ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೆಜಿಎಫ್ : ಕೊರೋನಾ ಲಾಕ್‍ಡೌನ್ ಹಿನ್ನೆಲೆ ಗಡಿಭಾಗಗಳಲ್ಲಿ ಸಿಸಿಟಿವಿ, ಡಿಜಿಟಲ್, ಹ್ಯಾಂಡಿ ಕ್ಯಾಮೆರಾ ಕಣ್ಗಾವಲು
ಕೆಜಿಎಫ್., ಏ. 19 : ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಮೇ.3ರ ತನಕ ಲಾಕ್‍ಡೌನ್ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು, ಈ ಸಂಬಂಧ ಕೆಜಿಎಫ್ ಪೊಲೀಸ್ ಜಿಲ್ಲೆಯ ಅಂತರರಾಜ್ಯ ಗಡಿ ಚೆಕ್‍ಪೋಸ್ಟ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಡಿಜಿಟಲ್ ಕ್ಯಾಮೆರಾ, ಹ್ಯಾಂಡಿ ಕ್ಯಾಮೆರಾ ಮತ್ತು ವಾಯಿಸ್‍ರೆಕಾರ್ಡರ್‍ಗಳÀನ್ನು ಅಳವಡಿಸಿದ್ದು, ಅಂತರರಾಜ್ಯಗಳಿಂದ ಬರುವವರು, ಹೋಗುವವರು ಅನಾವಶ್ಯಕ ವಾಹನಗಳ, ಜನಸಾಮಾನ್ಯರ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದ್ದಾರೆ.
ಮುಂದುವರೆದಂತೆ, ಕೆಜಿಎಫ್ ಪೊಲೀಸ್ ಜಿಲ್ಲೆಯು ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಗಡಿ ಭಾಗದಲ್ಲಿದ್ದು, ಅಂತರರಾಜ್ಯ ವಾಹನಗಳು ಯಾವುದೂ ಒಳಬರದಂತೆ, ಹೊರಹೋಗದಂತೆ ತಪಾಸಣೆ ನಡೆಸಲು ಹೆಚ್ಚಿನ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ, ಚೆಕ್‍ಪೋಸ್ಟ್‍ಗಳ ಸ್ಥಾಪಿಸಿದ್ದು. ಕಣ್ಗಾವಲಿಗಾಗಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕೆಜಿಎಫ್ ಸರಹದ್ದಿನ ರಾಜ್‍ಪೇಟ್‍ರೋಡ್, ವೆಂಕಟಾಪುರ, ಕೆಂಪಾಪುರ, ಜಕ್ಕರಸಕುಪ್ಪ, ತೊಪ್ಪನಹಳ್ಳಿ, ದೊಡ್ಡಪೊನ್ನಾಂಡಹಳ್ಳಿ, ಮರಾಠಹೊಸಹಳ್ಳಿ ಸೇರಿದಂತೆ ಇತರೆ ಕಡೆಗಳಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿದ್ದು, 24 ಗಂಟೆಗಳ ಕಾಲ ನಿರಂತರವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಿವೈಎಸ್ಪಿ ಬಿ.ಕೆ.ಉಮೇಶ್ ಅವರ ನೇತೃತ್ವದಲ್ಲಿ ಹಲವಾರು ತಂಡಗಳನ್ನು ರಚಿಸಲಾಗಿದ್ದು, ಕೆಜಿಎಫ್ ಪೊಲೀಸ್ ಜಿಲ್ಲೆಯ ಗಡಿಭಾಗಗಳಾದ ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ ನಿರ್ಮಿಸಿರುವ ಚೆಕ್‍ಪೋಸ್ಟ್‍ಗಳನ್ನು ನಿರಂತರವಾಗಿ ಇವರ ಜೊತೆಗೆ ಹೆಚ್ಚುವರಿಯಾಗಿ ಸ್ಥಳೀಯ ನಿರೀಕ್ಷಕರು ಡಿಸಿಆರ್‍ಬಿ, ಆರ್‍ಪಿಐ ಕೆ.ಜಿ.ಎಫ್ ಮತ್ತು ನಿಸ್ತಂತು ವಿಭಾಗದ ನಿರೀಕ್ಷಕರು ರವರು ಗಡಿಯಲ್ಲಿ ಪರಿಶೀಲನೆ ನಡೆಸುತ್ತಿರುತ್ತಾರೆ.
ಅನಾವಶ್ಯಕ ಜನಸಾಮಾನ್ಯರ ಹಾಗೂ ವಾಹನಗಳ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದ್ದು, ವಿನಾಕಾರಣ ವಾಹನಗಳಲ್ಲಿ ಓಡಾಡುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ.
ಸಾರ್ವಜನಿಕರು ಸರ್ಕಾರದ ಆದೇಶಕ್ಕೆ ಬದ್ದರಾಗಿ ಕಡ್ಡಾಯವಾಗಿ ಮನೆಯಲ್ಲಿಯೇ ಇದ್ದು ಸುರಕ್ಷಿತರಾಗಿರಲು ಜಿಲ್ಲಾ ಎಸ್‍ಪಿ ಮೊಹಮ್ಮದ್ ಸುಜೀತ ಅವರು ಕರೆ ನೀಡಿದ್ದಾರೆ.