸರಾಗುವಂತೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಎಚ್ಚರಿಸಿದರು.
ಡಿಸಿಸಿ ಬ್ಯಾಂಕ್ ಬಡ್ಡಿ ಹಾಕದೇ ಸಾಲ ನೀಡುತ್ತಿರುವುದರಿಂದ ಸಾಲ ಮನ್ನಾದ ಪ್ರಶ್ನೆಯೇ ಬರುವುದಿಲ್ಲ, ಅಂತಹ ವದಂತಿಗಳಿಗೆ ಕಿವಿಗೊಡದಿರಿ, ಸಾಲದ ಕಂತುಗಳು ನಿಗಧಿತ ಸಮಯಕ್ಕೆ ಮರುಪಾವತಿ ಮಾಡದಿದ್ದರೆ ನಿಮ್ಮ ಸಾಲಕ್ಕೆ ಬಡ್ಡಿ ಬೀಳುತ್ತದೆ ಎಂದು ತಿಳಿಸಿದರು.

ಗೃಹಬಳಕೆವಸ್ತು ಸುಲಭ ಕಂತಿನಲ್ಲಿ

ತಾಯಂದಿರಿಗೆ ಶೂನ್ಯ ಬಡ್ಡಿದರದಲ್ಲಿ ಗೃಹೋಪಯೋಗಿ ಸಲಕರಣೆಗಳಾದ ಕುಕ್ಕರ್,ಫ್ಯಾನ್,ವಾಷಿಂಗ್ ಮಿಷಿನ್,ಫ್ರಿಡ್ಜ್ ಮತ್ತಿತರವುಗಳನ್ನು ಕಂಪನಿ ದರದಲ್ಲಿ ಮತ್ತು ಬಡ್ಡಿರಹಿತವಾಗಿ ಕಂತುಗಳ ರೂಪದಲ್ಲಿ ತಲುಪಿಸಲು ಡಿಸಿಸಿ ಬ್ಯಾಂಕ್ ಯೋಜನೆ ಜಾರಿಗೆ ತಂದಿದೆ ಎಂದರು.
ತಾಯಂದಿರು ಸಮರ್ಪಕ ಸಾಲ ಮರುಪಾವತಿಯಿಂದ ನಂಬಿಕೆ ಉಳಿಸಿಕೊಂಡಲ್ಲಿ ಅವರಿಗೆ ಸುಲಭ ಬಡ್ಡಿರಹಿತ ಕಂತಿನಲ್ಲಿ ಈ ಗೃಹೋಪಯೋಗಿ ಸಲಕರಣೆಗಳು ಸಿಗಲಿದೆ ಎಂದು ತಿಳಿಸಿದರು.
ಈಗಾಗಲೇ ಡಿಸಿಸಿ ಬ್ಯಾಂಕ್ ಸೊಸೈಟಿಗಳ ಮೂಲಕ ಈ ಉಪಕರಣಗಳನ್ನು ಬಡ್ಡಿರಹಿತ ಕಂತಿನ ರೂಪದಲ್ಲಿ ಒದಗಿಸುತ್ತಿದೆ, ಇದರ ಪ್ರಯೋಜನ ನೀವು ಪಡೆಯುವಂತಾಗಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾರಾಯಣರೆಡ್ಡಿ, ವ್ಯವಸ್ಥಾಪಕ ಮಂಜುನಾಥ್ ಮತ್ತಿತರಿದ್ದರು.